ಹೊಸಕೋಟೆ: ಬೆಂಗಳೂರು ಉತ್ತರ ಜಿಲ್ಲೆ ವ್ಯಾಪ್ತಿಯಲ್ಲಿ ನಗರೀಕರಣ ದಿನೇದಿನೇ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ ಬೆಂಗಳೂರು ಹಾಲು ಒಕ್ಕೂಟಕ್ಕೆ ಬರುವ ಹಾಲಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಶಿಡ್ಲಘಟ್ಟ ರಸ್ತೆಯಲ್ಲಿರುವ ಹೊಸಕೋಟೆ ಶಿಬಿರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೊಸಕೋಟೆ ತಾಲ್ಲೂಕು ಡೇರಿ ಕಾರ್ಯಕರ್ತರ ಮತ್ತು ಹಾಲು ಉತ್ಪಾದಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಹೊಸಕೋಟೆ, ಆನೇಕಲ್, ದೇವನಹಳ್ಳಿ ಸೇರಿದಂತೆ ಬೆಂಗಳೂರು ವ್ಯಾಪ್ತಿಯಲ್ಲಿ ಉತ್ಪಾದನೆ ಮತ್ತು ಉತ್ಪತ್ತಿ ಎರಡೂ ಕಡಿಮೆಯಾಗುತ್ತಿದೆ. ಬೆಂಗಳೂರು ಹಾಲು ಒಕ್ಕೂಟದಲ್ಲಿ 22 ಲಕ್ಷ ಲೀಟರ್ ಹಾಲು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವಿದ್ದರೆ ಸಂಗ್ರಹವಾಗುತ್ತಿರುವುದು ಕೇವಲ 15 ಲಕ್ಷ ಮಾತ್ರ. ಇನ್ನೂ 7 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಿಸಬೇಕಿದೆ ಎಂದರು.
ರಾಜ್ಯದಲ್ಲಿ ನಂದಿನಿ ಪಾರ್ಲರ್‌ಗಳ ಮೂಲಕ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸುವ ಕುರಿತು ಚಿಂತನೆ ಮಾಡಲಾಗುತ್ತಿದೆ. ನಂದಿನಿ ಪಾರ್ಲರ್‌ಗಳಲ್ಲಿಯೇ ಕಾಫಿ, ಟೀ, ಹಾಲು ಸೇರಿದಂತೆ ವಿವಿಧ ಪದಾರ್ಥಗಳನ್ನು ಮಾರಾಟ ಮಾಡಲು ಚಿಂತನೆ ನಡೆಯುತ್ತಿದೆ. ಅದಕ್ಕಾಗಿ ಗುಣಮಟ್ಟದ ಹಾಲನ್ನು ಕೊಡುವ ಕೆಲಸವನ್ನು ಉತ್ಪಾದಕರು ಮಾಡಬೇಕಿದೆ ಎಂದರು.
ಪಶು ವಿಮೆ, ಪಶು ವೈದ್ಯಕೀಯ ಸೇವೆ, ಬಿಎಂಸಿ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆ, ಪಶು ಆಹಾರ ಗುಣಮಟ್ಟದ ವ್ಯವಸ್ಥೆ, ಡೇರಿಗಳಿಗೆ ತಂತ್ರಜ್ಞಾನ ವ್ಯವಸ್ಥೆ, ಡೇರಿಗಳಿಗೆ ಮತ್ತು ಡೇರಿ ವಾಹನಗಳಿಗೆ ಸಿ.ಸಿ ಟಿವಿ ಮತ್ತು ಜಿಪಿಎಸ್ ವ್ಯವಸ್ಥೆ ಸೇರಿದಂತೆ ಎಲ್ಲಾ ಪ್ರಮುಖ ವಿಚಾರಗಳ ಕುರಿತು ಮಾಹಿತಿ ಸಂಗ್ರಹಿಸಿ ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮಗಳ ಕುರಿತು ಚಿಂತಿಸಲಾಗುತ್ತಿದೆ. ಕಾಲ ಮಿತಿಯೊಳಗೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಹೊಸಕೋಟೆ ತಾಲ್ಲೂಕಿನ ರೈತರಿಗೆ ಅನುಕೂಲವಾಗುವಂತೆ ತಾಲ್ಲೂಕಿನ ಶಿಬಿರ ಕಚೇರಿಯ ಸ್ಥಳದಲ್ಲಿ ಫೀಡ್ ತಯಾರಿಕಾ ಘಟಕ ಸ್ಥಾಪಿಸಿಕೊಡುವಂತೆ ಮನವಿ ಮಾಡಿದರು.
ಎಂಎಲ್‌ಸಿ ರವಿ, ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ, ಕೆ.ಎಂ.ಮಂಜುನಾಥ್, ಎಲ್‌ಎನ್‌ಟಿ ಮಂಜುನಾಥ್, ರಾಜಣ್ಣ, ಬೈರೇಗೌಡ, ಹರೀಶ್, ಸತೀಶ್, ಮುನಿರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಬಿಎಂಅರ್‌ಡಿ ಅಧ್ಯಕ್ಷ ಕೇಶವಮೂರ್ತಿ, ಲಿಂಗೇಶ್, ಬಮೂಲ್ ವ್ಯವಸ್ಥಾಪಕ ಡಾ.ಎಸ್.ಸಿ.ಸುರೇಶ್, ಜನರಲ್ ಮ್ಯಾನೇಜರ್ ಶ್ರೀಧರ್, ಶ್ರೀನಿವಾಸ್, ಅನುಪಮ, ಮಧುಸೂದನ್, ಡಾ.ಸುದೇಶ್, ಎ.ಎಂ.ಚಂದ್ರಪ್ಪ, ಶ್ರೀರಾಮಪ್ಪ, ರುತಿಕ್ ಗೌಡ, ಹಸಿಗಾಳ ಜಗದೀಶ್, ಜಗನ್ನಾಥ್, ಮುತ್ಸಂದ್ರ ಆನಂದಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.