
ದೇವನಹಳ್ಳಿ: ವಿಮಾನ ನಿಲ್ದಾಣ ರಸ್ತೆಯಲ್ಲಿ ದಿನದ 24 ಗಂಟೆಯೂ ಸಾವಿರಾರು ವಾಹನಗಳ ಸಂಚಾರ ನಡೆಯುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ಸಂಚಾರ ಜಾಗೃತಿ ಮೂಡಿಸಲು ಯಮರಾಜ– ಚಿತ್ರಗುಪ್ತ ರಸ್ತೆಗೆ ಇಳಿದಿದ್ದರು. ನಿಯಮ ಪಾಲಿಸದಿದ್ದರೆ ಆಗುವ ದುಷ್ಪರಿಣಾಮವನ್ನು ವಾಹನ ಸವಾರರಿಗೆ ಮನದಟ್ಟು ಮಾಡಿದರು.
ವಾಹನ ಸವಾರರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲು ಯಮರಾಜ ಮತ್ತು ಚಿತ್ರಗುಪ್ತರ ವೇಷಧಾರಿಗಳು ವಿಮಾನ ನಿಲ್ದಾಣ ಟೋಲ್ ಪ್ಲಾಜಾ ಬಳಿ ರಸ್ತೆಗಿಳಿದು, ವಾಹನ ಸವಾರರಿಗೆ ಸಂಚಾರ ನಿಯಮಗಳ ಮಹತ್ವವನ್ನು ತಿಳಿಸಿದರು.
ಹೆಲ್ಮೆಟ್ ಧರಿಸದೇ ಅಥವಾ ಕಳಪೆ ಗುಣಮಟ್ಟದ ಹೆಲ್ಮೆಟ್ ಬಳಸಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ತಡೆದು, ಸುರಕ್ಷಿತ ಚಾಲನೆಯ ಬುದ್ಧಿವಾದ ಹೇಳಿದರು.
ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಬಳಿಕ ಯಲಹಂಕದಿಂದ ದೇವನಹಳ್ಳಿವರೆಗೆ ಇರುವ ರಸ್ತೆಯಲ್ಲಿ ಸಂಚಾರದ ದಟ್ಟಣೆ ಹೆಚ್ಚಾಗಿದ್ದು, ಅಪಘಾತಗಳ ಸಂಖ್ಯೆಯೂ ದಿನೇದಿನೇ ಏರಿಕೆಯಾಗುತ್ತಿದೆ. ಕಳೆದ ವರ್ಷ ಈ ಮಾರ್ಗದಲ್ಲಿ ನೂರಕ್ಕೂ ಅಧಿಕ ಗಂಭೀರ ಅಪಘಾತಗಳು ಸಂಭವಿಸಿದ್ದು, 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಶಿಷ್ಟ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಕಾರು ಚಾಲಕರು ಕಡ್ಡಾಯವಾಗಿ ಸೀಟ್‌ಬೆಲ್ಟ್ ಧರಿಸಬೇಕು ಹಾಗೂ ದ್ವಿಚಕ್ರ ವಾಹನ ಸವಾರರು ಮುಂಭಾಗ ಮತ್ತು ಹಿಂಭಾಗದ ಪ್ರಯಾಣಿಕರು ಐಎಸ್‌ಐ ಮಾನ್ಯತೆ ಪಡೆದ ಹೆಲ್ಮೆಟ್ ಬಳಸಿ ಸಂಚರಿಸಬೇಕು ಎಂದು ತಿಳಿಸಲಾಯಿತು. ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಬಿತ್ತಿಪತ್ರಗಳನ್ನು ವಾಹನ ಸವಾರರಿಗೆ ವಿತರಿಸಲಾಯಿತು.
ಏರ್‌ಪೋರ್ಟ್ ರಸ್ತೆಯಲ್ಲಿ ಹೆಚ್ಚುತ್ತಿರುವ ವೇಗ ಮತ್ತು ಅಪಘಾತ ತಡೆಯುವ ಸಲುವಾಗಿ ಎಐ ಕ್ಯಾಮೆರಾ ಸೇರಿದಂತೆ ಕಟ್ಟುನಿಟ್ಟಿನ ಸಂಚಾರ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೂ ಸವಾರರು ಎಚ್ಚೆತ್ತುಕೊಂಡು ಸುರಕ್ಷಿತ ಚಾಲನೆ ಪಾಲಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.