ADVERTISEMENT

ದೊಡ್ಡಬಳ್ಳಾಪುರ: ವೆಂಕಟಸುಬ್ಬಯ್ಯ, ಹೆಗಡೆಗೆ ನುಡಿನಮನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 3:21 IST
Last Updated 20 ಏಪ್ರಿಲ್ 2021, 3:21 IST
ದೊಡ್ಡಬಳ್ಳಾಪುರದ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯ ಹಾಗೂ ಪ್ರೊ.ಎಂ.ಎ.ಹೆಗಡೆ ಅವರಿಗೆ ನುಡಿನಮನ ಸಲ್ಲಿಸಲಾಯಿತು
ದೊಡ್ಡಬಳ್ಳಾಪುರದ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯ ಹಾಗೂ ಪ್ರೊ.ಎಂ.ಎ.ಹೆಗಡೆ ಅವರಿಗೆ ನುಡಿನಮನ ಸಲ್ಲಿಸಲಾಯಿತು   

ದೊಡ್ಡಬಳ್ಳಾಪುರ: ಕನ್ನಡದ ಹಿರಿಯ ಭಾಷಾ ವಿದ್ವಾಂಸ, ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹಾಗೂ ಭಾನುವಾರ ನಿಧನರಾದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅವರಿಗೆ ಇಲ್ಲಿನ ಶ್ರೀದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಹಾಗೂ ಪ್ರಥಮ ದರ್ಜೆ ಸಂಜೆ ಕಾಲೇಜುಗಳ ಆಶ್ರಯದಲ್ಲಿ ನುಡಿನಮನ ಕಾರ್ಯಕ್ರಮ ಸೋಮವಾರ ನಡೆಯಿತು.

ಮೌನಾಚರಣೆಯ ಮೂಲಕ ಅಗಲಿದ ಚೇತನಗಳಿಗೆಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಕನ್ನಡ ಭಾಷೆಯ ನಡೆದಾಡುವ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು, ಕನ್ನಡಕ್ಕೆ ಕೊಟ್ಟ ಕೊಡುಗೆ ಅಪಾರ. ಕನ್ನಡದ ಪದಕೋಶ, ನಿಘಂಟುಗಳನ್ನು ಸೃಷ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರತಿಯೊಂದು ಪದದ ಉಗಮ, ವಿಕಾಸ ಹಾಗೂ ಪ್ರಸ್ತುತ ಬಳಕೆಯ ಸಾಧ್ಯತೆಗಳ ಪರಿಪೂರ್ಣ ಅರಿವು ಅವರಿಗಿತ್ತು ಎಂದು ಸ್ಮರಿಸಿದರು.

ಇಗೋ ಕನ್ನಡ ಅಂಕಣದ ಮೂಲಕ ಕನ್ನಡ ಭಾಷೆಯ ಪದಗಳ ವಿಸ್ತಾರವನ್ನು ಕನ್ನಡದ ಓದುಗರಿಗೆ ಕಟ್ಟಿಕೊಟ್ಟ ಜೀವಿ ಅವರು ಭಾಷಾ ಬೋಧಕರಾಗಿ,ಭಾಷಾ ವಿಜ್ಞಾನಿಯಾಗಿ, ನಿಘಂಟು ರಚನಕಾರರಾಗಿ, ಶಬ್ದ-ಅರ್ಥ ಸಾಧ್ಯತೆಗಳನ್ನು ತರ್ಕಿಸುವ ಬುದ್ದಿಜೀವಿಯಾಗಿ ಭಾಷೆಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ADVERTISEMENT

ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎ.ಹೆಗಡೆ ಅವರು ಯಕ್ಷಗಾನ ಪ್ರಸಂಗಕರ್ತರಾಗಿ, ಕಲಾವಿದರಾಗಿ, ಕಲಾತಜ್ಞರಾಗಿ ಸಾಕಷ್ಟು ಹೆಸರು ಮಾಡಿದ್ದರು. ಪಡುವಲಪಾಯ ಹಾಗೂ ಮೂಡಲಪಾಯ ಯಕ್ಷಗಾನ ಪ್ರಸಂಗಗಳು, ಕೇಳಿಕೆ,ತಾಳ ಮದ್ದಲೆ ಇತ್ಯಾದಿಗಳಲ್ಲಿ ಅವರಿಗೆ ಇದ್ದ ಜ್ಞಾನ ಅಪಾಯ.ಯಕ್ಷಗಾನದ ಕುರಿತಾದ ಅವರ ಸುಮಾರು 20ಕ್ಕೂ ಹೆಚ್ಚು ಕೃತಿಗಳು ಕನ್ನಡ ಕಲಾಸಕ್ತರ ಜ್ಞಾನದಾಹವನ್ನು ತಣಿಸಿವೆ ಎಂದರು.

ಎನ್‍ಎಸ್‍ಎಸ್ ಅಧಿಕಾರಿ ಡಾ.ಎಂ.ಚಿಕ್ಕಣ್ಣ,ವಾಣಿಜ್ಯ ವಿಭಾಗ ಮುಖ್ಯಸ್ಥೆ ಪಿ.ಚೈತ್ರ ಸೇರಿದಂತೆ ವಿವಿಧ ವಿಭಾಗಗಳ ಸಹಾಯಕ ಪ್ರಾಧ್ಯಾಪಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.