ADVERTISEMENT

ಸೂಲಿಬೆಲೆ: ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 3:32 IST
Last Updated 24 ಜೂನ್ 2021, 3:32 IST
ಬಿಜೆಪಿಯ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನಸಂಘದ ಸ್ಥಾಪಕ ಡಾ.ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರ ಪುಣ್ಯ ಸ್ಮರಣೆ ನಡೆಯಿತು
ಬಿಜೆಪಿಯ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನಸಂಘದ ಸ್ಥಾಪಕ ಡಾ.ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರ ಪುಣ್ಯ ಸ್ಮರಣೆ ನಡೆಯಿತು   

ಸೂಲಿಬೆಲೆ: ‘ಕೋವ್ಯಾಕ್ಸಿನ್ ಎರಡನೇ ಡೋಸ್‌ ಪಡೆಯಲು ಕಳೆದ ಎರಡು ದಿನಗಳಿಂದ ಆಸ್ಪತ್ರೆಗೆ ಅಲೆಯುತ್ತಿದ್ದೇನೆ. ವೈದ್ಯಕೀಯ ಸಿಬ್ಬಂದಿ ವ್ಯಾಕ್ಸಿನ್ ಪೂರೈಕೆ ಇಲ್ಲ ಎನ್ನುತ್ತಿದ್ದಾರೆ’

–ಹೀಗೆಂದು ನೋವು ತೋಡಿಕೊಂಡಿದ್ದು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದಿದ್ದ ಪಟ್ಟಣದ ನಿವಾಸಿ ತ್ರಿಮೂರ್ತಿ.

ಹೋಬಳಿ ಕೇಂದ್ರವಾದ ಸೂಲಿಬೆಲೆಯಲ್ಲಿ ಸುಮಾರು 12ರಿಂದ 13 ಸಾವಿರದಷ್ಟು ಜನಸಂಖ್ಯೆಯಿದೆ. ನೆರೆಯ ತಾಲ್ಲೂಕಿನ ಹಲವು ಹಳ್ಳಿಗಳ ಜನರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಚಿಕಿತ್ಸೆ ಮತ್ತು ವ್ಯಾಕ್ಸಿನ್ ಪಡೆಯಲು ಬರುತ್ತಾರೆ. ಇದರ ಜೊತೆಗೆ ಹೋಬಳಿಯ ಅನೇಕ ಗ್ರಾಮದವರು ಸೇರಿದಂತೆ ಪ್ರತಿನಿತ್ಯ ನೂರಾರು ಮಂದಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯಾಕ್ಸಿನ್ ಸರಬರಾಜು ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯ.

ADVERTISEMENT

‘ಹೊಸಕೋಟೆ ನಗರ ಹೊರತುಪಡಿಸಿದರೆ ತಾಲ್ಲೂಕಿನಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣವಾದ ಸೂಲಿಬೆಲೆಗೆ ನಿಯಮಿತವಾಗಿ ವ್ಯಾಕ್ಸಿನ್ ಸರಬರಾಜು ಆಗುತ್ತಿಲ್ಲ. ಅಧಿಕಾರಿಗಳು ಇದರ ಕಡೆ ಗಮನಹರಿಸಬೇಕು. ಇಲ್ಲಿನ ಪಿಎಚ್‌ಸಿಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಪಟ್ಟಣದ ನಿವಾಸಿ ಫಾರೂಕ್
ಆಗ್ರಹಿಸಿದ್ದಾರೆ.

‘ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 6,500 ಲಸಿಕೆ ಸರಬರಾಜಾಗುತ್ತಿದೆ. ಎಲ್ಲ ಆಸ್ಪತ್ರೆಗಳಲ್ಲಿ ಲಸಿಕೆ ಪೂರೈಸಲಾಗುವುದು’ ಎಂದು ಡಿಎಚ್‌ಒ ತಿಪ್ಪೇಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.