
ಬಿಡದಿ: ‘ರೈತರ ಒಂದಿಂಚೂ ಭೂಮಿ ವಶಪಡಿಸಿಕೊಳ್ಳಲು ಬಿಡುವುದಿಲ್ಲ. ನಿಮ್ಮ ಭೂಮಿ ಉಳಿಸುವುದು ನನ್ನ ಜವಾಬ್ದಾರಿ. ಯಾರೇನೇ ಒತ್ತಡ ಹಾಕಿದರೂ ಬಾಗಬೇಡಿ. ಸಾಯುವವರೆಗೆ ನಿಮ್ಮ ಜೊತೆಗಿದ್ದು ಹೋರಾಡುವೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರೈತರಿಗೆ ಭರವಸೆ ನೀಡಿದರು.
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ, ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಂಘದ ನೇತೃತ್ವದಲ್ಲಿ ಭೈರಮಂಗಲದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾನುವಾರ ಪಾಲ್ಗೊಂಡು ಅವರು ಮಾತನಾಡಿದರು.
‘ಬಿಡದಿಯ ಈಗಲ್‌ಟನ್ ರೆಸಾರ್ಟ್‌ನವರು 77 ಎಕರೆ ಸರ್ಕಾರಿ ಜಮೀನು ಅತಿಕ್ರಮಣ ಮಾಡಿಕೊಂಡಿದ್ದಾರೆಂದು ಇದೇ ಕಾಂಗ್ರೆಸ್ ಸರ್ಕಾರ ಪ್ರತಿ ಎಕರೆಗೆ ₹13 ಕೋಟಿಯಂತೆ ₹982 ಕೋಟಿ ದಂಡ ವಿಧಿಸಿತ್ತು. ಈಗ ಉಪನಗರಕ್ಕೆ ಪ್ರತಿ ಎಕರೆಗೆ ಎರಡ್ಮೂರು ಕೋಟಿ ಪರಿಹಾರ ಕೊಡುತ್ತಾರಂತೆ. ಡಿಸಿಎಂ ಶಿವಕುಮಾರ್‌ಗೆ ನಿಜವಾಗಿಯೂ ಕಾಳಜಿ ಇದ್ದರೆ, ರೈತರಿಗೂ ಎಕರೆಗೆ ₹13 ಕೋಟಿ ಪರಿಹಾರ ಕೊಡಲಿ’ ಎಂದು ಸವಾಲು ಹಾಕಿದರು.
ಪರಿಹಾರ ಪಡೆಯುವುದಿಲ್ಲ: ‘ಯೋಜನೆ ವ್ಯಾಪ್ತಿಯ ಹೊಸೂರಿನಲ್ಲಿ ನನ್ನ ಪತ್ನಿ ಜಮೀನು ಖರೀದಿಸಿರುವುದು ನನಗೂ ಗೊತ್ತಿರಲಿಲ್ಲ. ಹೀಗಾಗಿ, ನಾವೂ ಯೋಜನೆಗೆ ಒಪ್ಪಿದ್ದೇವೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಅಲ್ಲೂ ನಮಗೆ ದೋಖಾ ಆಗಿದೆ. ಯಾವುದೇ ಕಾರಣಕ್ಕೂ ನಾವು ಭೂಮಿ ಕೊಡುವುದಿಲ್ಲ. ಇವರ ಪರಿಹಾರ ಪಡೆಯುವುದಿಲ್ಲ’ ಎಂದು ಎಚ್‌ಡಿಕೆ ಹೇಳಿದರು.
‘ಈಗಾಗಲೇ ಜಮೀನು ಕೊಡುವುದಾಗಿ ಒಪ್ಪಿರುವವರಿಗೂ ಬುದ್ದಿಮಾತು ಹೇಳಿ. ಅಂತಿಮ ಅಧಿಸೂಚನೆ ಬಳಿಕ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡೋಣ. ಈ ಭಾಗ ಕೆಂಪು ವಲಯವಾಗಿರುವುದರಿಂದ ಅಭಿವೃದ್ಧಿಗೆ ತಡೆಯಾಗಿದೆ ಎನ್ನುತ್ತಿದ್ದಾರೆ. ರೈತರಿಗೆ ಯಾವ ವಲಯ ಬೇಕೊ ಹೇಳಲಿ. ಅದನ್ನು ಮಾಡಿಸಿ ಕೊಡುವೆ’ ಎಂದು ಭರವಸೆ ನೀಡಿದರು.
ಮಣಿಯಲೇ ಬೇಕು:
‘ನೀವು ಯಾರೂ ಹೆದರಬೇಕಿಲ್ಲ. ನಿಮ್ಮ ಜತೆ ನಾನಿದ್ದೇನೆ. ಏನೇ ಬಂದರೂ ಹೆದರಿಸೋಣ. ಸರ್ಕಾರಗಳು ಬರುತ್ತವೆ ಹೋಗುತ್ತವೆ. ಆದರೆ ಜನ ಶಾಶ್ವತ. ಸರ್ಕಾರಗಳು ಜನಾಭಿಪ್ರಾಯಕ್ಕೆ ಮಣಿಯಬೇಕು. ಇಲ್ಲವಾದರೆ ಹೇಗೆ ಬುದ್ಧಿ ಕಲಿಸಬೇಕು ಎಂಬುದು ಜನರಿಗೆ ಗೊತ್ತಿದೆ’ ಎಂದು ಗುಡುಗಿದರು.
‘ನನ್ನ ಸಹೋದರಿಯರ ಕಣ್ಣಲ್ಲಿ ನೀರು ಬರುವುದು ಬೇಡ. ನಿಮ್ಮ ಕಣ್ಣೀರಿಗೆ ಕಾರಣರಾದವರಿಗೆ ತಕ್ಕ ಶಾಸ್ತಿ ಕಾದಿದೆ. 2028ಕ್ಕೆ ನಿಮ್ಮ ಶಕ್ತಿ ಏನೆಂಬುದನ್ನು ತೋರಿಸಿ. ಯಾವುದೇ ಕಾರಣಕ್ಕೆ ನಮ್ಮ ಒಗ್ಗಟ್ಟು ಒಡೆಯುವುದು ಬೇಡ. ರೈತರ ಒಗ್ಗಟಿಗೆ ಬೆಂಕಿ
ಹಾಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೆಲವರು ಸ್ವಾಧೀನದ ಪರವಾಗಿದ್ದಾರೆ. ಅದು ಒಳ್ಳೆಯದಲ್ಲ. ಸರ್ಕಾರ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಫಲವತ್ತಾದ ಭೂಮಿಯನ್ನು ಅಗ್ಗದ ಬೆಲೆಗೆ ವಶಪಡಿಸಿಕೊಳ್ಳಲು ಹೊರಟಿದೆ. ಕೆಲವರು ಈಗಾಗಲೇ ಬೇನಾಮಿಗಳ ಹೆಸರಿನಲ್ಲಿ ಲ್ಯಾಂಡ್ ಬ್ಯಾಂಕ್ ಮಾಡಿಕೊಂಡು ದರೋಡೆ ಮಾಡಲು ಹೊರಟಿದ್ದಾರೆ. ಅವರನ್ನು ಬೀದಿಯಲ್ಲಿ ನಿಲ್ಲಿಸುವ ದಿನಗಳು ದೂರವಿಲ್ಲ’ ಎಂದರು.
ಎಚ್ಚರಿಕೆ: ‘ಅಧಿಕಾರಿಗಳು ಮತ್ತು ಪೊಲೀಸರನ್ನು ಇಟ್ಟುಕೊಂಡು ದಬ್ಬಾಳಿಕೆ ಮಾಡುವುದು ಡಿಕೆ ಸಹೋದರರ ಹುಟ್ಟು ಗುಣ. ಯೋಜನೆ
ಬಗ್ಗೆ ಮಾತನಾಡಲು ಇಲ್ಲಿನ ಜಿಲ್ಲಾಧಿಕಾರಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಅಧಿಕಾರ ಯಾರಿಗೂ ಶಾಶ್ವತವಲ್ಲ. 2028ರಲ್ಲಿ ನಮ್ಮ ಸರ್ಕಾರ ಬರಲಿದೆ. ಆಗ ಜನರಿಗೆ ಕಣ್ಣೀರು ಹಾಕಿಸಿದವರಿಗೆ ಏನು ಮಾಡಬೇಕೆಂಬುದು ಗೊತ್ತಿದೆ’ ಎಂದು ಎಚ್ಚರಿಕೆ ನೀಡಿದರು.
‘ಯೋಜನೆಗೆ ಸರ್ಕಾರದ ಬಳಿ ಹಣವಿಲ್ಲ. ರೈತರಿಂದ ವಶಪಡಿಸಿಕೊಳ್ಳುವ ಜಮೀನು ಮಾರಿ ಹಣ ತರುವ ಆಲೋಚನೆ ಇವರದ್ದು. ಜನರಿಗೆ ಅನ್ಯಾಯವಾದಾಗ ಅವರ ಪರ ಮಾತನಾಡುವುದು ನನ್ನ ಚಪಲವಾದರೆ, ಡಿಕೆ ಸಹೋದರರಿಗೆ ಲೂಟಿ ಹೊಡೆಯುವುದೇ ಚಪಲ. ಇವರು ಮನೆಹಾಳರೇ ಹೊರತು ಉದ್ಧಾರ ಮಾಡುವವರಲ್ಲ’ ಎಂದು ವಾಗ್ದಾಳಿ ನಡೆಸಿದರು.
ಭೈರಮಂಗಲ ಕ್ರಾಸ್‌ನಿಂದ ಬೈಕ್ ರ‍್ಯಾಲಿ ಮೂಲಕ ಕುಮಾರಸ್ವಾಮಿ ಅವರನ್ನು ಪಕ್ಷದ ಕಾರ್ಯಕರ್ತರು ಹಾಗೂ ರೈತರು ಧರಣಿ ಸ್ಥಳಕ್ಕೆ ಕರೆ ತಂದರು. ‘ನಮ್ಮ ಭೂಮಿ, ನಮ್ಮ ಹಕ್ಕು’, ‘ಜೀವ ಕೊಟ್ಟೆವು, ಭೂಮಿ ಬಿಡೆವು’ ಘೋಷಣೆಗಳು ಮೊಳಗಿದವು.
ರಾಜ್ಯ ಸರ್ಕಾರವು ಸಾಮಾಜಿಕ ಪರಿಣಾಮ ವರದಿಯ ವಿನಾಯಿತಿ ಪಡೆದು ಬಿಡದಿ ಟೌನ್‌ಶಿಪ್ ಯೋಜನೆ ಜಾರಿಗೆ ಮುಂದಾಗಿದೆ. ಪೊಲೀಸರು ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ದರ್ಪದಿಂದ ರೈತರ ಜಮೀನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆಎ. ಮಂಜುನಾಥ್, ಮಾಜಿ ಶಾಸಕ
‘ರಾಮನಗರವೇ ಕೊನೆಯ ನೆಲೆ’
‘ರಾಮನಗರವೇ ನನ್ನ ಕರ್ಮಭೂಮಿ, ರಾಜಕೀಯ ನೆಲೆ. 2028ರಲ್ಲಿ ಬಿಜೆಪಿ-ಜೆಡಿಎಸ್ ನೇತೃತ್ವದ ರಾಮರಾಜ್ಯ ನಿರ್ಮಾಣದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಕಾರ್ಯಕರ್ತರು ಮತ್ತು ಜನರ ಅಭಿಲಾಷೆ ಮೇರೆಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕಾಯಿತು. ರಾಮನಗರವೇ ನನ್ನ ಅಂತಿಮ ರಾಜಕೀಯ ನೆಲೆ. ನನ್ನ ಜೀವನವೂ ಇಲ್ಲಿಯೇ ಮುಗಿಯಲಿದೆ’ ಎಂದು ಕುಮಾರಸ್ವಾಮಿ ಎಂದು ಸ್ಪಷ್ಟಪಡಿಸಿದರು.
‘ಕಾಂಗ್ರೆಸ್ ದುರಾಡಳಿತಕ್ಕೆ ಜನ ರೋಸಿ ಹೋಗಿದ್ದಾರೆ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಬರುವುದು ನಿಶ್ಚಿತ. ಎರಡೂ ಪಕ್ಷಗಳು ಈ ಕೆಟ್ಟ ಸರ್ಕಾರ ಕಿತ್ತೊಗೆಯಲು ಒಟ್ಟಾಗಿ ಕೆಲಸ ಮಾಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಜೆಡಿಎಸ್ ಗೆಲ್ಲುವುದಿಲ್ಲ, ಬಿಜೆಪಿ ಕೂಡ ಗೆಲ್ಲುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌ಡಿಕೆ, ‘ಅವರು ಹಾಗೆ ಹೇಳಿದ್ದಾರೆ ಎಂದರೆ ನಾವು ತಪ್ಪದೇ ಅಧಿಕಾರಕ್ಕೆ ಬರುತ್ತೇವೆ. ಹಿಂದೆ ನಮ್ಮಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದಿದ್ದರು. 2018ರಲ್ಲಿ ಅವರೇ ನಮ್ಮ ಮನೆ ಬಾಗಿಲಿಗೆ ಬಂದರು. ನಾನು ಸಿಎಂ ಆದೆ. ಈಗಲೂ ಅಷ್ಟೇ. ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.