
ವಿಜಯಪುರ (ದೇವನಹಳ್ಳಿ): ದೇವನಹಳ್ಳಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ವಿಜಯಪುರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಸಾಲು-ಸಾಲು ಸಮಸ್ಯೆಗಳು ಎದ್ದು ಕಾಣುತ್ತಿದೆ.
ಪ್ರಸ್ತುತ ರಾಜ್ಯ ಬಜೆಟ್‍ನಲ್ಲಿಯಾದರೂ ವಿಜಯಪುರ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಪೂರಕ ಮನ್ನಣೆ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಇದ್ದಾರೆ ಸ್ಥಳೀಯರು.
ವಿಜಯಪುರ ಹೋಬಳಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ವಾಣಿಜ್ಯ ವಹಿವಾಟಿನಲ್ಲಿ ದೇವನಹಳ್ಳಿಗಿಂತ ಉತ್ತಮವಾಗಿದೆ. ವಿಜಯಪುರ ತಾಲ್ಲೂಕು ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದೆ. ಈಗಾಗಲೇ ಅನೇಕ ಬಾರಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಹೋರಾಟ ಸಮಿತಿ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ವಿಶೇಷವಾಗಿ ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ರಾಜ್ಯ ಬಜೆಟ್‍ನಲ್ಲಿ ವಿಜಯಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿಸಿ, ವಿಶೇಷ ಅನುದಾನ ಕಲ್ಪಿಸಿಕೊಡುವವರೇ ಎಂಬುದು ಸ್ಥಳೀಯರ ನಿರೀಕ್ಷೆಯಾಗಿದೆ.
ಪ್ರಸ್ತುತ ಪಟ್ಟಣದಲ್ಲಿ 60 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಆದರೆ, ಇಂದಿಗೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಮುಖ್ಯವಾಗಿ ಒಳಚಂರಡಿ, ರಸ್ತೆ, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ, ಉದ್ಯಾನ, ಸೂಕ್ತ ಮಾರುಕಟ್ಟೆ, ಕ್ರೀಡಾಂಗಣ, ಕಸವಿಲೇವಾರಿ ಘಟಕ, ಬಸ್ ನಿಲ್ದಾಣ ಹಾಗೂ ತಂಗುದಾಣ, ಕಾಣದ ಅಭಿವೃದ್ಧಿ, ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆ ಹೀಗೆ...ಹತ್ತಾರು ಸಮಸ್ಯೆಗಳು ಕಾಡುತ್ತಿದೆ.
ಪಟ್ಟಣದ ಬಹುತೇಕ ರಸ್ತೆಗಳು ಹಳ್ಳ-ಗುಂಡಿಗಳು ಬಿದ್ದಿದೆ. ರಸ್ತೆಯ ಮೇಲೆ ಹರಿಯುವ ಒಳಚರಂಡಿ ನೀರು ಅಸಹ್ಯ ಹುಟ್ಟಿಸುತ್ತಿದೆ. ನಾಯಿಗಳ ಸಂಖ್ಯೆ ಮಿತಿ ಮೀರಿದೆ. ಶೌಚಾಲಯಗಳ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ರಾಜ್ಯ ಬಜೆಟ್‍ನಲ್ಲಿ ಸೂಕ್ತ ಅನುದಾನ ಬಿಡುಗಡೆಗೆ ಸ್ಥಳೀಯರು ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವ ಹಂತಕ್ಕೆ ತಲುಪುತ್ತಿವೆ. ಖಾಸಗಿ ಶಾಲೆಗಳು ನಾಯಿ ಕೊಡೆಗಳಂತೆ ಮೇಲೆಳುತ್ತಿದೆ. ಬಡ ಮಧ್ಯಮ ವರ್ಗದ ಜನರ ಅನುಕೂಲಕ್ಕಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಟೆಕ್ನಿಕಲ್, ಡಿಪ್ಲೋಮಾ ಕಾಲೇಜು ಇಲ್ಲದಿರುವುದು ಬೇಸರದ ಸಂಗತಿಯಾಗಿದೆ.
ವಿಜಯಪುರ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿರುವ ಕೆ ಎಸ್.ಆರ್ ಟಿಸಿ ಡಿಪೊ ಕಾಮಗಾರಿಗೆ ಅಗತ್ಯ ಅನುದಾನವನ್ನು ರಾಜ್ಯ ಬಜೆಟ್‍ನಲ್ಲಿ ಬಿಡುಗಡೆ ಮಾಡಿ, ತ್ವರಿತ ಕಾಮಗಾರಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನರು ಕೃಷಿ, ತೋಟಗಾರಿಕೆ, ರೇಷ್ಮೆ, ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ತರಕಾರಿ, ಹಣ್ಣು, ಹೂ ಮಾರಾಟಕ್ಕೆ ಇಂದಿಗೂ ಸೂಕ್ತ ಮಾರುಕಟ್ಟೆ ಇಲ್ಲವಾಗಿದೆ. ಸ್ಥಳೀಯವಾಗಿ ಸೂಕ್ತ ಮಾರುಕಟ್ಟೆ ಕಲ್ಪಿಸುವಂತೆ ರೈತರು ಆಗ್ರಹಿಸಿದ್ದಾರೆ.
ಕ್ರೀಡಾಂಗಣ ಅಭಿವೃದ್ಧಿಯಾಗಲಿ: ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಪಕ್ಕದಲ್ಲಿರುವ ಕ್ರೀಡಾಂಗಣದಲ್ಲಿ ಮೂಲಸೌಲಭ್ಯಗಳ ಕೊರತೆ ಕಾಡುತ್ತಿದೆ. ಇದರಿಂದ ಕ್ರೀಡಾಸಕ್ತರು ನಾನಾ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ರಾಜ್ಯ ಬಜೆಟ್‍ನಲ್ಲಿ ಪಟ್ಟಣದ ಕ್ರೀಡಾಂಗಣ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಒತ್ತಾಯವಾಗಿದೆ.
ಪ್ರಮುಖ ಬೇಡಿಕೆ
ವಿಜಯಪುರ ತಾಲ್ಲೂಕು ಘೋಷಣೆ
ಎಚ್.ಎನ್ ವ್ಯಾಲಿ 3 ಹಂತದ ಶುದ್ಧೀಕರಣ
ವಿಜಯಪುರದವರೆಗೂ ಮೆಟ್ರೋ ವಿಸ್ತರಣೆ
ಸೂಕ್ತ ರಸ್ತೆ ಸಂಪರ್ಕ ಕಲ್ಪಿಸಬೇಕು
ಸರ್ಕಾರಿ ಆಸ್ಪತ್ರೆಯನ್ನು ಮೇಲ್ದೆರ್ಜೆಗೇರಿಸಬೇಕು
ಒಳಚಂರಡಿ ವ್ಯವಸ್ಥೆ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
ಪುರಸಭೆಗೆ ಸುಸಜ್ಜಿತ ಕಟ್ಟಡ ನಿರ್ಮಾಣ
ರೈತರಿಗೆ ಸೂಕ್ತ ಮಾರುಕಟ್ಟೆ
ಕ್ರೀಡಾಂಗಣ ಅಭಿವೃದ್ಧಿ
ಕೆರೆ, ಕುಂಟೆ ಅಭಿವೃದ್ಧಿ, ರಾಜಕಾಲುವೆ ಒತ್ತುವರಿ ತೆರವು
ಹೈಟೆಕ್ ಬಸ್ ನಿಲ್ದಾಣ, ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ
ಪುರಾತನ ದೇವಾಲಯ ಜೀರ್ಣೋದ್ಧಾರ
ಹೋಬಳಿಯ ಕೆರೆಗಳಿಗೆ ಹರಿಯುತ್ತಿರುವ ಎಚ್‍ಎನ್ ವ್ಯಾಲಿ ಯೋಜನೆಯ ನೀರನ್ನು 3 ಹಂತದಲ್ಲಿ ಶುದ್ಧೀಕರಣ ಮಾಡಲು ರಾಜ್ಯ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕು. ವಿಜಯಪುರ ಪಟ್ಟಣದ ಜನರಿಗೆ ಕಾವೇರಿ ನೀರು ನೀಡುವುದು. ನೀರಿನ ಅಭಾವ ಇರುವ ಕಡೆ ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ಭವಣೆ ನೀಗಿಸುವುದು, ಪ್ರತಿ ಗ್ರಾಮದಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸುವುದು. ಕೆರೆ, ಕುಂಟೆಗಳನ್ನು ಅಭಿವೃದ್ಧಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ರಾಜ್ಯ ಬಜೆಟ್‍ನಲ್ಲಿ ಕ್ರಮ ವಹಿಸಬೇಕೆಂದು ಗ್ರಾಮೀಣ ಜನತೆ ಆಗ್ರಹಿಸಿದ್ದಾರೆ.
ದೇವನಹಳ್ಳಿ ಕ್ಷೇತ್ರಕ್ಕೆ ಪ್ರಪ್ರಥಮ ಬಾರಿಗೆ ಸಚಿವ ಸ್ಥಾನ ದೊರೆತಿದ್ದು, ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಅವರು ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ ವಿಜಯಪುರ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.