ADVERTISEMENT

ಆತಂಕದಲ್ಲಿ ವಿಮಾನ ನಿಲ್ದಾಣ ಸುತ್ತಲಿನ ಗ್ರಾಮಸ್ಥರು

ಕೊರೊನಾ: ಗ್ರಾಮಗಳಲ್ಲಿ ನೆಲೆಸಿರುವ ವಿಮಾನ ನಿಲ್ದಾಣ, ಕೈಗಾರಿಕೆಗಳ ಕಾರ್ಮಿಕರು

ವಡ್ಡನಹಳ್ಳಿ ಬೊಜ್ಯನಾಯ್ಕ
Published 23 ಮಾರ್ಚ್ 2020, 14:51 IST
Last Updated 23 ಮಾರ್ಚ್ 2020, 14:51 IST

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಕ್ಕಪಕ್ಕದಲ್ಲಿರುವ 12ಕ್ಕೂ ಹೆಚ್ಚು ಗ್ರಾಮಗಳ ನಾಗರಿಕರು ಕೊರೊನ ವೈರಸ್ ಸೋಂಕು ಹರಡುವ ಆತಂಕದಲ್ಲಿದ್ದಾರೆ.

ವಿಮಾನ ನಿಲ್ದಾಣದ ಸುತ್ತಮುತ್ತ ಇರುವ ಐಷಾರಾಮಿ ಹೋಟೆಲ್, ವಿವಿಧ ಅಂಗಡಿಗಳು, ರೆಸ್ಟೋರೆಂಟ್, ಸಿಹಿ ತಿನಸುಗಳ ಮಳಿಗೆಗಳಲ್ಲಿ ಕೆಲಸ ಮಾಡುವ ಬಹುತೇಕರು ನೆರೆ ರಾಜ್ಯದ ಕೆಲಸಗಾರರು.ಇವರೆಲ್ಲರೂ ಅತಿ ಹೆಚ್ಚು ವಾಸವಿರುವುದು ಈ 12ಕ್ಕೂ ಹೆಚ್ಚು ಗ್ರಾಮಗಳಲ್ಲಿ. ಇದು ಅವನ್ನು ಆತಂಕಕ್ಕೆ ದೂಡಿದೆ.

₹ 2,000 ಬಾಡಿಗೆಯಿಂದ 10,000ವರೆಗೆ ಬಾಡಿಗೆ ನೀಡಿ ಹಲವರು ವಾಸವಿದ್ದಾರೆ. ವಿಮಾನ ನಿಲ್ದಾಣದ ಪಕ್ಕದಲ್ಲೆ ಕೈಗಾರಿಕಾ ವಲಯವಿರುವುದರಿಂದ ಹಲವಾರು ಉದ್ಯೋಗಿಗಳು ಇಲ್ಲಿ ನೆಲೆಸಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ಹತ್ತು ಸಾವಿರಕ್ಕಿಂತ ಹೆಚ್ಚು ನೌಕರರು ಗ್ರಾಮಗಳಲ್ಲಿ ನೆಲೆಸಿದ್ದಾರೆ. ಯಾವ ಸಂದರ್ಭದಲ್ಲಿ ಕೊರೊನ ವೈರಸ್ ಯಾರ ಮೂಲಕ ಹರಡಲಿದೆಯೇ ಎಂಬ ಭಯ ಹಲವರನ್ನು ನಿದ್ದೆಗೆಡಿಸಿದೆ ಎನ್ನುತ್ತಾರೆ ಕಾಡಯರಪ್ಪನಹಳ್ಳಿ ನಿವಾಸಿ ಆಶೋಕ್.

ADVERTISEMENT

ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಕಾರ್ಗೋವಿಮಾನದಲ್ಲಿ ಅಮದು ವಸ್ತುಗಳನ್ನು ಬೇರೆಡೆ ಸಾಗಾಣಿಕೆ ಮಾಡಲಾಗುತ್ತಿದೆ, ಅಲ್ಲಿ ಕೆಲಸ ಮಾಡುವವರು ಇಲ್ಲಿ ಬಾಡಿಗೆ ಇರುವ ಕಾರ್ಮಿಕರು, ಹೋಟೆಲ್‌ಗಳಲ್ಲಿ ನೌಕರರೂ ಇಲ್ಲಿಯೇ ನೆಲೆಸಿರುವವರು.ಸೋಂಕು ಸುರಕ್ಷತೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಯಾವುದೇ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಅವರು ಹೇಳುತ್ತಾರೆ.

ಖಾಸಗಿ ಕಂಪನಿಗಳು ಗುಣಮಟ್ಟದ ಮಾಸ್ಕ್ ನೀಡಿಲ್ಲ ಎಂಬುದು ಸ್ಥಳೀಯರ ಆರೋಪ. ವಿಮಾನ ನಿಲ್ದಾಣ ಅಕ್ಕ ಪಕ್ಕದಲ್ಲಿರುವ ಕನ್ನಮಂಗಲ, ಯರ್ತಿಗಾನಹಳ್ಳಿ, ಅಕ್ಲೇನಹಳ್ಳಿ, ಮಲ್ಲೇನಹಳ್ಳಿ, ಕಾಡಯರಪನಹಳ್ಳಿ, ಭಟ್ರಮಾರನಹಳ್ಳಿ, ಸಿಂಗನಾಯಕನಹಳ್ಳಿ,ಬಂಡಕೋಡಿಗೇನಹಳ್ಳಿ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಮಿಕರಿದ್ದಾರೆ.ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಈವರೆಗೆ ಸುಳಿದಿಲ್ಲ, ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ನೋಡಿ ಮನೆಯಲ್ಲೆ ಇರಬೇಕಾ, ಬೇರೆಡೆ ಎಲ್ಲಿಯಾದರು ಹೋಗಬೇಕಾ ಎಂಬ ಗೊಂದಲದಲ್ಲಿ ಸಿಲುಕಿದ್ದೇವೆ ಎನ್ನುತ್ತಾರೆ ಕನ್ನಮಂಗಲ ಗ್ರಾಮಸ್ಥರು.

ನಿರ್ಲಕ್ಷ್ಯ ವಹಿಸಿದ ಜಿಲ್ಲಾಡಳಿತ: ಆರೋಪ

ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತವು ವಿಮಾನ ನಿಲ್ದಾಣದ ಸುತ್ತಮುತ್ತ ಇರುವ ಗ್ರಾಮಗಳ ಬಗ್ಗೆ ನಿರ್ಲಕ್ಷ್ಯವಹಿಸಿದೆ. ಸೋಂಕಿನ ಕಡಿವಾಣಕ್ಕೆ ಯಾವುದೆ ಜಾಗೃತಿ ಕಾರ್ಯಕ್ರಮ ನಡೆಸಿಲ್ಲ. ಟಿ.ವಿ.ಮತ್ತು ಮತ್ತು ಪತ್ರಿಕೆಯಲ್ಲಿ ಬರುವ ಮಾಹಿತಿಯಿಂದ ನಮಗೆ ತಿಳಿಯುತ್ತಿದೆ. ಅಧಿಕಾರಿಗಳು ವಿಮಾನ ನಿಲ್ದಾಣದ ಮತ್ತು ಆಕಾಶ್ ಆಸ್ಪತ್ರೆಗೆ ಮಾತ್ರ ಸೀಮಿತರಾಗಿದ್ದಾರೆ. ಅಕಸ್ಮಿಕ ಸೋಂಕು ಹರಡಿದರೆ ನಮ್ಮ ಗತಿಯೇನು. ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸುತ್ತಾರೆ ಯರ್ತಿಗಾನಹಳ್ಳಿಯ ಶಿವಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.