
ವಿಜಯಪುರ (ದೇವನಹಳ್ಳಿ): ‘ನಾವು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಬಾಡಿಗೆ ಕಟ್ಟಲು ಕೈಯಲ್ಲಿ ಕಾಸಿಲ್ಲ. ಮಕ್ಕಳ ಓದಿಗೆ ಸಾಲ ಮಾಡಿದ್ದೇವೆ, ತಿಂಗಳಾದರೆ ಬಡ್ಡಿ ಹಣ ಕಟ್ಟಬೇಕು. ಹಣವಿಲ್ಲದೆ 9 ತಿಂಗಳಿನಿಂದ ಆಸ್ಪತ್ರೆಗೆ ಹೋಗಿಲ್ಲ. ಜೀವನ ನಡೆಸೋದು ಕಷ್ಟವಾಗಿದೆ.. ’ ಹೀಗೆ ಪುರಸಭೆ ನೌಕರರು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.
ವಿಜಯಪುರ ಪಟ್ಟಣದ ಪುರಸಭೆಯಲ್ಲಿನ ಪೌರ ಕಾರ್ಮಿಕರು, ನೀರುಗಂಟಿಗಳು, ಬೀದಿ ದೀಪ ನಿರ್ವಹಿಸುವ ಹೀಗೆ ಒಟ್ಟು 17 ಪುರಸಭೆ ನೌಕರರು, 2011ರಿಂದ ಬಾಕಿ ಉಳಿಸಿಕೊಂಡಿರುವ ₹20,57,712 ಭವಿಷ್ಯ ನಿಧಿ (ಪಿಎಫ್) ಹಣಕ್ಕಾಗಿ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.
‘ಭವಿಷ್ಯ ನಿಧಿಗಾಗಿ ನೌಕರರು, ಯಲಹಂಕ ನ್ಯೂಟೌನ್‌ನಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿಗೆ ಅಲೆದಾಡುತ್ತಿದ್ದಾರೆ. ಇಲ್ಲಿನ ಅಧಿಕಾರಿಗಳಿಗೆ ಅನೇಕ ಬಾರಿ ಅರ್ಜಿ ಸಲ್ಲಿಸಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಪುರಸಭೆ ನೌಕರರು ಬೇಸರ ವ್ಯಕ್ತಪಡಿಸಿದ್ದಾರೆ.
‘ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿಯ ಅಧಿಕಾರಿಗಳು ಸರಿಯಾಗಿ ಅರ್ಜಿ ಸಲ್ಲಿಸಿ ಎನ್ನುತ್ತಾರೆ. ಅವರು ಹೇಳಿದಂತೆ ಅರ್ಜಿ ಸಲ್ಲಿಸಿದ ಬಳಿಕ ಅಲ್ಲಿನ ಅಧಿಕಾರಿಗಳು ತಾಂತ್ರಿಕ ದೋಷವಿದೆ. ಸಾಫ್ಟ್‌ವೇರ್ ಬದಲಾಗಿದೆ. ಸರ್ವರ್ ಸಮಸ್ಯೆ ಇದೆ. ಕೇಸ್ ವರ್ಕರ್ ಇಲ್ಲ’ ಎಂದು ಹೇಳಿ ದಿನದೂಡುತ್ತಿರುವುದಕ್ಕೆ ಇದೀಗ ಪುರಸಭೆಯ ನೌಕರರಲ್ಲಿ ಆತಂಕ ಉಂಟು ಮಾಡಿದೆ.
‘ನನಗೆ ಓದು ಬರಹ ಇಲ್ಲ. ಇಲ್ಲಿನ ಪುರಸಭೆಯಲ್ಲಿ 30 ವರ್ಷ ನೀರುಗಂಟಿಯಾಗಿ ಕಾರ್ಯನಿರ್ವಹಿಸಿದ್ದೇನೆ. ವಯೋನಿವೃತ್ತಿಗೊಂಡು 4 ತಿಂಗಳಾಗಿದೆ. ಭವಿಷ್ಯ ನಿಧಿ ಹಣಕ್ಕಾಗಿ ಈಗಾಗಲೇ ನಾಲ್ಕೈದು ಬಾರಿ ಭವಿಷ್ಯ ನಿಧಿ ಕಚೇರಿಗೆ ಹೋಗಿ ಹಣ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದೇನೆ’ ಎಂದು ಸಿ.ಎಂ.ಮುತ್ಯಾಲಪ್ಪ ಹೇಳಿದರು.
‘ಹೃದಯ ಶಸ್ತ್ರಚಿಕಿತ್ಸೆ ಒಳಗಾಗಿದ್ದೇನೆ. ದಿನಕ್ಕೆ 9 ಮಾತ್ರೆ ಸೇವಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಹಣವಿಲ್ಲದೆ 8 ತಿಂಗಳಿಂದ ಆಸ್ಪತ್ರೆಗೆ ಹೋಗಿಲ್ಲ. ಮಗನಿಗೆ ಮದುವೆ ಮಾಡಬೇಕು. ಕೈಯಲ್ಲಿ ಹಣ ಇಲ್ಲ. ಸಂಬಂಧಪಟ್ಟವರೂ ಈಗಲಾದರೂ ನಮಗೆ ಭವಿಷ್ಯ ನಿಧಿ ಹಣವನ್ನು ಖಾತೆಗೆ ಪಾವತಿಸಿದರೆ ಕಷ್ಟದಲ್ಲಿರುವ ನಮಗೆ ಉಪಯೋಗವಾಗುತ್ತದೆ’ ಎಂದು ಅವರು ಹೇಳುತ್ತಾರೆ.
‘ಪಟ್ಟಣದ ಪುರಸಭೆಯಲ್ಲಿ 30 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಭವಿಷ್ಯ ನಿಧಿ ಹಣ ಇಂದು ಬರುತ್ತೆ, ನಾಳೆ ಬರುತ್ತೆ ಎಂದುಕೊಂಡೆ ದಿನದೂಡುತ್ತಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಮಾಡಿದ್ದೇವೆ. ಈಗ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಭವಿಷ್ಯ ನಿಧಿ ಹಣ ಬಂದರೆ ಕಷ್ಟಕ್ಕೆ ಆಸರೆಯಾಗಬಹುದು’ ಎಂದು ಪುರಸಭೆ ಕಂದಾಯ ವಸೂಲಿಗಾರ ಅಜ್ಮತ್ ತಿಳಿಸಿದರು.
ನಾವು ಪಾವತಿಸಿದ್ದೇವೆ
2011ರಿಂದ ಬಾಕಿ ಉಳಿಸಿಕೊಂಡಿರುವ 17 ನೌಕರರಿಗೆ ಸೇರಿದ ಭವಿಷ್ಯ ನಿಧಿ ಹಣವನ್ನು ಪುರಸಭೆಯಿಂದ ಭವಿಷ್ಯ ನಿಧಿ ಕಚೇರಿಗೆ ಪಾವತಿಸಿದ್ದೇವೆ. ನೌಕರರ ಖಾತೆಗೆ ಭವಿಷ್ಯ ನಿಧಿ ಹಣ ಜಮಾ ಮಾಡುವಂತೆ ಅಗತ್ಯ ದಾಖಲೆಗಳನ್ನು ಕಚೇರಿಯ ಅಧಿಕಾರಿಗಳಿಗೆ ನೀಡಿ ಮನವಿ ಮಾಡಿದ್ದೇವೆ. ಅವರು ಯಾವ ಕಾರಣಕ್ಕೆ ತಡೆ ಹಿಡಿದಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಪುರಸಭೆ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.