
ವಿಜಯಪುರ (ದೇವನಹಳ್ಳಿ): ಅಕ್ಟೋಬರ್‌ನಲ್ಲಿ ಸತತವಾಗಿ ಸುರಿದ ಮಳೆ ಹಾಗೂ ಮೊಂಥಾ ಚಂಡಮಾರುತದ ಪ್ರಭಾವದಿಂದ ತರಕಾರಿ ಬೆಳೆಗಳು ನೆಲಕಚ್ಚಿದ್ದು, ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರಿಕೆ ಕಂಡು ಬಂದಿದೆ.
ಕೃಷಿ ಜಿಲ್ಲೆಯ ಪ್ರಧಾನ ಕಸಬು. ರೈತರು ಹಾಲು, ರೇಷ್ಮೆ, ಹಣ್ಣು ಬೆಳೆಯುವ ಜೊತೆಗೆ ಯಥೇಚ್ಛವಾಗಿ ತರಕಾರಿ, ಸೊಪ್ಪು ಬೆಳೆದು ರಾಜ್ಯದ ರಾಜಧಾನಿ ಸೇರಿದಂತೆ ವಿವಿಧ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ಅಕ್ಟೋಬರ್‌ನಲ್ಲಿ ಸುರಿದ ಮಳೆಗೆ ತರಕಾರಿ ಬೆಳೆಗಳು ಹಾನಿಯಾಗಿದೆ. ತರಕಾರಿ ಬೆಲೆ ಏರಿಕೆ ಕಂಡರೂ ಇದರ ಲಾಭ ರೈತರಿಗೆ ಸಿಗುತ್ತಿಲ್ಲ.
ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಮಳೆಯಿಂದ ಭೂಮಿ ಅತಿಯಾದ ತೇವಾಂಶ ಉಂಟಾದ ಹಿನ್ನೆಲೆಯಲ್ಲಿ ರೈತರು ತರಕಾರಿ, ಸೊಪ್ಪು ಬೆಳೆಗಳನ್ನು ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಮಾಡಿರಲಿಲ್ಲ. ಅಲ್ಲದೇ ಬಿತ್ತನೆ ಮಾಡಲಾಗಿದ್ದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರ ಹಾಗೂ ಔಷಧಿ ಸಿಂಪಡಿಸಲು ಸಾಧ್ಯವಾಗಿಲ್ಲ. ಇದರಿಂದ ಬೆಳೆಗಳಲ್ಲಿ ರೋಗಗಳಿಗೆ ತುತ್ತಾಗಿ ಇಳುವರಿ ಕುಂಠಿತಗೊಂಡಿದೆ. ಸತತವಾಗಿ ಬೆಲೆ ಕುಸಿತದಿಂದ ಕಂಗೆಟ್ಟ ರೈತರು ತರಕಾರಿ ಬೆಳೆಯಲು ಹಿಂದೇಟು ಹಾಕಿದ್ದರು. ಇವೆಲ್ಲಾದರ ಪರಿಣಾಮ ಪರೋಕ್ಷವಾಗಿ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ರೈತರು.
ಪ್ರಸ್ತುತ ಮದುವೆ, ನಾಮಕಾರಣ, ಇತರೆ ಶುಭ ಸಮಾರಂಭಗಳು ಹೆಚ್ಚಾಗಿ ಜರುಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ತರಕಾರಿ, ಸೊಪ್ಪಿಗೆ ಬೇಡಿಕೆ ಉಂಟಾಗಿದ್ದು, ಸಹಜವಾಗಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
ಸದ್ಯ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸ್ಥಳೀಯ ಮಾರುಕಟ್ಟೆಗೆ ತರಕಾರಿಯ ಆವಕದ ಪ್ರಮಾಣವು ಕಡಿಮೆಯಾಗಿರುವುದರಿಂದ ಒಂದು ತಿಂಗಳ ಹಿಂದೆ ಇದ್ದ ತರಕಾರಿ ಬೆಲೆಗಳು ಈಗ ದುಪ್ಪಟ್ಟಾಗಿವೆ. ದಿನದಿಂದ ದಿನಕ್ಕೆ ತರಕಾರಿ ಬೆಲೆಗಳು ಏರುತ್ತಿದ್ದು, ಇದರಿಂದ ಗ್ರಾಹಕರ ಜೇಬು ಭಾರವಾಗುತ್ತಿದೆ.
ಹೊಟೇಲ್ ಮಾಲೀಕರು ಮಾರುಕಟ್ಟೆಗೆ ಬಂದು ಕಡಿಮೆ ಬೆಲೆಗೆ ಸಿಗುವ ತರಕಾರಿ ಖರೀದಿಸಿ ಅಡುಗೆಗೆ ಬಳಸುತ್ತಿದ್ದಾರೆ. ಇನ್ನೂ ಜನಸಾಮಾನ್ಯರು ಕಡಿಮೆ ಬೆಲೆಯಲ್ಲಿ ಸಿಗುವ ತರಕಾರಿ ಖರೀದಿಸಲು ಮಾರುಕಟ್ಟೆಯಲ್ಲಿ ಚೌಕಾಸಿ ವ್ಯಾಪಾರಕ್ಕೆ ಇಳಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.