ADVERTISEMENT

ತೂಬಗೆರೆ: ರಾಜಕೀಯ ಹಿತಾಸಕ್ತಿಗೆ ಬಲಿ

ದೇವನಹಳ್ಳಿ: ಹೋಬಳಿ ಹಿತರಕ್ಷಣಾ ಸಮಿತಿಯಿಂದ ಒಕ್ಕೊರಲ ಖಂಡನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 14:07 IST
Last Updated 16 ಡಿಸೆಂಬರ್ 2019, 14:07 IST
ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದ ಹಿತರಕ್ಷಣಾ ಸಮಿತಿ ಕಾರ್ಯಕರ್ತರು
ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದ ಹಿತರಕ್ಷಣಾ ಸಮಿತಿ ಕಾರ್ಯಕರ್ತರು   

ದೇವನಹಳ್ಳಿ: ಮಂಚೇನಹಳ್ಳಿ ನೂತನ ತಾಲ್ಲೂಕಿಗೆ ಸೇರ್ಪಡೆಗೊಳಿಸಲು ತೂಬಗೆರೆ ಹೋಬಳಿ ಬಲಿಪಶು ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ತೂಬಗೆರೆ ಹೋಬಳಿ ಹಿತರಕ್ಷಣಾ ಸಮಿತಿ ಒಕ್ಕೊರಲಿನಿಂದ ಖಂಡಿಸಿತು.

ಇಲ್ಲಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ರವಿಸಿದ್ದಪ್ಪ, ತೂಬಗೆರೆ ಹೋಬಳಿ ಮಂಚೇನಹಳ್ಳಿಗೆ ಸೇರಿದರೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಕಾಶೆಯೇ ಅಳಿಸಿಹೋಗಲಿದೆ. ಧಾರ್ಮಿಕ ಕೇಂದ್ರ ಘಾಟಿ, ಜೀವ ವೈವಿಧ್ಯಮಯ ಮಾಕಳಿದುರ್ಗ, ಜಕ್ಕಲಮಡಗು, ಐತಿಹಾಸಿಕ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಹಲವು ಪ್ರವಾಸಿ ತಾಣಗಳನ್ನು ಕಳೆದುಕೊಂಡು ದೊಡ್ಡಬಳ್ಳಾಪುರ ತಾಲ್ಲೂಕು ಬರಿದು ಮಾಡಿಕೊಳ್ಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ವೆಂಕಟರಮಣಪ್ಪ ಮಾತನಾಡಿ, ನಾಗರಿಕ ಸೌಲಭ್ಯ ಪಡೆಯಲು ಮತ್ತು ವಿವಿಧ ಇಲಾಖೆಯಲ್ಲಿನ ಅವಶ್ಯ ದಾಖಲಾತಿ ಪಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲೆ ಚಪ್ಪರದ ಕಲ್ಲು ಬಳಿಯಿರುವ ಜಿಲ್ಲಾಡಳಿತ ಭವನದಲ್ಲಿ 38 ಜಿಲ್ಲಾಮಟ್ಟದ ಇಲಾಖೆಗಳಿವೆ. ಪ್ರಸ್ತುತ ಜಿಲ್ಲಾಡಳಿತ ಭವನದಿಂದ ಐದಾರು ಕಿ.ಮೀ ವ್ಯಾಪ್ತಿಯಲ್ಲಿ ತೂಬಗೆರೆ ಹೋಬಳಿ ಇದೆ. ಈ ಹೋಬಳಿಯನ್ನು ಮಂಚೇನಹಳ್ಳಿಗೆ ಸೇರಿಸಿದರೆ ಪ್ರತಿಯೊಂದು ಸೌಲಭ್ಯಗಳಿಗೆ 25ಕಿ.ಮೀಗೂ ಹೆಚ್ಚು ದೂರವಿರುವ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಕ್ಕೆ ಸಾರ್ವಜನಿಕರು ಅಲೆಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸಮಿತಿ ಉಪಾದ್ಯಕ್ಷ ಎಂ.ಮುನೇಗೌಡ ಮಾತನಾಡಿ, ಉಪಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಏಕೈಕ ಉದ್ದೇಶದಿಂದ ಮಂಚೇನಹಳ್ಳಿ ಹೋಬಳಿಯನ್ನು ತಾಲ್ಲೂಕು ಕೇಂದ್ರ ರಚನೆ ಘೋಷಣೆ ಮಾಡಲಾಗಿದೆ. ಈ ರಾಜಕೀಯ ಹಿತಾಸಕ್ತಿಗೆ ಎಳ್ಳುನೀರು ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ನಾಗೇನಹಳ್ಳಿ ಎಂ.ಮಂಜುನಾಥ್ ಮಾತನಾಡಿ, ಈ ಹೋಬಳಿಯನ್ನು ಮಂಚೇನಹಳ್ಳಿ ನೂತನ ತಾಲ್ಲೂಕು ಕೇಂದ್ರಕ್ಕೆ ಸೇರಿಸಿದರೆ ಮತ್ತಷ್ಟು ಅಧ್ವಾನಕ್ಕೆ ಕಾರಣವಾಗಲಿದೆ. ಯಾವುದೇ ಕಾರಣಕ್ಕೂ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿದರು.

ಸಮಿತಿ ಉಪಾಧ್ಯಕ್ಷರಾದ ಆರ್.ಸತೀಶ್, ಟಿ.ಆರ್.ಶ್ರೀನಿವಾಸ್, ಖಜಾಂಚಿ ಟಿ.ಎನ್.ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ್ ಬಾಬು, ಮುಖಂಡರಾದ ಜಗನ್ನಾಥ್ ಆಚಾರ್, ಆಂಜಿನಪ್ಪ, ತೂಬಗೆರೆ ಷರೀಫ್, ಚಿದಾನಂದ, ಎಸ್.ಆರ್.ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.