ವಿಜಯಪುರ(ದೇವನಹಳ್ಳಿ): ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಶುಕ್ರವಾರ ಪ್ಲಾಸ್ಟಿಕ್ ಬಳಕೆ ವಿರುದ್ಧ ಕಾರ್ಯಾಚರಣೆ ನಡೆಸಲು ತೆರಳಿದ್ದ ಪುರಸಭೆಯ ಅಧಿಕಾರಿಗಳನ್ನು ವ್ಯಾಪಾರಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ವಾರದ ಸಂತೆಯಲ್ಲಿ ವ್ಯಾಪಾರಿಗಳು, ಗ್ರಾಹಕರಿಗೆ ಪ್ಲಾಸ್ಟಿಕ್ ಕವರ್ ನೀಡಬಾರದು ಎಂದು ಸಂತೆ ಮೈದಾನದಲ್ಲಿ ಗುರುವಾರ ನೋಟಿಸ್ ಅಂಟಿಸಿದ್ದರೂ ಕೆಲವು ವ್ಯಾಪಾರಿಗಳು, ನೋಟಿಸ್ ಕಿತ್ತುಹಾಕಿ, ಪ್ಲಾಸ್ಟಿಕ್ ಕವರ್‌ಗಳಲ್ಲಿ ತರಕಾರಿ, ದಿನಸಿ ಸಾಮಗ್ರಿ ನೀಡುತ್ತಿದ್ದರು.
ಈ ವೇಳೆ ಸಂತೆ ಮೈದಾನಕ್ಕೆ ಭೇಟಿ ನೀಡಿದ್ದ ಆರೋಗ್ಯ ನಿರೀಕ್ಷಕಿ ಲಾವಣ್ಯ, ‘ಪ್ಲಾಸ್ಟಿಕ್ ಕವರ್ ಮಾರಾಟ ಮತ್ತು ಬಳಕೆಗೆ ನಿಷೇಧವಿದೆ. ಈಗಾಗಲೇ ನೋಟಿಸ್ ಅಂಟಿಸಿದ್ದೇವೆ. ಆದರೂ ಸರ್ಕಾರದ ನಿಯಮ ಉಲ್ಲಂಘಿಸಿರುವುದು ಸರಿಯಲ್ಲ. ಹೀಗೆ ಮಾಡಿದರೆ ದಂಡ ವಿಧಿಸಿ, ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಅಧಿಕಾರಿಗಳ ತಂಡವನ್ನು ತರಾಟೆಗೆ ತೆಗೆದುಕೊಂಡ ವ್ಯಾಪಾರಿಗಳು, ಸರ್ಕಾರ ಮೊದಲು ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಸ್ಥಗಿತಕ್ಕೆ ಶಿಫಾರಸ್ಸು ಮಾಡಬೇಕು. ಅದನ್ನು ಬಿಟ್ಟು ವ್ಯಾಪಾರಿಗಳಿಗೆ ತೊಂದರೆ ಕೊಡುವುದು ಸರಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕವರ್ ಕೊಡದಿದ್ದರೆ ಗ್ರಾಹಕರು ಬರುವುದಿಲ್ಲ. ಅವರೂ ಬ್ಯಾಗ್ ತರುವುದಿಲ್ಲ. ನಾವು ಬಟ್ಟೆ ಬ್ಯಾಗ್ ಕೊಟ್ಟರೆ, ಅವರು ಅದಕ್ಕೆ ಹಣ ಪಾವತಿಸುವುದಿಲ್ಲ. ನಾವು ವ್ಯಾಪಾರ ಮಾಡುವುದಾದರೂ ಹೇಗೆ?, ಪದೇ ಪದೇ ಸಣ್ಣ ವ್ಯಾಪಾರಿಗಳ ಮೇಲೆ ದಾಳಿ ಮಾಡುತ್ತೀರಿ, ದಂಡ ವಿಧಿಸುತ್ತೀರಿ, ಪ್ಲಾಸ್ಟಿಕ್ ಕವರ್‌ಗಳನ್ನು ಟನ್‌ಗಟ್ಟಲೇ ಪಟ್ಟಣಕ್ಕೆ ತರುವಾಗ ಹಿಡಿಯಿರಿ, ಪ್ರಕರಣ ದಾಖಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಸೇರಿ ಎಲ್ಲರೂ ಅಗತ್ಯ ಸಾಮಗ್ರಿ ಖರೀದಿಸುತ್ತಾರೆ. ಅವರು ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಹೋಗುತ್ತಾರೆ. ಅವರಿಗೂ ದಂಡ ಹಾಕ್ತೀರಾ?’ ಎಂದು ಪ್ರಶ್ನಿಸಿದರು.
ವ್ಯಾಪಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದ ಅಧಿಕಾರಿಗಳು, ‘ಈ ವಾರ ನಿಮಗೆ ವಿನಾಯಿತಿ ಕೊಡುತ್ತೇವೆ. ಮುಂದಿನ ವಾರ ಇದೇ ರೀತಿ ನೀವು ಪ್ಲಾಸ್ಟಿಕ್ ಮಾರಾಟ ಮಾಡಿದರೆ, ದಂಡ ವಿಧಿಸಿ ಪ್ರಕರಣ ದಾಖಲಿಸುತ್ತೇವೆ. ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಪ್ಲಾಸ್ಟಿಕ್ ಕೇಳಿದರೆ, ಮಾಹಿತಿ ಕೊಡಿ ಅವರಿಗೂ ದಂಡ ವಿಧಿಸುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.