
ವಿಜಯಪುರ (ದೇವನಹಳ್ಳಿ): ಹೆಜ್ಜೆ ಹೆಜ್ಜೆಗೂ ಹಳ್ಳ ಗುಂಡಿಗಳು... ಪಾದಾಚಾರಿಗಳು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಲೇ ಬೇಕು. ನಿಯಂತ್ರಣ ತಪ್ಪಿದರೆ ಅಪಘಾತ ನಿಶ್ಚಿತ.
–ಇದು ವಿಜಯಪುರ ಪಟ್ಟಣ ಸಂಪರ್ಕಿಸುವ ನಾಗರಬಾವಿಯ ರಸ್ತೆಯ ಅವ್ಯವಸ್ಥೆಯ ಚಿತ್ರಣ..
ಪಟ್ಟಣದಿಂದ ಸುಮಾರು ಅರ್ಧ ಕಿ.ಮೀ ರಸ್ತೆ ಈಗ ಗುಂಡಿಗಳ ಅಗರವಾಗಿದೆ. ಪಾದಾಚಾರಿಗಳು, ವಿದ್ಯಾರ್ಥಿಗಳು, ವಾಹನ ಸವಾರರ ಪಾಲಿಗೆ ಈ ರಸ್ತೆ ನರಕ ಸೃಷ್ಟಿಸುತ್ತಿದೆ.
ವಿಜಯಪುರ ಅಮಾನಿಕೆರೆಯ ರಸ್ತೆ ಅಭಿವೃದ್ಧಿ ಪಡಿಸುವ ಸಲುವಾಗಿ ರಸ್ತೆ ಬಂದ್ ಮಾಡಲಾಗಿದೆ. ಈ ಕಾರಣಕ್ಕೆ ಚಿಕ್ಕಬಳ್ಳಾಪುರದಿಂದ ವಿಜಯಪುರಕ್ಕೆ ಸಂಪರ್ಕಿಸುವ ವಾಹನಗಳು ಪುರ, ಚಂದೇನಹಳ್ಳಿ ಮಾರ್ಗವಾಗಿ ಬದಲಿಸಲಾಗಿದೆ. ಹೀಗಾಗಿ ವಿಜಯಪುರ ಮೇಲೂರು ಮಾರ್ಗದ ನಾಗರಬಾವಿಯ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಚಿಕ್ಕ ಚಿಕ್ಕ ಹಳ್ಳಗಳು ಈಗ ವಿಸ್ತರಿಸಿಕೊಂಡು ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ಇದು ದ್ವಿಚಕ್ರ ವಾಹನ ಸವಾರರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ.
ಗುಂಡಿ ತಪ್ಪಿಸುವ ಭರದಲ್ಲಿ ಎದುರು ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವುದು, ಮಾತಿನ ಚಕಮಕಿ ಸರ್ವೆ ಸಾಮಾನ್ಯ. ರಾತ್ರಿ ಸಂಚಾರ ಬಲುಕಷ್ಟಕರವಾಗಿದೆ. ಪಟ್ಟಣಕ್ಕೆ ಬರುವ ಗ್ರಾಮೀಣ ಪ್ರದೇಶದ ಜನರು ಹೂ, ಹಣ್ಣು, ತರಕಾರಿ ಸಾಗಾಟ ಮಾಡಲು ತೊಂದರೆ ಪಡುವಂತಾಗಿದೆ. ಪಾದಾಚಾರಿಗಳು, ಶಾಲಾ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ಇನ್ನೂ ಮಳೆ ಸುರಿದಾಗ ಗುಂಡಿಗಳಲ್ಲಿ ನೀರು ನಿಂತು ರಸ್ತೆ, ಹಳ್ಳ ತಿಳಿಯದಂತಾಗಿ ವಾಹನ ಸವಾರರು ಪರದಾಡುವಂತಾಗಿದೆ. ಧೂಳು, ಹೆಜ್ಜೆ ಹೆಜ್ಜೆಗೂ ಗುಂಡಿಗಳಿಂದ ತುಂಬಿ ಹೋಗಿದ್ದು, ದ್ವಿಚಕ್ರ ವಾಹನ ಸವಾರರು ಇದನ್ನು ತಪ್ಪಿಸಲು ಹೋಗಿ ಅವಘಡಗಳಾಗಿವೆ ಎಂಬುದು ಸವಾರರು ಆಳಲು ತೋಡಿಕೊಂಡಿದ್ದಾರೆ.
ಪಟ್ಟಣಕ್ಕೆ ಸಂಪರ್ಕಿಸುವ ನಾಗರಬಾವಿ ರಸ್ತೆ ತುಂಬಾ ಹಾಳಾಗಿದೆ. ಇದರಿಂದ ಪಾದಾಚಾರಿಗಳು ನಡೆಯಲು ಸಾಧ್ಯವಾಗುತ್ತಿಲ್ಲ. ದೊಡ್ಡಗುಂಡಿಗಳಿಂದ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ಕ್ಷೇತ್ರದ ಸಚಿವರು ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಕೊಮ್ಮಸಂದ್ರ ನಿವಾಸಿ ಮುನೇಶ್ ಆಗ್ರಹಿಸಿದ್ದಾರೆ.
ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತದೆ. ಸಂಬಂಧಿಸಿದ ಅಧಿಕಾರಿಗಳು ಕನಿಷ್ಠ ದೊಡ್ಡ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿಲ್ಲ. ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. ಕ್ಷೇತ್ರದ ಶಾಸಕರು, ಸಚಿವರು ಇತ್ತ ಗಮನಹರಿಸಬೇಕು ಎಂದು ಜೆಡಿಎಸ್ ಯುವ ಮುಖಂಡ ಕಿರಣ್ ಒತ್ತಾಯಿಸಿದ್ದಾರೆ.
- ಗ್ರಾಮೀಣ ಪ್ರದೇಶದ ಬಹುತೇಕ ರೈತರು ಸಂಚರಿಸಲು ನಾಗರಬಾವಿ ರಸ್ತೆಯನ್ನು ಅವಲಂಭಿಸಿದ್ದಾರೆ. ದೊಡ್ಡ ಗಾತ್ರದ ಗುಂಡಿಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಕೂಡಲೇ ಅಧಿಕಾರಿಗಳು ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕು.ಕಿರಣ್ ಜೆಡಿಎಸ್ ಯುವ ಮುಖಂಡ
ನಾಗರಬಾವಿ ರಸ್ತೆ ಹಾಳಾಗಿರುವುದು ಜನರ ಪ್ರಾಣಕ್ಕೆ ಕುತ್ತು ತಂದಿದೆ. ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗಿದ್ದು ಕ್ಷೇತ್ರದ ಶಾಸಕರು ಸಚಿವರು ಇತ್ತ ಗಮನ ಹರಿಸಿ ರಸ್ತೆ ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು.ಮುನೇಶ್ ಕೊಮ್ಮಸಂದ್ರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.