ADVERTISEMENT

ವಿಜಯಪುರ: ರಾಜಕಾಲುವೆ ಸ್ವಚ್ಛತೆ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 8:40 IST
Last Updated 11 ಫೆಬ್ರುವರಿ 2026, 8:40 IST
ವಿಜಯಪುರ ಪಟ್ಟಣದ ಶಿಡ್ಲಘಟ್ಟ ಕ್ರಾಸ್ ಬಳಿ ಇರುವ ರಾಜಕಾಲುವೆ ಮಲಿನಗೊಂಡಿರುವುದು
ವಿಜಯಪುರ ಪಟ್ಟಣದ ಶಿಡ್ಲಘಟ್ಟ ಕ್ರಾಸ್ ಬಳಿ ಇರುವ ರಾಜಕಾಲುವೆ ಮಲಿನಗೊಂಡಿರುವುದು   

ವಿಜಯಪುರ (ದೇವನಹಳ್ಳಿ): ಮಳೆ ನೀರು ಸರಾಗವಾಗಿ ಹರಿಯುವಂತಾಗಲು ನಿರ್ಮಿಸಿರುವ ರಾಜಕಾಲುವೆ, ದೊಡ್ಡ ಚರಂಡಿಗಳ ಸ್ವಚ್ಛತೆ ಮರೀಚಿಕೆಯಾಗಿದೆ.

ಪಟ್ಟಣದ ಜನಸಂದಣಿ ಇರುವ ಸ್ಥಳಗಳಲ್ಲಿ ಇರುವ ಬಹುತೇಕ ರಾಜಕಾಲುವೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ತ್ಯಾಜ್ಯ ನಿರ್ವಹಣೆ ಕೊರತೆ, ಹೂಳು ತೆಗೆಯದಿರುವುದರಿಂದ ನೀರು ಸರಾಗವಾಗಿ ಮುಂದೆ ಹರಿಯುವ ಮಾರ್ಗವೇ ಇಲ್ಲದಂತಾಗಿದೆ.

ಶಿಡ್ಲಘಟ್ಟ ಕ್ರಾಸ್‍ನಿಂದ ದೇವನಹಳ್ಳಿ ಮುಖ್ಯರಸ್ತೆಗೆ ಹೋಗುವ ರಸ್ತೆ ಬದಿಯಲ್ಲಿರುವ ರಾಜಕಾಲುವೆಯಲ್ಲಿ ಗಿಡಗಂಟಿಳು, ಪ್ಲಾಸ್ಟಿಕ್ ತ್ಯಾಜ್ಯದಿಂದ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಮಂಡಿಬಲೆ ರಸ್ತೆಯಲ್ಲಿ ಹಾದುಹೋಗಿರುವ ರಾಜಕಾಲುವೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾರಾಜಿಸುತ್ತಿದೆ.

ADVERTISEMENT

ಇನ್ನೂ ಕೆಲವು ಕಡೆ ಅವೈಜ್ಞಾನಿಕ ರಾಜಕಾಲುವೆಗಳು, ದೊಡ್ಡ ಚರಂಡಿಗಳು, ಮೋರಿಗಳನ್ನು ನಿರ್ಮಿಸಲಾಗಿದೆ. ಇದರಿಂದ ತಿಂಗಳಾನುಗಟ್ಟಲೇ ನಿಂತಲ್ಲೇ ನಿಲ್ಲುವ ನೀರು ಹಸಿರು ಪಾಚಿ ಕಟ್ಟಿಕೊಂಡು ದುರ್ವಾಸನೆ ಬೀರತೊಡಗಿದೆ.

ಸದ್ಯ ರಾಜಕಾಲುವೆಯಲ್ಲಿ ಮಣ್ಣು ತುಂಬಿಕೊಂಡು, ಗಿಡಗಂಟಿಗಳು ಬೆಳೆದು ನಿಂತಿದೆ. ಪ್ಲಾಸ್ಟಿಕ್ ಸೇರಿದಂತೆ ಘನ ತ್ಯಾಜ್ಯಗಳು ತುಂಬಿ ತುಳುಕುತ್ತಿವೆ. ರಾಜಕಾಲುವೆಗಳ ಸ್ವಚ್ಛತೆಯ ನಿರ್ಲಕ್ಷ್ಯದಿಂದ ಪಟ್ಟಣದ ಪರಿಸರಕ್ಕೆ ಧಕ್ಕೆ ತಂದೊಡ್ಡಿದೆ.

ಮಳೆಗಾಲದಲ್ಲಿ ಅನಾಹುತ ತಪ್ಪಿಸಿ: ಪಟ್ಟಣದಲ್ಲಿ ರಾಜಕಾಲುವೆ, ದೊಡ್ಡ ಚರಂಡಿಗಳು ಸ್ವಚ್ಛತಾ ನಿರ್ವಹಣೆಯಲ್ಲಿ ಮರೀಚಿಕೆ ಆಗಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆಗಾಲದಲ್ಲಿ ಧಾರಾಕಾರ ಮಳೆ ಸುರಿದರೆ ಅನಾಹುತಗಳು ಆಗುವುದರಲ್ಲಿ ಸಂಶಯವಿಲ್ಲ. ಈಗ ರಾಜಕಾಲುವೆ ಹಾಗೂ ದೊಡ್ಡ ಚರಂಡಿಯಲ್ಲಿ ಹೂಳು, ತುಂಬಿರುವ ಮಣ್ಣು, ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಸುಸ್ಥಿತಿಯಲ್ಲಿಟ್ಟರೆ ಮಳೆಗಾಲದಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಬಹುದು. ಅಧಿಕಾರಿಗಳು ಇತ್ತ ಗಮನ ಹರಿಸುವಂತೆ ಪಟ್ಟಣದ ನಿವಾಸಿ ಕಿರಣ್ ಆಗ್ರಹಿಸಿದರು.

ವಿಜಯಪುರ ಪಟ್ಟಣದ ಮೋರಿ ಬಳಿಯ ರಾಜಕಾಲುವೆಯಲ್ಲಿ ಗಿಡಗಂಟಿ ಬೆಳೆದಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.