ADVERTISEMENT

ರಸ್ತೆ ಸುರಕ್ಷತೆ, ಆರ್ಥಿಕ ಭದ್ರತೆಗೆ ‘ಸ್ವಯಂ ಬೋಲ್ಟ್‌’

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 15:55 IST
Last Updated 11 ಜನವರಿ 2025, 15:55 IST
ಸ್ವಯಂ ಬೋಲ್ಟ್‌ ಸಾಫ್ಟ್‌ವೇರ್‌ ಅಭಿವೃದ್ಧಿ ಕಾರ್ಯದಲ್ಲಿ ನಿರತರಾಗಿರುವ ಲಲಿತ್‌ ಸಾಯಿ
ಸ್ವಯಂ ಬೋಲ್ಟ್‌ ಸಾಫ್ಟ್‌ವೇರ್‌ ಅಭಿವೃದ್ಧಿ ಕಾರ್ಯದಲ್ಲಿ ನಿರತರಾಗಿರುವ ಲಲಿತ್‌ ಸಾಯಿ   

ಆನೇಕಲ್: ಇನ್ನೂ ಆಟ, ಪಾಠದಲ್ಲಿ ತೊಡಗಿಸಿಕೊಳ್ಳುವ ವಯಸ್ಸಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಸಮಾಜಕ್ಕೆ ಸವಾಲಾಗಿರುವ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ‘ಸ್ವಯಂ ಬೋಲ್ಟ್‌' ಎಂಬ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದಾನೆ.

ಸಾಂದೀಪನಿ ಅಕಾಡೆಮಿ ಫಾರ್‌ ಎಕ್ಸ್‌ಲೆನ್ಸ್‌ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ಎಸ್‌.ಲಲಿತ್‌ ಸಾಯಿ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ ವಿದ್ಯಾರ್ಥಿ.

ಆನೇಕಲ್‌ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದ ಸುರೇಶ್‌ ಮತ್ತು ಸುಜಾತ ದಂಪತಿ ಪುತ್ರನಾದ ಸಾಯಿ ಒಂದು ವರ್ಷದಿಂದ ‘ಸ್ವಯಂ ಬೋಲ್ಟ್‌’ ಪರಿಕಲ್ಪನೆ ಮತ್ತು ತಂತ್ರಾಂಶ ಅಭಿವೃದ್ಧಿ ಸಂಶೋಧನೆಯಲ್ಲಿ ತೊಡಗಿದ್ದ. ಜೈಪುರದ ಕೋಡರ್‌ಗಳಾದ ರಿತಿಕ್‌ ಮತ್ತು ರಿಷಿ ಅವರಿಂದ ಕೋಡಿಂಗ್‌ ನೆರವು ಪಡೆದಿದ್ದಾನೆ. 

ADVERTISEMENT

ತಾನು ಅಭಿವೃದ್ಧಿಪಡಿಸಿದ ತಂತ್ರಾಂಶದ ಬಗ್ಗೆ ‘ಲಿಂಕ್ಡ್‌ ಇನ್‌’ ತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದ. ಅದಾಗಲೇ ಕೆಲವು ದೇಶೀ ಮತ್ತು ಅಂತರರಾಷ್ಟ್ರೀಯ ಕಂಪನಿ, ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು ಒಡಂಬಡಿಕೆಗೆ ಆಸಕ್ತಿ ತೋರಿವೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ) ಬೆಂಗಳೂರಿನಲ್ಲಿ ಆಯೋಜಿಸಿರುವ ‘ಪ್ರಯಾಸ್‌ ಯುವ ವಾಣಿಜೋದ್ಯಮಿ ಸ್ಪರ್ಧೆ’ ಅಂತಿಮ ಸುತ್ತು ಮತ್ತು ಐಐಟಿ ಕಾನ್ಪುರ ಆಯೋಜಿಸಿರುವ ‘ಉದ್ಯಮಶೀಲತೆ ಇ-ಸೆಲ್‌’ ಸ್ಪರ್ಧೆಯ ಎರಡನೇ ಸುತ್ತಿಗೆ ವಿದ್ಯಾರ್ಥಿ ಆಯ್ಕೆಯಾಗಿದ್ದಾನೆ.

ಮಾಲಿನ್ಯ ನಿಯಂತ್ರಣ, ವಾಹನ ದಟ್ಟಣೆ, ರಸ್ತೆ ಸುರಕ್ಷತೆ, ತೆರಿಗೆ ವಂಚನೆ, ಆರ್ಥಿಕ ಭದ್ರತೆ, ಸಾಲ ವಸೂಲು ಸೇರಿದಂತೆ ಸಾರ್ವಜನಿಕ ಮತ್ತು ಖಾಸಗಿ ಆಡಳಿತ ಸುಧಾರಣೆಗೆ ಈ ತಂತ್ರಾಂಶ ಪರಿಹಾರ ಒದಗಿಸಲಿದೆ. ಬಳಕೆದಾರರ ಸ್ನೇಹಿಯಾಗಿ ಈ ತಂತ್ರಾಂಶ ರೂಪಿಸಲಾಗಿದೆ. 

ಖಾಸಗಿ ಮತ್ತು ಸರ್ಕಾರಿ ವಲಯಗಳ ವಿವಿಧ ವಿಭಾಗ, ಸಾಮಾಜಿಕ ವ್ಯವಸ್ಥೆ, ಜನರ ಜೀವನದಲ್ಲಿ ಸುಧಾರಣೆ ತರಬೇಕು ಮತ್ತು ದೈನಂದಿನ ಜೀವನದಲ್ಲಿ ತಂತ್ರಜ್ಞಾನದ ಮಹತ್ವ ಹೆಚ್ಚಿಸುವ ಉದ್ದೇಶದಿಂದ ಈ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ ಎನ್ನುವುದು ಸಾಯಿ ವಿವರಣೆ.

ಐದಾರು ತಿಂಗಳಲ್ಲಿ ವಿವಿಧ ವಾಹನಗಳಿಗೆ ಪ್ರಾಯೋಗಿಕವಾಗಿ ‘ಸ್ವಯಂ ಬೋಲ್ಟ್‌’ ಸಾಧನ ಅಳವಡಿಸಲಾಗಿದೆ. ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಈ ಸಾಧನದ ನೆರವಿನಿಂದ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾನೆ.

ತೆರಿಗೆ ಪಾವತಿಸದಿದ್ದರೆ ವಾಹನ ಲಾಕ್‌:

ದೇಶದ ಆರ್ಥಿಕತೆ, ಪರಿಸರ ರಕ್ಷಣೆಯಲ್ಲೂ ಈ ಸಾಫ್ಟ್‌ವೇರ್‌ ಮಹತ್ವದ ಪಾತ್ರ ನಿರ್ವಹಿಸಲಿದೆ. ವಾಣಿಜ್ಯ ವಾಹನ ರಸ್ತೆ ತೆರಿಗೆ ಸಂಗ್ರಹ ಬಲಪಡಿಸಬಹುದಾಗಿದೆ. ವರದಿಯೊಂದರ ಪ್ರಕಾರ 12-13 ಲಕ್ಷ ವಾಣಿಜ್ಯ ವಾಹನ ಸಕಾಲಕ್ಕೆ ತೆರಿಗೆ ಪಾವತಿಸಲ್ಲ. ಇದರಿಂದಾಗಿ ವಾರ್ಷಿಕ ₹30ಸಾವಿರ ಕೋಟಿ ತೆರಿಗೆ ಸಂಗ್ರಹ. ಖೊತಾ ಆಗುತ್ತಿದೆ. ತೆರಿಗೆ ಪಾವತಿಸದ ವಾಹನಗಳನ್ನು ತಂತ್ರಾಂಶದಿಂದ ಆಟೊಮ್ಯಾಟಿಕ್‌ ಲಾಕ್‌ ಮಾಡಬಹುದು. 

ಬ್ಯಾಂಕಿಂಗ್‌ ವಲಯ ಮತ್ತು ಪೊಲೀಸ್‌ ಇಲಾಖೆಗೂ ಈ ತಂತ್ರಾಂಶ ಉಪಯುಕ್ತವಾಗಲಿದೆ. ದೇಶದಲ್ಲಿ 4.50 ಲಕ್ಷ ಸುಸ್ತಿದಾರರು ವಾಹನ ಸಾಲ ಬಾಕಿ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಬ್ಯಾಂಕುಗಳಿಗೆ ಅಂದಾಜು ₹3.50 ಲಕ್ಷ ಕೋಟಿಗೂ ಹೆಚ್ಚು ವಾಹನ ಸಾಲ ಬಾಕಿ ಉಳಿದುಕೊಂಡಿದೆ. ಸಾಲ ಮರುಪಾವತಿಸದ ವಾಹನಗಳನ್ನು ತಂತ್ರಾಂಶದ ನೆರವಿನಿಂದ ಟ್ರ್ಯಾಕ್‌ ಮಾಡಿ ಲಾಕ್‌ ಮಾಡಬಹುದು. ವಾಹನಗಳ ಲಾಕ್‌ಗೂ ಮೊದಲು ವಾಹನ ಮಾಲೀಕರಿಗೆ ಸೂಚನೆ ಹೋಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಳ್ಳರು ಅಥವಾ ಅಪರಾಧಿಗಳು ಬಳಸುವ ವಾಹನಗಳನ್ನು ಲಾಕ್‌ ಮಾಡುವ ಜೊತೆಗೆ ಅವರ ಚಲನವಲನಗಳ ಮೇಲೆ ನಿಗಾ ಇಡಬಹುದು ಎನ್ನುತ್ತಾನೆ ಲಲಿತ್‌ ಸಾಯಿ.

ಕುಟುಂಬದ ಸದಸ್ಯರೊಂದಿಗೆ ಲಲಿತ್‌ ಸಾಯಿ
ಲಲಿತ್‌ ತಂತ್ರಜ್ಞಾನದ ಬಳಕೆಯ ಜೊತೆಗೆ ಓದಿನಲ್ಲೂ ಸದಾ ಮುಂದಿದ್ದಾನೆ. 9ನೇ ತರಗತಿಯಲ್ಲಿ ಶೇ.99ರಷ್ಟು ಅಂಕ ಪಡೆದು ಶಾಲೆಗೆ ಮೊದಲಿಗನಾಗಿದ್ದ. 10ನೇ ತರಗತಿಯಲ್ಲಿ ಓದಿನ ಜೊತೆಗೆ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದಾನೆ.
–ಸುರೇಶ್‌, ವಿದ್ಯಾರ್ಥಿಯ ತಂದೆ
ಶಿಕ್ಷಣದ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡಬೇಕು. ತಂತ್ರಜ್ಞಾನದ ಮಹತ್ವ ಹೆಚ್ಚಿಸಬೇಕು ಎನ್ನುವುದು ನನ್ನ ಗುರಿ. ಬಳಕೆದಾರರ ಸ್ನೇಹಿಯಾಗಿ ಈ ಸಾಫ್ಟ್‌ವೇರ್‌ ರೂಪಿಸಲಾಗಿದೆ. 
–ಲಲಿತ್‌ ಸಾಯಿ ಎಸ್‌., 10ನೇ ತರಗತಿ ವಿದ್ಯಾರ್ಥಿ

ಹೇಗೆ ಕೆಲಸ ಮಾಡುತ್ತದೆ?

‘ಸ್ವಯಂ ಬೋಲ್ಟ್‌’ ಲಲಿತ್‌ ಸಾಯಿ ಅವರ ಪರಿಕಲ್ಪನೆಯ ಸಾಫ್ಟ್‌ವೇರ್‌ ಮತ್ತು ವೆಬ್‌ಪೆಜ್‌. ಸ್ವಯಂ ಎಂದರೆ ಆಟೊಮ್ಯಾಟಿಕ್‌ ಮತ್ತು ಬೋಲ್ಟ್‌ ಎಂದರೆ ಲಾಕ್‌ ಎಂದರ್ಥ. ವಾಹನಗಳನ್ನು ಆಟೊಮ್ಯಾಟಿಕ್‌ ಆಗಿ ನಿಯಂತ್ರಿಸುವ 4.5 ಇಂಚಿನ ಸಾಧನವನ್ನು ವಾಹನಗಳ ಇಸಿಎಂಗೆ (ಎಂಜಿನ್‌ ಕಂಟ್ರೋಲ್‌ ಮಾಡ್ಯುಲ್‌) ಅಳವಡಿಸಲಾಗುತ್ತದೆ.

ದ್ವಿಚಕ್ರ ವಾಹನಗಳಲ್ಲಿ ಇಗ್ನಿಷನ್‌ಗೆ ಅಳವಡಿಸಲಾಗುತ್ತದೆ. ಈ ಸಾಧನವನ್ನು ಅಳವಡಿಸಿದ ನಂತರ ವಾಹನ ಚಲಾವಣೆ ನಿಯಂತ್ರಣವನ್ನು ಸಾಫ್ಟ್‌ವೇರ್‌ ಮತ್ತು ವೆಬ್‌ಪೇಜ್‌ ಮೂಲಕ ನಿಯಂತ್ರಿಸಬಹುದಾಗಿದೆ. ವಾಹನಗಳ ಮೇಲೆ ನಿಗಾ: ಸಂಚಾರ ದಟ್ಟನೆ ಮತ್ತು ವಾಯುಮಾಲಿನ್ಯ ಸಮಸ್ಯೆ ಪರಿಹಾರವಾಗಿ ದೆಹಲಿಯಲ್ಲಿ ಸಮ-ಬೆಸ ನಿಯಮ ಜಾರಿಯಲ್ಲಿದೆ. ಶೇ.30-40ರಷ್ಟು ಮಾಲೀಕರು ಸಮ-ಬೆಸ ನಿಯಮ ಪಾಲಿಸುತ್ತಿಲ್ಲ. ಕಟ್ಟುನಿಟ್ಟಿನ ಪಾಲನೆ ಮೇಲೆ ವಾಹನಗಳ ಮೇಲೆ ನಿಗಾಡಲು ಮತ್ತು ಟ್ರ್ಯಾಕಿಂಗ್‌ಗೆ ಈ ಸಾಧನ ಉಪಯುಕ್ತವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.