ADVERTISEMENT

‘ವಿದ್ಯಾಮಿತ್ರ’ ಆ್ಯಪ್‌ ಸದ್ಬಳಕೆ ಮಾಡಿಕೊಳ್ಳಿ: ಶಾಸಕ ಈರಜ್ ಮುನಿರಾಜು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 3:55 IST
Last Updated 16 ನವೆಂಬರ್ 2025, 3:55 IST
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್‌ ತರಗತಿ ಮತ್ತು ಕಲಿಕೆಗಾಗಿ ವಿದ್ಯಾಮಿತ್ರ ಆ್ಯಪ್‌ ಬಿಡುಗಡೆಗೊಳಿಸಿದ ಶಾಸಕ ಧೀರಜ್ ಮುನಿರಾಜು
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್‌ ತರಗತಿ ಮತ್ತು ಕಲಿಕೆಗಾಗಿ ವಿದ್ಯಾಮಿತ್ರ ಆ್ಯಪ್‌ ಬಿಡುಗಡೆಗೊಳಿಸಿದ ಶಾಸಕ ಧೀರಜ್ ಮುನಿರಾಜು   

ದೊಡ್ಡಬಳ್ಳಾಪುರ: ಗ್ರಾಮೀಣ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಲು ಕೇಂದ್ರ ಸರ್ಕಾರ ವಿದ್ಯಾಮಿತ್ರ ಆ್ಯಪ್ ಅಭಿವೃದ್ಧಿ ಪಡಿಸಿದೆ. ಮಕ್ಕಳು ಆ್ಯಪ್‌ ಅನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಈರಜ್ ಮುನಿರಾಜು ತಿಳಿಸಿದರು.

ಶಿಕ್ಷಣ ಮತ್ತು ಸಾಕ್ಷರತಾ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪ್ರೌಢ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಹಾಗೂ ಪೋಷಕರು ಮತ್ತು ಶಿಕ್ಷಕರ ಮಹಾಸಭೆಯಲ್ಲಿ ಮಾತನಾಡಿದರು.

ವಿದ್ಯಾಮಿತ್ರ ಆಪ್ ಸಂಬಂಧಿತ ಕ್ಯೂಆರ್ ಕೋಡ್‌ ಅನ್ನು ತಾಲ್ಲೂಕಿನ ಪ್ರತಿ ಶಾಲೆಗೆ ನೀಡಲಾಗಿದೆ. ಮಕ್ಕಳು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ನೇರವಾಗಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್ ಪಡೆಯಬಹುದು ಎಂದರು.

ADVERTISEMENT

ಪಠ್ಯ ವಿಷಯಗಳಲ್ಲಿ ಪರಿಣಿತಿ ಪಡೆದ ಶಿಕ್ಷಕರು ಪ್ರತಿ ಪಠ್ಯವನ್ನು ಸರಳ ರೀತಿಯಲ್ಲಿ ಬೋಧಿಸಿರುವ ವಿಡಿಯೊ ಇಲ್ಲಿ ಲಭ್ಯವಿದ್ದು, ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಕಷ್ಟ ಎನಿಸುವ ಯಾವುದೇ ಪಠ್ಯ ವಿಷಯವನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ನಲ್ಲಿ ವೀಕ್ಷಿಸುವ ಮೂಲಕ ಕಲಿಕೆ ಸುಲಭವಾಗಲಿದೆ. ವಿದ್ಯಾರ್ಥಿಗಳು ವಿಶೇಷ ತರಗತಿ ಅಥವಾ ಟ್ಯೂಷನ್ ರೀತಿ ಬಳಸಬಹುದಾಗಿದೆ ಎಂದು ತಿಳಿಸಿದರು.

ಹಿಂದಿನ ವರ್ಷ 10ನೇ ತರಗತಿ ಫಲಿತಾಂಶ ಪ್ರಕಟವಾದಾಗ ನಮ್ಮ ತಾಲ್ಲೂಕಿನ ಫಲಿತಾಂಶದಲ್ಲಿ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಶೇ 50ಕ್ಕಿಂತಲೂ ಕಡಿಮೆ ಫಲಿತಾಂಶ ನೋಡಿ ಬೇಸರವಾಗಿತ್ತು. ವಿದ್ಯಾಮಿತ್ರ ಆ್ಯಪ್‌ ಬಳಸುವ ಮೂಲಕ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್‌ ತರಗತಿಗಳನ್ನು ಆಲಿಸಬಹುದಾಗಿದೆ ಎಂದರು.

ಈ ಬಾರಿ ತಾಲ್ಲೂಕಿನಲ್ಲಿ ಒಟ್ಟು 3,451 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಇದರಲ್ಲಿ 2016 ವಿದ್ಯಾರ್ಥಿಗಳು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲಾ ಮಕ್ಕಳಿದ್ದಾರೆ. ಅವರ ಕಲಿಕೆ ಹಾಗೂ ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಅಂಜನಾದ್ರಿ ಚಾರಿಟೇಬಲ್ ಟ್ರಸ್ಟ್, ಅಮೋಘವರ್ಷ ಎಜುಕೇಷನ್ ಟ್ರಸ್ಟ್ ವತಿಯಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಪಠ್ಯಗಳಿಗೆ ಸಂಬಂಧಪಟ್ಟ ಆನ್‌ಲೈನ್‌ ತರಗತಿಗಳು ಜತೆಗೆ ಐದು ಪ್ರಶ್ನೆ ಪತ್ರಿಕೆ ಹಾಗೂ ಅದಕ್ಕೆ ಉತ್ತರವನ್ನು ಆ್ಯಪ್‌ ನಲ್ಲಿ ನೀಡಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಆರ್‌. ನಾರಾಯಣಸ್ವಾಮಿ, ಮುಖ್ಯ ಶಿಕ್ಷಕ ಯಲ್ಲಪ್ಪಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.