
ವಿಜಯಪುರ (ದೇವನಹಳ್ಳಿ): ಪಟ್ಟಣದ ಓವರ್ ಹೆಡ್ ಟ್ಯಾಂಕ್ ಮುಂಭಾಗದಲ್ಲಿ ಪುರಸಭೆಗೆ ಸೇರಿದ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಚರಂಡಿ ಕಾಮಗಾರಿ ಕೈಗೊಂಡ ಪರಿಣಾಮ ಸಾರ್ವಜನಿಕರು, ಸ್ಥಳೀಯ ನಿವಾಸಿಗಳು ಮತ್ತು ಅಂಗಡಿ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ ಪಟ್ಟಣದ ಶಿವಗಣೇಶ್ ಸರ್ಕಲ್‌ನಿಂದ ಶಿಡ್ಲಘಟ್ಟ ಕ್ರಾಸ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಪ್ರಭಾವಿಗಳ ಆಸ್ತಿ ಉಳಿಸುವ ದೃಷ್ಟಿಯಿಂದ ರಸ್ತೆ ಒಂದೇ ಬದಿಯಲ್ಲಿ ವಿಸ್ತರಣೆಗೆ ಮುಂದಾಗಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ರಾತ್ರೋರಾತ್ರಿ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಾಣಕ್ಕೆ ಕೈಹಾಕಿದ್ದರು. ಜೆಸಿಬಿ ಯಂತ್ರ ಬಳಸಿ ಚರಂಡಿಗಾಗಿ ಆಳವಾದ ಗುಂಡಿ ತೋಡಿ, ಕಬ್ಬಿಣದ ಪಟ್ಟಿ ಹಾಕಿ ಸಿಮೆಂಟ್ ಕಾಮಗಾರಿ ಆರಂಭಿಸಲಾಗಿತ್ತು.
ಆದರೆ,ಪುರಸಭೆ ಸ್ವತ್ತಿನಲ್ಲಿ ಈ ಕಾಮಗಾರಿ ನಡೆಸದಂತೆ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ತಕ್ಷಣ ಚರಂಡಿ ನಿರ್ಮಾಣ ಅಲ್ಲಿಗೆ ಸ್ಥಗಿತಗೊಳಿಸಲಾಯಿತು.
ಸಂಚಾರಕ್ಕೆ ತೀವ್ರ ಅಡ್ಡಿ: ಚರಂಡಿ ನಿರ್ಮಾಣಕ್ಕಾಗಿ ಜೆಸಿಬಿಯಿಂದ ಅಗೆದ ಮಣ್ಣನ್ನು ಅದೇ ರಸ್ತೆ ಮೇಲೆ ರಾಶಿ ಹಾಕಲಾಗಿದ್ದು, ಇಂದಿಗೂ ಅದನ್ನು ತೆರವುಗೊಳಿಸಲಾಗಿಲ್ಲ. ಈ ಕಾರಣದಿಂದ ರಸ್ತೆ ಸಂಚಾರ ದಾರಿ ತೀರಾ ಚಿಕ್ಕದ್ದಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಅಪಘಾತಕ್ಕೀಡಾಗುವ ಪ್ರಸಂಗ ಸಾಮಾನ್ಯವಾಗಿದೆ. ರಸ್ತೆಯ ಗಣನೀಯ ಭಾಗ ಮಣ್ಣಿನಿಂದ ಆವೃತವಾಗಿರುವುದರಿಂದ ಸಾರ್ವಜನಿಕರು ಮತ್ತು ವಾಹನ ಸವಾರರ ಸಂಚಾರ ದುಸ್ತರವಾಗಿದೆ.
ಮಣ್ಣಿನ ರಾಶಿಯಿಂದ ಮೇಲೇಳುವ ದೂಳಿನಿಂದ ಸ್ಥಳೀಯ ನಿವಾಸಿಗಳು ಮತ್ತು ಅಂಗಡಿ ಮಾಲೀಕರು ಬೇಸತ್ತಿದ್ದಾರೆ. ಇನ್ನು ಪಕ್ಕದಲ್ಲಿರುವ ಉದ್ಯಾನಕ್ಕೆ ಹೋಗುವ ಮಾರ್ಗವೂ ಸಂಪೂರ್ಣ ಬಂದ್ ಆಗಿದೆ. ವಾಯುವಿಹಾರಕ್ಕೆಂದು ಬರುವವರು ಪರದಾಡುವಂತಾಗಿದೆ.
‘ಪ್ರಭಾವಿಗಳ ಆಸ್ತಿ ಉಳಿಸುವ ದುರುದ್ದೇಶದಿಂದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ವಿಸ್ತರಣೆ ಹೆಸರಿನಲ್ಲಿ ಪುರಸಭೆ ಸ್ವತ್ತಿನಲ್ಲಿ ನಡೆಸಿದ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಪುರಸಭೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಮೇಲೆ ಹಾಕಿರುವ ಮಣ್ಣು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು’ಎಂದು ಸ್ಥಳೀಯ ನಿವಾಸಿಗಳಾದ ಸೋಮಶೇಖರ್, ಮುನಿರಾಜು ಮತ್ತು ಹರೀಶ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.