ವಿಜಯಪುರ (ದೇವನಹಳ್ಳಿ): ಬುಧವಾರ ನಂದಿ ಗಿರಿಧಾಮದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರ ತಾಲ್ಲೂಕು ಕೇಂದ್ರ ಘೋಷಣೆ ಬಗ್ಗೆ ಚರ್ಚೆಯಾಗಲಿದೆಯೇ ಎಂಬ ಕುತೂಹಲ ನಾಗರಿಕರಲ್ಲಿ ಮೂಡಿದೆ.
ವಿಜಯಪುರ ತಾಲ್ಲೂಕು ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ಆರ್ಥಿಕ, ಭೌಗೋಳಿಕ ಸುಸ್ಥಿತಿಯಲ್ಲಿದೆ. ವಾಣಿಜ್ಯ ವಹಿವಾಟಿನಲ್ಲಿ ದೇವನಹಳ್ಳಿಗಿಂತ ಉತ್ತಮವಾಗಿದೆ. ಈಗಾಗಲೇ ಅನೇಕ ಬಾರಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಹೋರಾಟ ಸಮಿತಿ ಪದಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಈ ವಿಚಾರವಾಗಿ ಪಟ್ಟಣದಲ್ಲಿ ವೇದಿಕೆ ನಿರ್ಮಿಸಿ ದೊಡ್ಡ ಮಟ್ಟದ ಹೋರಾಟ, ಚರ್ಚೆ ನಡೆಯುವ ಮೂಲಕ ಹಲವಾರು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ.
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಸಮಸ್ಯೆ ಇತ್ಯರ್ಥಕ್ಕಾಗಿ ನಂದಿ ಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆಯನ್ನು ಆಯೋಜಿಸಿದ್ದು, ಈ ಮೂರು ಜಿಲ್ಲೆಗಳ ಅಭಿವೃದ್ಧಿಗಾಗಿ ಹಲವು ತೀರ್ಮಾನ ಕೈಗೊಳ್ಳುವ ಜತೆಗೆ ಹೆಚ್ಚಿನ ಅನುದಾನ ನೀಡುವ ಭರವಸೆ ಇದೆ.
ಈ ಸಂದರ್ಭದಲ್ಲಿ ವಿಜಯಪುರ ತಾಲ್ಲೂಕು ಘೋಷಣೆ ಆಗಬಹುದು ಎಂಬುದು ಸ್ಥಳೀಯರ ನಿರೀಕ್ಷೆ ಆಗಿದೆ. ವಿಶೇಷವಾಗಿ ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ವಿಜಯಪುರ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿಸಲು ಅವರು ಆಸಕ್ತಿ ತೋರುವರೇ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.
ವಿಜಯಪುರ ತಾಲ್ಲೂಕು ಘೋಷಿಸುವಂತೆ ಒತ್ತಾಯಿಸಿ ಸರ್ಕಾರದ ಗಮನಕ್ಕೆ ತಂದರೂ ಈ ಬಗ್ಗೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ತೋರಲಿಲ್ಲ. ಸಚಿವ ಸಂಪುಟದಲ್ಲಿ ತಾಲ್ಲೂಕು ಘೋಷಣೆಗೆ ಮುಂದಾಗಬೇಕುರವಿಕುಮಾರ್, ಬಿಜೆಪಿ ಮುಖಂಡ ವಿಜಯಪುರ
ತಾಲ್ಲೂಕು ಘೋಷಣೆ ಕುರಿತು ಚರ್ಚೆಯಾಗುವ ಸಂಬಂಧ ನಮಗೆ ಮಾಹಿತಿ ಇಲ್ಲ. ಘೋಷಣೆಯಾದರೆ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ.-ದಿನ್ನೂರು ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.