
ದೊಡ್ಡಬಳ್ಳಾಪುರ: ಕನ್ನಡದಲ್ಲಿ ಅಪಾರ ಜ್ಞಾನ ಭಂಡಾರವಿದ್ದು, ಇದನ್ನು ಬಳಸಿಕೊಳ್ಳುವ ಮೂಲಕ ಕನ್ನಡದ ಅಸ್ಮಿತೆ ಎತ್ತಿಹಿಡಯಬೇಕಿದೆ. ವ್ಯವಹಾರಿಕವಾಗಿ ಕನ್ನಡ ಬಳಕೆ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ನಟ ಹಾಗೂ ನಿರ್ದೇಶಕ ಟಿ.ಎನ್.ಸೀತಾರಾಂ ಹೇಳಿದರು.
ತಾಲ್ಲೂಕು ವಕೀಲರ ಸಂಘದಿಂದ ನ್ಯಾಯಾಲಯದ ಆವರಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ, ವಕೀಲರ ದಿನಾಚರಣೆ ಹಾಗೂ ಕನಕದಾಸ ಜಯಂತಿಯಲ್ಲಿ ಮಾತನಾಡಿದರು.
ಕನ್ನಡದಲ್ಲಿ ಮಹಾನ್ ಕವಿಗಳು ಬರೆದಿರುವ ಉತ್ಕೃಷ್ಟವಾದ ಸಾಹಿತ್ಯ ಸಂಪತ್ತು ಇದೆ. ನಮ್ಮ ಸಂವೇದನೆಗಳಿಗೆ ಮೊದಲು ಬರುವ ಅಭಿವ್ಯಕ್ತಿ ಭಾಷೆ ಕನ್ನಡ. ಕನ್ನಡ ಭಾಷೆಯನ್ನೇ ನಾವು ಹೆಚ್ಚು ಬಳಸಬೇಕು. ನಾಡು ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ದೊಡ್ಡಬಳ್ಳಾಪುರದಲ್ಲಿ ನಾಲ್ಕು ವರ್ಷಗಳ ಕಾಲದ ವಕೀಲಿ ವೃತ್ತಿಯ ದಿನಗಳನ್ನು ಮೆಲುಕು ಹಾಕಿದರು. ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ನಿರ್ಮಲ ಮಾತನಾಡಿ, ಕನ್ನಡ ಓದುವುದು ಮಾತನಾಡುವುದನ್ನು ಕೇಳರಿಮೆ ಎಂಬ ಭಾವನೆ ಬಹಳಷ್ಟು ಜನರಲ್ಲಿ ಇರುವುದು ವಿಷಾದನೀಯ. ಎಲ್ಲ ಭಾಷೆಗಳನ್ನು ಕಲಿಯುವುದರ ಜೊತೆಗೆ ಮಾತೃ ಭಾಷೆ ಕನ್ನಡದ ಮೇಲೆ ಪ್ರೀತಿ ಇರಬೇಕು. ರಾಜ್ಯೋತ್ಸವ ಒಂದು ದಿನಕ್ಕೆ, ಒಂದು ತಿಂಗಳ ಮಟ್ಟಿಗೆ ಸೀಮಿತವಾಗಬಾರದು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಚ್.ಎ.ಶಿಲ್ಪ ಮಾತನಾಡಿ, ನಮ್ಮ ಮಕ್ಕಳಿಗೆ ಮೊದಲ ಭಾಷೆ ಕನ್ನಡವಾಗಬೇಕು ನಂತರ ಇತರ ಭಾಷೆಗಳಿಗೆ ಆದ್ಯತೆ ಕೊಡಬೇಕು ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ರೇಣುಕಾಮೂರ್ತಿ, 1ನೇ ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಪ್ರವೀಣ್ ಆರ್.ಜೆ.ಎಸ್, ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ದಾಸರಿ ಕ್ರಾಂತಿಕಿರಣ್, ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಪ್ರೀತಿ, ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ರವಿ ಬೆಟಗಾರ್, ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಕನಕರಾಜು, ಉಪಾಧ್ಯಕ್ಷ ಕೆ.ಜಗನ್ನಾಥ್, ಖಜಾಂಚಿ ಆರ್.ಗೀತಾ, ಜಂಟಿ ಕಾರ್ಯದರ್ಶಿ ಜಿ.ಸಿ.ನರಸಿಂಹಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.