ADVERTISEMENT

ಕೋವಿಡ್‌-–19 ಪರೀಕ್ಷೆ: ಫಲಿತಾಂಶ ವಿಳಂಬಕ್ಕೆ ಅಸಮಾಧಾನ

ಗಂಟಲ ದ್ರವದ ಮಾದರಿ ಪಡೆದು ಒಂದು ವಾರ ಕಳೆದರೂ ಬಾರದ ವರದಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2021, 4:43 IST
Last Updated 19 ಏಪ್ರಿಲ್ 2021, 4:43 IST
ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಗ್ರಾಫೀಕ್‌ ( ಸರ್ಕಾರದ ಕೋವಿಡ್‌ ವೆಬ್‌ಸೈಟ್‌)
ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಗ್ರಾಫೀಕ್‌ ( ಸರ್ಕಾರದ ಕೋವಿಡ್‌ ವೆಬ್‌ಸೈಟ್‌)   

ದೊಡ್ಡಬಳ್ಳಾಪುರ: ರಾಜಧಾನಿಯ ಸೆರಗಿನಲ್ಲೇ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕುಗಳಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಶರವೇಗದಲ್ಲಿ ಏರಿಕೆಯಾಗುತ್ತಿರುವುದು ಒಂದು ಕಡೆಯಾದರೆ, ಕೋವಿಡ್‌ ಪರೀಕ್ಷೆಗೆ ಪಡೆದ ಗಂಟಲ ದ್ರವದ ಮಾದರಿ ಫಲಿತಾಂಶ ಒಂದು ವಾರ ಕಳೆದರು ಬಾರದೇ ಇರುವುದು ಆತಂಕಕ್ಕೆ ಈಡುಮಾಡಿದೆ.

ಹಲ್ಲು ನೋವಿನ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಕಡ್ಡಾಯವಾಗಿ ಕೋವಿಡ್‌-19 ಪರೀಕ್ಷೆ ಮಾಡಿಸಿಕೊಂಡು ಬರಬೇಕು ಎನ್ನುತ್ತಿದ್ದಾರೆ.
ಇನ್ನು ಖಾಸಗಿ ಕಂಪನಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಯಾರಾದರು ಒಬ್ಬರಿಗೆ ಕೋವಿಡ್‌-19 ದೃಢಪಟ್ಟರು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವ ಎಲ್ಲರು ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿ ಬಂದನಂತರವೇ ಕೆಲಸಕ್ಕೆ ಹಾಜರಾಗಲು ಹೇಳುತ್ತಿದ್ದಾರೆ. ಆದರೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನ ಪರೀಕ್ಷೆಗೆ ಗಂಟಲ ದ್ರವ ನೀಡಿ ಆರು ದಿನಕ್ಕೆ ಫಲಿತಾಂಶ ಬರುತ್ತಿದೆ ಎಂದು ದೂರಿದ್ದಾರೆ ಐಟಿ ಉದ್ಯೋಗಿ ಜಿ.ರಾಜಶೇಖರ್‌.

ಈ ಬಗ್ಗೆ ಮಾಹಿತಿ ನೀಡಿ, ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗಾಗಿ ಸ್ಯಾಂಪಲ್ ನೀಡಿ ಆರು ದಿನಗಳ ನಂತರ ಫಲಿತಾಂಶ ಬಂದಿದೆ. ಆಸ್ಪತ್ರೆಯಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದರೆ ‘ಯುಗಾದಿ ಹಬ್ಬದ ಸಾಲು ಸಾಲು ರಜೆ. ಹೀಗಾಗಿ ಲ್ಯಾಬ್‌ಗಳಿಂದ ಆನ್‌ಲೈನ್‌ನಲ್ಲಿ ದಾಖಲಿಸಲು ತಡವಾಗಿದೆ’ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ.

ADVERTISEMENT

ಸೋಂಕು ಹೆಚ್ಚಾಗಿ ಹರಡಲು ಕಾರಣವಾಗಿರುವುದೇ ಪ್ರಯೋಗಾಲಯಗಳಿಂದ ವರದಿ ಬರುವುದು ತಡವಾಗುತ್ತಿರುವುದು. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಇಂತಹ ಸೂಕ್ಷ್ಮ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಫಲಿತಾಂಶ ನೀಡಲು ತಡಾ ಮಾಡುತ್ತಿರುವ ಖಾಸಗಿ ಲ್ಯಾಬ್‌ಗಳ ಮೇಲೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದೇ ಇರುವುದೇ ಫಲಿತಾಂಶ ವಿಳಂಬಕ್ಕೆ ಮುಖ್ಯ ಕಾರಣವಾಗಿದೆ ಎಂದು ದೂರಿದ್ದಾರೆ.

ಯಾವುದೇ ಖಾಸಗಿ ಲ್ಯಾಬ್‌ಗಳು ಸಹ ಉಚಿತವಾಗಿ ಸೇವೆ ನೀಡುತ್ತಿಲ್ಲ. ಸರ್ಕಾರ ಹಣ ಪಾವತಿ ಮಾಡುತ್ತಿದೆ. ಗಂಟಲ ದ್ರವದ ಪರೀಕ್ಷೆಗೆ ಮಾದರಿ ಸಂಗ್ರಹಿಸಿದವರಲ್ಲಿ ಯಾರಾದರೂ ಪಾಸಿಟಿವ್ ಆಗಿದ್ದರೆ ಆರು ದಿನಗಳಲ್ಲಿ ಬೇರೆ ಕಡೆ ಸಾಂಕ್ರಾಮಿಸಿರುವ ಸಾಧ್ಯತೆಗಳೇ ಹೆಚ್ಚು. ಕನಿಷ್ಠ ಫಲಿತಾಂಶ ಬರುವವರೆಗೂ ಅಂತಹವರನ್ನು ಟ್ರ್ಯಾಕ್ ಮಾಡುವ ವ್ಯವಸ್ಥೆಯು ಇಲ್ಲದಾಗಿದೆ. ಸರ್ಕಾರಿ ಆಸ್ಪತ್ರೆಗಳ ಕಚೇರಿ ಅವಧಿಯಲ್ಲಿಯೇ ಸ್ಯಾಂಪಲ್ ಪಡೆಯ ಬೇಕು ಎನ್ನುವ ನಿಯಮ ಏನಾದರೂ ಇದೆಯೇ, ಶರವೇಗದಲ್ಲಿ ಸೋಂಕು ಹರಡುತ್ತಿರುವ ಇಂತಹ ಸಂದರ್ಭದಲ್ಲಾದರು ಪಾಳಿಯ ಮೇಲೆ ಕಾರ್ಯನಿರ್ವಹಿಸುವಂತಹ ವ್ಯವಸ್ಥೆ ಮಾಡಬೇಕಿತ್ತು ಎಂದರು.

ಟೆಸ್ಟ್‌ರಿಸಲ್ಟ್‌ ಕಾರ್ಯ, ಹರಿವು ಅಂದರೆ ಸ್ಯಾಂಪಲ್ ಪಡೆದ ನಂತರ ಅದನ್ನು ಎಲ್ಲಿಗೆ ಕಳುಹಿಸಿದ್ದಾರೆ, ಯಾವ ಹಂತದಲ್ಲಿದೆ,
ಫಲಿತಾಂಶ ಇನ್ನು ಎಷ್ಟು ದಿನದಲ್ಲಿ ಬರಬಹುದು ಇಂತಹ ಮಾಹಿತಿಯನ್ನು ಸೋಂಕಿತರ ಮೊಬೈಲ್‌ಗೆ ತಲುಪುವಂತೆ ಮಾಡಬೇಕು. ಕೊರೊನಾ ಸೋಂಕು ಕಾಣಿಸಿಕೊಂಡು ಒಂದು ವರ್ಷ ಕಳೆದರೂ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಟೆಸ್ಟ್ ಮಾಡಲು ಅವಶ್ಯಕತೆ ಇರುವ ಸುಸಜ್ಜಿತ ಲ್ಯಾಬ್ ಆಗಲಿ ಅಥವಾ ಸಿಬ್ಬಂದಿಯನ್ನಾಗಲಿ ನಿಯೋಜನೆ ಮಾಡದೇ ಇರುವುದು ಸಹ ಸೋಂಕಿತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರಿಗೂ ಕೋವಿಡ್‌-19: ದೊಡ್ಡಬಳ್ಳಾಪುರ ಪೊಲೀಸ್‌ ವೃತ್ತಕ್ಕೆ ಒಳಪಡುವ ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ 6 ಜನ ಪೊಲೀಸ್‌ ಸಿಬ್ಬಂದಿಗೆ ಕೋವಿಡ್‌-19 ದೃಢಪಟ್ಟಿದೆ. ಈಗಾಗಲೇ ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ಠಾಣೆಗಳಲ್ಲಿ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿಯೇ ಎಲ್ಲಾ ಪೊಲೀಸ್‌ ಠಾಣೆಗಳಲ್ಲೂ ಸಿಬ್ಬಂದಿ ಕೊರೊನಾ ಸೋಂಕಿಗೆ ಒಳಗಾಗುತ್ತಿರುವುದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಲಸಿಕೆಗೆ ಜನರಲ್ಲಿ ಹೆಚ್ಚಿದ ಒಲವು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 45 ವರ್ಷ ಮೇಲ್ಪಟ್ಟವರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಲಸಿಕೆ ಪಡೆಯಲು ಸಾಲುಗಟ್ಟಿ ನಿಲ್ಲುವಂತಾಗಿದೆ.

ಗ್ರಾಮೀಣ ಭಾಗದಲ್ಲಿನ ಅಂಗನವಾಡಿ ಕೇಂದ್ರಗಳಲ್ಲೂ ಕೋವಿಡ್‌ ಲಸಿಕೆ ಹಾಕುವ ಅಭಿಯಾನ ಆರಂಭವಾಗಿದೆ. ಆದರೆ ಒಂದು ಅಂಗನವಾಡಿ ಕೇಂದ್ರದಲ್ಲಿ ಸುಮಾರು 40 ರಿಂದ 50 ಜನರಿಗೆ ಮಾತ್ರ ಲಸಿಕೆ ಹಾಕುತ್ತಿರುವುದು ಸಾರ್ವಜನಿಕರ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.