ADVERTISEMENT

ವಾಯುವಜ್ರ ಮತ್ತಷ್ಟು ದುಬಾರಿ: ಪ್ರಯಾಣಿಕರಿಗೆ ಟಿಕೆಟ್‌ ದರ ಏರಿಕೆ ಬಿಸಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 23:30 IST
Last Updated 5 ಜನವರಿ 2025, 23:30 IST
ವಜ್ರವಾಯು
ವಜ್ರವಾಯು   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರದ ವಿವಿಧ ಭಾಗಗಳಿಗೆ ಬಿಎಂಟಿಸಿ ಸಂಚರಿಸುತ್ತಿದ್ದ ಹವಾನಿಯಂತ್ರಿತ ವಾಯುವಜ್ರ ವೊಲ್ವೊ ಬಸ್‌ ದರ ದುಬಾರಿಯಾಗಿದೆ. 

ಶೇ 5ರಷ್ಟು ಜಿಎಸ್‌ಟಿ ಸೇರಿ ಪ್ರಯಾಣ ದರದಲ್ಲಿ ಶೇ 6.25 ರಷ್ಟು ಏರಿಕೆಯಾಗಿದೆ. ವಿಮಾನ ನಿಲ್ದಾಣದಿಂದ ದೂರದ ಪ್ರದೇಶಗಳ ಟಿಕೆಟ್‌ ದರ ₹400ರ ಗಡಿದಾಟಿದೆ. ನಿತ್ಯ ಸಾವಿರಾರು ಪ್ರಯಾಣಿಕರೊಂದಿಗೆ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಯ ಸಿಬ್ಬಂದಿ ನಿತ್ಯ ವಾಯುವಜ್ರ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.

ವಿಮಾನ ನಿಲ್ದಾಣದಿಂದ ಆನೇಕಲ್‌ ತಾಲ್ಲೂಕಿನ ಚಂದಾಪುರಕ್ಕೆ ಈ ಮೊದಲು ₹385 ರಷ್ಟಿದ್ದ ಟಿಕೆಟ್‌ ದರ ಪರಿಷ್ಕರಣೆ ನಂತರ ₹410 ಆಗಿದೆ. ಒಂದೇ ಬಾರಿ ಪ್ರಯಾಣಿಕರ ಜೇಬಿಗೆ ₹25ರಷ್ಟು ಹೊರೆಯಾಗಿದೆ.

ADVERTISEMENT

ವೈಟ್‌ಫೀಲ್ಡ್‌ ಟಿಟಿಎಂಸಿ ಮಾರ್ಗದಲ್ಲಿ ಅತೀ ಹೆಚ್ಚು ಬಸ್‌ ಓಡುತ್ತಿರುವ ಕಾರಣ ಈ ಮಾರ್ಗದ ಬಸ್‌ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಹಿಂದೆ ಇದ್ದ ₹300 ದರವನ್ನೇ ಮುಂದುವರೆಸಲಾಗಿದೆ. 

ಕ್ಯಾಬ್‌, ಟ್ಯಾಕ್ಸಿ ಸೇವೆಗಳಿಂತಲೂ ವಾಯುವಜ್ರ ಬಸ್‌ನಲ್ಲಿ ಸಂಚರಿಸುವುದು ದುಬಾರಿಯಾಗಿದೆ. ಇದರಿಂದ ನಿತ್ಯ ಪ್ರಯಾಣಿಕರಿಗೆ  ಅನಾನುಕೂಲವಾಗಲಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಾಯುವಜ್ರ ಬಸ್‌ ಮೂಲಕ ದೇವನಹಳ್ಳಿಯ ವಿಮಾನ ನಿಲ್ದಾಣ ತಲುಪಲು ಕೇಂದ್ರ ಸರ್ಕಾರಕ್ಕೆ ಶೇ 5ರಷ್ಟು ಜಿಎಸ್‌ಟಿ ಕಟ್ಟಬೇಕು. ನಂತರ ಸಾದಹಳ್ಳಿ ಸಮೀಪದ ಟೋಲ್‌ ಶುಲ್ಕವನ್ನೂ ಸೇರಿಸಿ ಪ್ರಯಾಣಿಕರಿಂದ ಟಿಕೆಟ್‌ ಹಣದಿಂದಲೇ ಸಂಗ್ರಹಿಸುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಧನ ದರ ಸೇರಿದಂತೆ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬಸ್‌ ದರ ಹೆಚ್ಚಳ ಅನಿವಾರ್ಯ ಎನ್ನುವ ರಾಜ್ಯ ಸರ್ಕಾರ ವಿಮಾನ ನಿಲ್ದಾಣಕ್ಕೆ ಅಗ್ಗದ ದರದಲ್ಲಿ ಪರಿಸರಸ್ನೇಹಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭಿಸಬೇಕು. ಇದರಿಂದ ಪ್ರಯಾಣಿಕರ ಅನುಕೂಲದ ಜೊತೆ ಪರಿಸರಕ್ಕೂ ಪೂರಕವಾಗಿರುತ್ತದೆ ಎನ್ನುತ್ತಾರೆ ಪ್ರಯಾಣಿಕ ಸಂತೋಷ್‌. 

ವಿಮಾನ ನಿಲ್ದಾಣವೆಂಬ ಆಡಂಬರದ ಪ್ರದೇಶದಲ್ಲಿ ಆಹಾರ, ಕುಡಿಯುವ ನೀರಿಗೆ ನೂರಾರು ರೂಪಾಯಿ ಕೊಡಬೇಕಿದೆ. ಇದೀಗ ವಾಯು ವಜ್ರ ಸೇವೆಯ ದರವೂ ಹೆಚ್ಚಳವಾಗಿದೆ. ತಿಂಗಳ ₹60 ಸಾವಿರ ಸಂಬಳದಲ್ಲಿ ₹40 ಸಾವಿರವನ್ನು ಇಲ್ಲಿಯೇ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಆಕಾಸ್‌ ಏರ್‌ ವೇಸ್‌ ಉದ್ಯೋಗ ಪ್ರೀತಿ ಸ್ವಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.