ADVERTISEMENT

ತರಕಾರಿ ಬೆಲೆಗಳು ಗಗನಕ್ಕೆ: ಗ್ರಾಹಕರ ಪರದಾಟ

ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಳ * ಜಿಲ್ಲಾಡಳಿತ ವಿರುದ್ಧ ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 14:04 IST
Last Updated 29 ಮಾರ್ಚ್ 2020, 14:04 IST
ವಿಜಯಪುರದಲ್ಲಿ ಮಾರಾಟಕ್ಕಾಗಿ ಖರೀದಿ ಮಾಡಿ ಶೇಖರಣೆ ಮಾಡಿಟ್ಟುಕೊಂಡಿರುವ ತರಕಾರಿ
ವಿಜಯಪುರದಲ್ಲಿ ಮಾರಾಟಕ್ಕಾಗಿ ಖರೀದಿ ಮಾಡಿ ಶೇಖರಣೆ ಮಾಡಿಟ್ಟುಕೊಂಡಿರುವ ತರಕಾರಿ   

ವಿಜಯಪುರ: ಕೋವಿಡ್-19 ಸೋಂಕು ಹರಡುವಿಕೆ ತಡೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶದೆಲ್ಲೆಡೆ ದಿಗ್ಬಂಧನ ಘೋಷಿಸಿರುವ ಹಿನ್ನೆಲೆಯಲ್ಲಿ ತರಕಾರಿ ಹಾಗೂ ಹಣ್ಣುಗಳ ಚಿಲ್ಲರೆ ಮಾರಾಟದ ಬೆಲೆ ಏಕಾಏಕಿ ಗಗನಕ್ಕೇರಿದೆ. ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಾರಂಭಿಸಿದೆ.

ದಿಗ್ಬಂಧನ ಘೋಷಣೆಯಾದ ನಂತರ ಮೂರ್ನಾಲ್ಕು ದಿನಗಳಿಂದ ತರಕಾರಿ ಹಾಗೂ ಹಣ್ಣುಗಳ ಬೆಲೆ ಏರುಗತಿಯಲ್ಲಿ ಸಾಗಿದೆ. ಬೆಲೆ ನಿಯಂತ್ರಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗುತ್ತಿದ್ದಾರೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ ಹಾಗೂ ಮಧ್ಯಮ ವರ್ಗದ ಜನರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಗ್ರಾಹಕ ಮುನೇಗೌಡ ಮಾತನಾಡಿ ತರಕಾರಿ ವ್ಯಾಪಾರಿಗಳು, ಮಂಡಿ ಮಾಲೀಕರು, ದಲ್ಲಾಳಿಗಳು ಇದೇ ಸಮಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಹಣ್ಣು ಮತ್ತು ತರಕಾರಿಗಳ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚುವಂತೆ ಮಾಡಿದ್ದಾರೆ. ರೈತರು, ವ್ಯಾಪಾರಸ್ಥರು ಕೇಳಿದಷ್ಟು ಬೆಲೆಗೆ ಕೊಡದಿದ್ದರೆ ಅವರಿಗೆ ಪರ್ಯಾಯ ಮಾರುಕಟ್ಟೆ ವ್ಯವಸ್ಥೆಯಿಲ್ಲ. ಅದಕ್ಕಾಗಿ ಅವರು ಕೇಳಿದಷ್ಟು ಬೆಲೆಗೆ ಮಾರಾಟ ಮಾಡುವ ಸ್ಥಿತಿ ಇದೆ.‌ ₹10 ರೂಪಾಯಿ ಸರಕನ್ನು ₹40 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಸ್ಥಳೀಯ ನಿವಾಸಿ ಅಶ್ವಥಪ್ಪ ಮಾತನಾಡಿ, ದಿಗ್ಬಂಧನ ಘೋಷಣೆಯಾಗುವುದಕ್ಕೂ ಮುಂಚಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಬಹುತೇಕ ತರಕಾರಿಗಳ ಬೆಲೆ ದುಪ್ಪಟ್ಟಾಗಿದೆ. ಕೆಲವೆಡೆ ಹಣ ಕೊಟ್ಟರೂ ತರಕಾರಿ, ಸೊಪ್ಪು ಸಿಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಪೊಲೀಸರ ಲಾಠಿ ಏಟಿನ ಭಯದಿಂದಾಗಿ ಜನರು ದೂರದ ಮಾರುಕಟ್ಟೆಗಳಿಗೆ ಹೋಗಲಾಗದೆ ಸಮೀಪದ ಸಣ್ಣಪುಟ್ಟ ಅಂಗಡಿಗಳು ಹಾಗೂ ಮನೆ ಬಳಿ ಬರುವ ತಳ್ಳುಗಾಡಿ ವ್ಯಾಪಾರಿಗಳಿಗೆ ಹೆಚ್ಚಿನ ಹಣ ಕೊಟ್ಟು ಹಣ್ಣು, ತರಕಾರಿ, ಸೊಪ್ಪು ಖರೀದಿಸುತ್ತಿದ್ದಾರೆ. ಈ ಮಧ್ಯೆ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಖರೀದಿಗೆ ಅವಕಾಶ ನೀಡಿರುವುದರಿಂದ ಜನರು ಒಟ್ಟಾಗಿ ಖರೀದಿಗೆ ಮುಗಿ ಬೀಳುವುದರಿಂದ ವ್ಯಾಪಾರಸ್ಥರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ತರಕಾರಿ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಬೆಲೆಗಳಲ್ಲಿ ಬೆಲೆ ಏರಿಕ ಲಾಭ ರೈತರಿಗೆ ಸಿಗುತ್ತಿಲ್ಲ. ಬದಲಿಗೆ ತರಕಾರಿ ಮಂಡಿ ಮಾಲೀಕರು, ವ್ಯಾಪಾರಿಗಳು, ದಲ್ಲಾಳಿಗಳು, ಮಧ್ಯವರ್ತಿಗಳು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.