
ಹೊಸಕೋಟೆ: ಜಗತ್ತಿನ ಎಲ್ಲೆಡೆಯೂ ಕಾಲ ಕಾಲಕ್ಕೆ ಮಹಾನ್ ದರ್ಶನಿಕರ ಜನನದಿಂದ ಪ್ರಜಾಪ್ರಭುತ್ವದ ಅಶಯ ಇಂದಿಗೂ ಜೀವಂತವಾಗಿದೆ. ವೇಮನರಂತಹ ಯೋಗಿಗಳು ಇಂದು ನಮ್ಮ ಜೊತೆ ಇಲ್ಲದಿರಬಹುದು. ಆದರೆ ಅವರ ಸಂದೇಶಗಳ ಅನಿವಾರ್ಯತೆ ಸಮಾಜಕ್ಕೆ ಇದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ತಾಲ್ಲೂಕು ಆಡಳಿತ ಹಾಗೂ ಕರ್ನಾಟಕ ರಾಜ್ಯ ರೆಡ್ಡಿ ಜನ ಸಂಘ ತಾಲ್ಲೂಕು ಘಟಕದಿಂದ ನಗರದ ತಾಲ್ಲೂಕು ಕಾರ್ಯಾಲಯದ ಆವರಣದಲ್ಲಿ ನಡೆದ ಮಹಾಯೋಗಿ ವೇಮನ ಅವರ 614ನೇ ಜಯಂತಿಯಲ್ಲಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ದಾರ್ಶನಿಕರಿಂದ ಸಮಾಜದ ಅಣಕು ಡೊಂಕು ತಿದ್ದುವ ಕೆಲಸ ಕಾಲಕಾಲಕ್ಕೆ ಆಗುತ್ತಿತ್ತು. ಅಂದರೆ ಬಸವಬಣ್ಣ, ಕನಕದಾಸ, ವೇಮನ, ಮಹಾತ್ಮಗಾಂಧಿ ಮೊದಲಾದವರೆಲ್ಲ ಜಾತಿರಹಿತ, ಸಮಾನತೆಯ ಸಮಾಜ ಕಟ್ಟುವ ಕನಸು ಹೊತ್ತು ತಮ್ಮ ಜೀವನ ತ್ಯಾಗ ಮಾಡಿದರು. ಇಂತಹ ಅಂತಹ ಮಹಾನ್ ಯೋಗಿಗಳ ಅದರ್ಶಗಳನ್ನು ಪಾಲಿಸುವ ಮೂಲಕ ಸಮಾಜದ ಶುದ್ಧಿಯಾಗಬೇಕಿದೆ ಎಂದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ವೇಮನ ಸರ್ವವನ್ನು ತ್ಯಜಿಸಿ ಮಹಾನ್ ಜ್ಞಾನಿ ಮತ್ತು ಯೋಗಿಯಾಗಿ ಸಮಾಜದ ಅಂಧಶ್ರದ್ದೆಗಳನ್ನು ಸಾಹಿತ್ಯದ ಮೂಲಕ ತಿದ್ದುವ ಮೂಲಕ ತೆಲುಗು ಸಾಹಿತ್ಯದ ಧ್ರುವತಾರೆಯಾಗಿದ್ದಾರೆ ಎಂದರು.
ಯೋಗಿ ವೇಮನ ಬಯಸಿದ್ದರೆ ಅರಸೊತ್ತಿಗೆ, ಸಿರಿ ಸಂಪತ್ತು ಹೊಂದಬಹುದಿತ್ತು. ಆದರೆ ಎಲ್ಲವನ್ನೂ ತೊರೆದು ಸಮಾಜದಲ್ಲಿನ ಮೇಲು ಕೀಳು, ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ಸಾಹಿತ್ಯದ ಮೂಲಕ ಸಮುದಾಯ ಜಾಗೃತಗೊಳಿಸಿ ಮಹಾಯೋಗಿಯಾದರು. ಇಂದಿನ ಯುವ ಪೀಳಿಗೆ ಅವರ ಆದರ್ಶ ಪಾಲಿಸುವ ದಿಟ್ಟ ಹೆಜ್ಜೆ ಇಟ್ಟರೆ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದರು.
ತಾಲ್ಲೂಕಿನಲ್ಲಿ ರೆಡ್ಡಿ ಸಮುದಾಯದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ 75 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಹಿರಿಯ ಸಾಧಕರನ್ನು ಗೌರವಿಸಲಾಯಿತು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಅನುಗೊಂಡನಹಳ್ಳಿಯಿಂದ ನಗರದ ಕೆಇಬಿ ಸರ್ಕಲ್ ವರೆಗೂ ಬೈಕ್ ರಾಲಿ ನಡೆಯಿತು. ಕೆಇಬಿ ಸರ್ಕಲ್ ನಿಂದ ತಾಲ್ಲೂಕು ಕಾರ್ಯಾಲಯದ ವರೆಗೂ ವೇಮನ ಭಾವಚಿತ್ರವನ್ನು ರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ವೀರಗಾಸೆ ಕುಣಿತ, ಡೊಳ್ಳುಕುಣಿತ, ಗಾರುಡಿ ಗೊಂಬೆಗಳ ನೃತ್ಯ ಎಲ್ಲರ ಆಕರ್ಷಣೆಯಾಗಿತ್ತು.
ಸಮುದಾಯದ ಮುಖಂಡರಾದ ಬಾಬುರೆಡ್ಡಿ ಕೇಶವರೆಡ್ಡಿ, ಕೇಶವರೆಡ್ಡಿ, ಬಲರಾಮರೆಡ್ಡಿ, ರಾಜರೆಡ್ಡಿ, ಜಯಪ್ರಕಾಶ್ ರೆಡ್ಡಿ, ಲತಾ ರೆಡ್ಡಿ, ಅನು ಪ್ರಕಾಶ್, ಎಚ್.ಕೆ. ನಾಗರಾಜ್, ಗೋಪಾಲ್ ರೆಡ್ಡಿ, ಕೃಷ್ಣಾರೆಡ್ಡಿ, ತಹಶೀಲ್ದಾರ್ ಕೆ.ಎಸ್. ಸೋಮಶೇಖರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ, ನಗರಸಭೆ ಆಯುಕ್ತ ನೀಲಲೋಚನಾ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ. ಪದ್ಮಾನಭ್, ಸಂಘದ ರಾಜ್ಯ ಸಂಘಟನಾ ಅಧ್ಯಕ್ಷ ಪ್ರಭಾಕರ್ ರೆಡ್ಡಿ ಇದ್ದರು.
ಜಾಗ ಕೊಟ್ಟರೆ ಡಿಪೊ ನಿರ್ಮಾಣ
ಶಾಸಕ ಶರತ್ ಬಚ್ಚೇಗೌಡ ಅವರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿ ಕೆಎಸ್‌ಆರ್‌ಟಿಸಿ ಡಿಪೊ ನಿರ್ಮಾಣಕ್ಕೆ ಬೇಕಾದ ಜಾಗ ತೋರಿಸಿದರೆ ಈಗಲೇ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಜಡಿಗೇನಹಳ್ಳಿ ಹೋಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ತೆರವುಗೊಂಡ ಗುಡ್ಡದಮ್ಮ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಅಗತ್ಯ ಧನಸಹಾಯ ಮಾಡಲು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲಾಗುವುದು. ನಗರದ ಅವಿಮುಕ್ತೆಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಬೇಕಾದ ಅನುದಾನಕ್ಕೆ ಮನವಿ ಸಲ್ಲಿಸಿದರೆ ಮಾರ್ಚ್ ವೇಳೆಗೆ ಅದನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಸಮುದಾಯ ಭವನಕ್ಕೆ ಜಾಗದ ಭರವಸೆ ತಾಲ್ಲೂಕಿನ ಸಮುದಾಯ ಮುಖಂಡರ ಮನವಿಗೆ ಸ್ಪಂದಿಸಿದ ಶಾಸಕ ತಾಲ್ಲೂಕಿನ ಅನುಗೊಂಡಾನಹಳ್ಳಿ ಹೋಬಳಿಯಲ್ಲಿ ರೆಡ್ಡಿ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಹೋಬಳಿಯ ಮುಖ್ಯ ರಸ್ತೆಯ ಸಮೀಪ ಕನಿಷ್ಠ 20 ಗುಂಟೆಯಾದರೂ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಕೊಡುವುದಾಗಿ ಭರವಸೆ ನೀಡಿದರು. ಜೊತೆಗೆ ಸಮುದಯ ಭವನ ನಿರ್ಮಾಣಕ್ಕೆ ವೈಯುಕ್ತಿಕ ಸಹಾಯ ಮಾಡುವುದಾಗಿಯೂ ತಿಳಿಸಿದರು.
ಪ್ರಜಾಸೌಧ ನಿರ್ಮಾಣಕಕೆ ಶೀಘ್ರ ಟೆಂಡರ್
ನಗರವು ವೇಗವಾಗಿ ಬೆಳೆಯುತ್ತಿರುವ ಕಾರಣ ಸುಸಜ್ಜಿತ ತಾಲ್ಲೂಕು ಕಾರ್ಯಾಲಯ ಕಟ್ಟಡದ ಅವಶ್ಯಕತೆ ಇದೆ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ₹16 ಕೋಟಿ ವೆಚ್ಚದ ನೂತನ ಪ್ರಜಾ ಸೌಧ ನಿರ್ಮಾಣಕ್ಕೆ ಸದನದಲ್ಲಿ ಅನುಮತಿ ನೀಡಲಾಗಿದೆ. ಸದ್ಯ ಕಾಮಗಾರಿ ನಡೆಲು ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.