ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವ ಕಾರಣ ರಾಗಿ ಹಾಗೂ ಮುಸುಕಿನಜೋಳದ ಬೆಳೆಗೆ ಯೂರಿಯಾ ರಸಗೊಬ್ಬರ ಖರೀದಿಸಲು ರೈತರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಮಳೆಗಾಲದ ಬೆಳೆಗಳಿಗೆ ಈಗ ರಸಗೊಬ್ಬರ ಹಾಕಲು ಸಕಾಲವಾಗಿದೆ. ಆದರೆ ತಾಲ್ಲೂಕಿನಲ್ಲಿ ಟಿಎಪಿಎಂಸಿಎಸ್ ಹೊರತುಪಡಿಸಿದರೆ ಬೇರೆ ಯಾವುದೇ ರಸಗೊಬ್ಬರ ಮಾರಾಟಗಾರರ ಬಳಿಯು ಯೂರಿಯಾ ದಾಸ್ತುನು ಇಲ್ಲ. ಒಬ್ಬ ರೈತರಿಗೆ ಒಂದು ಚೀಲ ಮಾತ್ರ ನೀಡುವಂತೆ ಹಾಗೂ ಹೊರ ತಾಲ್ಲೂಕಿನ ರೈತರಿಗೆ ಯೂರಿಯಾ ಮಾರಾಟ ಮಾಡದಂತೆ ಕೃಷಿ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಯೂರಿಯಾ ಪಡೆಯುವ ಪ್ರತಿಯೊಬ್ಬ ರೈತರು ಆಧಾರ್ ಸಂಖ್ಯೆಯನ್ನು ಹೇಳಿ, ಬೆರಳಚ್ಚು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಷ್ಟೇ ಅಲ್ಲದೆ ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗದಂತೆ ತಡೆಯುವ ಸಲುವಾಗಿ ರಸಗೊಬ್ಬರ ದಾಸ್ತಾನು ಮಳಿಗೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನಕಣ್ಣಿಟ್ಟಿದ್ದು, ದಾಸ್ತಾನು ಪರಿಶೀಲನೆಯನ್ನು ನಿರಂತರವಾಗಿ ನಡೆಸುತ್ತಿದೆ.
ಒಬ್ಬ ರೈತರಿಗೆ ಒಂದು ಚೀಲ ಮಾತ್ರ ಯೂರಿಯಾ ನೀಡುತ್ತಿರುವುದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಒಂದು ಎಕರೆಗೆ ಕನಿಷ್ಠ ಎರಡು ಚೀಲವಾದರು ಯೂರಿಯಾ ಬೇಕು. ರಾಗಿ ಬಿತ್ತನೆ ಮಾಡಿದಾಗಿನಿಂದಲೂ ಒಂದೆರಡು ದಿನ ಬಿಟ್ಟು ನಿರಂತರವಾಗಿ ಮಳೆ ಬೀಳುತ್ತಲೇ ಇದೆ. ಈಗ ಯೂರಿಯಾ ಹಾಕದೇ ಇದ್ದರೆ ರಾಗಿ ಬೆಳೆ ಬರುವುದೇ ಅನುಮಾನ. ಇಂತಹ ಸ್ಥಿತಿಯಲ್ಲಿ ರೈತರಿಗೆ ಅಗತ್ಯ ಇರುವಷ್ಟು ರಸಗೊಬ್ಬರ ವಿತರಣೆಗೆ ಸರ್ಕಾರ ತುರ್ತುಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಗಿ ಬೆಳೆ ಇಳುವರಿಯಲ್ಲಿ ಭಾರೀ ಕುಸಿತವಾಗುವ ಅಪಾಯವಿದೆ. ಇದರಿಂದ ರೈತರು ನಷ್ಟಕ್ಕೆ ಒಳಗಾಗಲಿದ್ದಾರೆ ಎಂದು ರಾಜ್ಯ ರೈತ ಸಂಘದ ಮುಖಂಡ ಮುತ್ತೇಗೌಡ ತಿಳಿಸಿದರು.
ಸರ್ಕಾರ ರಾಗಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿರುವುದರಿಂದ ಹಾಗೂ ರಾಗಿ ಕೊಯ್ಲಿಗೆ ಯಂತ್ರಗಳ ಬಳಕೆಯಾಗುತ್ತಿರುವುದರಿಂದ ರಾಗಿ ಬೆಳೆಯಲು ಕಾರ್ಮಿಕರ ಅವಲಂಬನೆ ಕಡಿಮೆಯಾಗಿದೆ. ಇದಲ್ಲದೆ ಜಮೀನು ಪಾಳುಬಿಟ್ಟರೆ ಅಕ್ಕಪಕ್ಕದವರು ಒತ್ತುವರಿ ಮಾಡಿಕೊಳ್ಳುವ ಅಪಾಯದಿಂದಾಗಿ ಬಹುತೇಕ ರೈತರು ಮಳೆ ಆಶ್ರಯದಲ್ಲಿ ರಾಗಿ ಬೆಳೆಯಲು ಮುಂದಾಗಿದ್ದಾರೆ. ಇದರಿಂದಾಗಿ ತಾಲ್ಲೂಕಿನಲ್ಲಿ ರಾಗಿ ಬೆಳೆಯುವ ಪ್ರದೇಶದ ವಿಸ್ತೀರ್ಣ ಹೆಚ್ಚಾಗಿದೆ. ಇದಷ್ಟೇ ಅಲ್ಲದೆ ನಿರಂತರ ಮಳೆ ಕಾರಣದಿಂದ ಯೂರಿಯಾಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಕೃಷಿ ಇಲಾಖೆ ಅಂಕಿ ಅಂಶದಂತೆ ಆಗಸ್ಟ್ ಅಂತ್ಯಕ್ಕೆ ತಾಲ್ಲೂಕಿಗೆ 3,068 ಮೆಟ್ರಿಕ್ ಟನ್ ಯೂರಿಯಾ ಅಗತ್ಯ ಇತ್ತು. ಇಲ್ಲಿವರೆಗೆ ಸರಬರಾಜು ಆಗಿರುವುದು 2,650 ಮೆಟ್ರಿಕ್ ಟನ್ ಮಾತ್ರ. ಇನ್ನೂ ಮೂರು ದಿನಗಳಲ್ಲಿ 182 ಮೆಟ್ರಿಕ್ ಟನ್ ಯೂರಿಯಾ ತಾಲ್ಲೂಕಿಗೆ ಬರುವ ನಿರೀಕ್ಷೆ ಇದೆ. ಈಗ ಸದ್ಯಕ್ಕೆ ತಾಲ್ಲೂಕಿನಲ್ಲಿ 83 ಟನ್ ಯೂರಿಯಾ ರಸಗೊಬ್ಬರ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.