ADVERTISEMENT

ನಂದಗುಡಿ, ಸೂಲಿಬೆಲೆ ಕೆರೆಗಳಿಗೆ ವ್ಯಾಲಿ ನೀರು: ಶಾಸಕ ಶರತ್‌ ಬಚ್ಚೇಗೌಡ

ಡಿಸಿಎಂ ಹಸಿರು ನಿಶಾನೆ । ₹1,500 ಕೋಟಿ ವೆಚ್ಚದಲ್ಲಿ ಒಂದೂವರೆ ವರ್ಷದೊಳಗೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:36 IST
Last Updated 8 ಮೇ 2025, 15:36 IST
ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿ ಕೇಂದ್ರದಲ್ಲಿ ಬಿಡಿಸಿಸಿ ಬ್ಯಾಂಕ್‌ನ ನೂತನ ಶಾಖೆಯನ್ನು ಶಾಸಕ ಶರತ್‌ ಬಚ್ಚೇಗೌಡ ಉದ್ಘಾಟಿಸಿದರು
ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿ ಕೇಂದ್ರದಲ್ಲಿ ಬಿಡಿಸಿಸಿ ಬ್ಯಾಂಕ್‌ನ ನೂತನ ಶಾಖೆಯನ್ನು ಶಾಸಕ ಶರತ್‌ ಬಚ್ಚೇಗೌಡ ಉದ್ಘಾಟಿಸಿದರು   

ಹೊಸಕೋಟೆ: ತಾಲ್ಲೂಕಿನ ನಂದಗುಡಿ ಮತ್ತು ಸೂಲಿಬೆಲೆಯ ಕೆರೆಗಳಿಗೆ ಎಚ್‌.ಎನ್‌. ವ್ಯಾಲಿ ನೀರು ಶೀಘ್ರವೇ ಹರಿಸಲಾಗುವುದು ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ತಾಲ್ಲೂಕಿನ ನಂದಗುಡಿಯಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನೂತನ ಶಾಖೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ನಂದಗುಡಿ ಮತ್ತು ಸೂಲಿಬೆಲೆ ಕೆರೆಗಳಿಗೆ ಎಚ್‌. ಎನ್ ವ್ಯಾಲಿ ಮೂಲಕ ನೀರು ಹರಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಸಿರು ನಿಶಾನೆ ತೋರಿದ್ದಾರೆ. ಮುಂದಿನ ಸಚಿವ ಸಂಪುಟದಲ್ಲಿ ₹1,500 ಕೋಟಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲಾಗುವುದು ಎಂದು ತಿಳಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಯಾವುದೇ ರೀತಿಯ ಶಾಶ್ವತ ನೀರಿನ ಸೆಲೆ ಇಲ್ಲದ ಕಾರಣ 1,200 ಅಡಿ ಕೊಳವೆ ಬಾವಿ ಕೊರೆಸಿ ನೀರು ತೆಗೆಯುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಅನಗೊಂಡನಹಳ್ಳಿ ಹಾಗೂ ಜಡಿಗೆನಹಳ್ಳಿ ಹೋಬಳಿಗಳ ಕೆರೆಗಳಿಗೆ ವೆಂಗಯ್ಯನ ಕೆರೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು.

ಕೃಷಿ ಹೈನುಗಾರಿಕೆಯಿಂದ ನಮ್ಮ ಭಾಗದ ರೈತರು ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದ್ದು, ನೀರಾವರಿ ಯೋಜನೆ ಸಾಕಾರಗೊಂಡರೆ ಮತ್ತಷ್ಟು ಪ್ರಗತಿ ಸಾಧಿಸಲಿದ್ದಾರೆ. ರೈತರ ಅಭ್ಯುದಯಕ್ಕೆ ಬಿಡಿಸಿಸಿ ಬ್ಯಾಂಕ್ ಸುಲಭ ಸಾಲದ ಮೂಲಕ ಮತ್ತಷ್ಟು ಸಹಕಾರ ನೀಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ರೈತಪರ ವಾಗಿರುವ ಬ್ಯಾಂಕ್ ಆಗಿದ್ದು ಬೆಳೆಸಾಲ, ಆಭರಣ ಸಾಲ, ಮನೆ ಕಟ್ಟಲು, ನಿವೇಶನ ಕೊಳ್ಳಲು ಸಾಲ, ಹಾಲು ಉತ್ಪಾದಕರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುತ್ತಿದ್ದೇವೆ. ಆದ್ದರಿಂದ ಉಳ್ಳವರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವ ಬದಲಾಗಿ ಬಿಡಿಸಿಸಿ ಬ್ಯಾಂಕಿನಲ್ಲಿ ಇಟ್ಟರೆ ಹೆಚ್ಚಿನ ಬಡ್ಡಿ ಸಹ ನೀಡುತ್ತೇವೆ. ಇದರ ಸದುಪಯೋಗ ರೈತರು ಬಳಸಿಕೊಳ್ಳಿ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಉಪಾಧ್ಯಕ್ಷ ಕೆ.ಕೃಷ್ಣಮೂರ್ತಿ, ನಿರ್ದೇಶಕರಾದ ಬಿವಿ.ಸತೀಶ್ ಗೌಡ, ಮುತ್ಸದ್ರ ಬಾಬುರೆಡ್ಡಿ, ಸಿಇಓ ಪುಂಡಲೀಕ.ಎಲ್.ಸಾದುರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.