ADVERTISEMENT

ಚೌಡೇಶ್ವರಿ ಜಂಬೂಸವಾರಿಗೆ ಸಿದ್ಧತೆ: ಮಧುವಣಗಿತ್ತಿಯಂತೆ ಸಜ್ಜುಗೊಂಡ ಆನೇಕಲ್‌ ಪಟ್ಟಣ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 2:35 IST
Last Updated 1 ಅಕ್ಟೋಬರ್ 2025, 2:35 IST
ಚೌಡೇಶ್ವರಿ ದೇವಿ 
ಚೌಡೇಶ್ವರಿ ದೇವಿ    

ಆನೇಕಲ್: ಆನೇಕಲ್‌ ಚೌಡೇಶ್ವರಿ ದೇವಿ ವಿಜಯದಶಮಿ ಉತ್ಸವಕ್ಕೆ ಪಟ್ಟಣ ಮಧುವಣಗಿತ್ತಿಯಂತೆ ಸಜ್ಜಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳು ವಿದ್ಯುತ್‌ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ.

ಗುರುವಾರ ಅ.2ರಂದು ತಿಲಕ್‌ ವೃತ್ತದಲ್ಲಿ ಚೌಡೇಶ್ವರಿ ದೇವಿ ಆನೆ ಅಂಬಾರಿ ಉತ್ಸವ ಜರುಗಲಿದೆ. 

ಕಲಾತಂಡಗಳು ಮೆರುಗು ನೀಡಲಿವೆ. ಚಂಡೆ, ಪಂಚಭೂತಂ, ಕಥಕ್ಕಳಿ, ಪುರವಂತಿಕೆ, ವೀರಗಾಸೆ, ಕೀಲು ಕುದುರೆ, ನಾಸಿಕ್‌ ಡ್ರಂ ಸೆಟ್‌, ಡೊಳ್ಳುಕುಣಿತ, ಪೂಜಾ ಕುಣಿತ ಸೇರಿದಂತೆ 30ಕ್ಕೂ ಹೆಚ್ಚು ಜಾನಪದ ಕಲಾತಂಡಗಳು ವೈಭವದ ಮೆರವಣಿಗೆಯಲ್ಲಿ ಭಾಗವಹಿಸಲಿವೆ.

ADVERTISEMENT

ದಸರಾ ಹಿನ್ನೆಲೆಯಲ್ಲಿ ಆನೆ ಅಂಬಾರಿ ವೀಕ್ಷಿಸಲು ಸಾವಿರಾರು ಜನರು ತಿಲಕ್‌ ವೃತ್ತದಲ್ಲಿ ಜಮಾವಣೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಆನೆ ಅಂಬಾರಿ ಮೆರವಣಿಗೆ ತಿಲಕ್‌ ವೃತ್ತದಲ್ಲಿ ಪ್ರಾರಂಭಗೊಂಡು ಥಳೀ ರಸ್ತೆ, ಚರ್ಚ್‌ ರಸ್ತೆ, ದೇವರಕೊಂಡಪ್ಪ ವೃತ್ತ, ಗಾಂಧಿ ವೃತ್ತವನ್ನು ಹಾದು ಚೌಡೇಶ್ವರಿ ದೇವಿ ದೇವಾಲಯ ತಲುಪಲಿದೆ. 

ಆನೇಕಲ್‌ನ ಚೌಡೇಶ್ವರಿ ದೇವಿ ಶರನ್ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ನೋಟ

ದೊಡ್ಡಬಳ್ಳಾಪುರ ತೊಗಟವೀರ ಪುಷ್ಪಾಂಡಜ ಮುನಿಗುರುಪೀಠದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಗುರುವಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜಾಪುರ ಶ್ರೀ, ಗುಮ್ಮಳಾಪುರ ಶ್ರೀ ಸಾನ್ನಿಧ್ಯ ‌‌‌ವಹಿಸಲಿದ್ದಾರೆ. ಶಾಸಕ ಬಿ.ಶಿವಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಸಂಸದ ಡಾ.ಸಿ.ಎನ್‌.ಮಂಜುನಾಥ್‌, ವಿಧಾನ ಪರಿಷತ್‌ ಸದಸ್ಯರಾದ ಗೋಪಿನಾಥರೆಡ್ಡಿ, ರಾಮೋಜಿಗೌಡ, ಪುರಸಭೆ ಪ್ರಭಾರ ಅಧ್ಯಕ್ಷ ಭುವನ ದಿನೇಶ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್‌ 22ರಿಂದ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರಗಳು ನಡೆದಿತ್ತು. ಪ್ರತಿನಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿರುವ ಸಾರ್ವಜನಿಕರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.