ADVERTISEMENT

‘ಅಖಂಡ ಭಾರತ ಸಂಕಲ್ಪ’ ಪಂಜಿನ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 2:22 IST
Last Updated 19 ಆಗಸ್ಟ್ 2025, 2:22 IST
ವಿಜಯಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ ನಡೆಯಿತು
ವಿಜಯಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಪಂಜಿನ ಮೆರವಣಿಗೆ ನಡೆಯಿತು   

ವಿಜಯಪುರ (ದೇವನಹಳ್ಳಿ): ವಿಶ್ವ ಹಿಂದೂ ಪರಿಷದ್, ಬಜರಂಗದಳ, ಹಿಂದು ಜಾಗರಣ ವೇದಿಕೆಯಿಂದ ವಿಜಯಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು.

ಪಟ್ಟಣದ ಗ್ರಾಮ ದೇವತೆ ಗಂಗಾತಾಯಿ ದೇವಾಲಯದಿಂದ ಆರಂಭಗೊಂಡ ಪಂಜಿನ ಮೆರವಣಿಗೆ ಗಾಂಧಿಚೌಕ, ಮುಖ್ಯಬೀದಿ, ಶಿವಗಣೇಶ, ಚನ್ನಕೇಶವ ದೇವಾಲಯವರೆಗೂ ಸಾಗಿತು. ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ವಿವಿಧ ಘೋಷಣೆ ಕೂಗುತ್ತಾ ಸಾಗಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಾಗ್ಮಿ ಸ್ವಸ್ತಿಕ್ ಕನ್ಯಾಡಿ ಮಾತನಾಡಿ, 1947 ಆಗಸ್ಟ್ 14 ರ ಮಧ್ಯರಾತ್ರಿ ಭಾರತಕ್ಕೆ ಸ್ವಾತಂತ್ರ್ಯ ಬಂತೆಂದು ಭಾವಿಸುವ ಆ ಕ್ಷಣದ ಜತೆಗೆ ಘಟಿಸಿದ ರಾಷ್ಟ್ರೀಯ ಮಹಾದುರಂತವೇ ದೇಶ ವಿಭಜನೆ. ಸ್ವಾರ್ಥ, ಅಧಿಕಾರದ ದುರಾಸೆ, ದುರ್ಬಲ ನಾಯಕತ್ವದ ಮೂರ್ಖ ನಿರ್ಣಯದ ಪಾಪದ ಫಲವೇ ಅಖಂಡವಾಗಿದ್ದ ಭಾರತವನ್ನು ತುಂಡರಿಸಿತು ಎಂದು ಹೇಳಿದರು. 

ADVERTISEMENT

ರಾಜಕೀಯ ಒಲೈಕೆಗಾಗಿ ರಾಷ್ಟ್ರವನ್ನು ತ್ರಿಖಂಡ ಮಾಡಲಾಗಿದೆ. ಅದನ್ನು ಮತ್ತೆ ಅಖಂಡ ಮಾಡಲು ಹಿಂದೂ ಸಮಾಜ ಒಂದಾಗುವ ಅನಿವಾರ್ಯತೆ ಇದೆ ಎಂದರು.

ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಕೆ.ವಿ.ಮುನಿರಾಜು ಮಾತನಾಡಿದರು.

ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ರವಿ, ಬಜರಂಗದಳ ಜಿಲ್ಲಾ ಸಂಯೋಜಕ ವಿ.ಕೃಷ್ಣಮೂರ್ತಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಯೋಜಕಿ ದೀಪಕ್ಕ, ಸರೋವರ ಗಣಪತಿ ಸೇವಾ ಸಮಿತಿ ಭಾರತಿ ಪಭುದೇವ್, ಒಬಿಸಿ ಜಿಲ್ಲಾ ಅಧ್ಯಕ್ಷ ಕನಕರಾಜ್, ಬಿಜೆಪಿ ಟೌನ್ ಪ್ರಧಾನ ಕಾರ್ಯದರ್ಶಿ ಮುನೀಂದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವಿ, ಮುಖಂಡರಾದ ಲೋಕೇಶ್, ವೆಂಕಟೇಶ್, ಶಾಮಣ್ಣ, ಜಿ.ಎಂ.ಚಂದ್ರಣ್ಣ, ರಾಮಕೃಷ್ಣ ಹೆಗ್ಗಡಿ, ಭಗವಾನ್, ಮುನಿವೀರಣ್ಣ, ಗಣೇಶ, ಬಜರಂಗದಳ ಪದಾಧಿಕಾರಿಗಳಾದ ಬಲರಾಮ, ಮಣಿ, ಮಹೇಶ್ ಬಾಬು, ಮುನಿಕೃಷ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.