ADVERTISEMENT

ಸುಣ್ಣಘಟ್ಟದಲ್ಲಿ ಕಸ ವಿಲೇವಾರಿ ಘಟಕಕ್ಕೆ ಗ್ರಾಮಸ್ಥರ ವಿರೋಧ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 2:18 IST
Last Updated 31 ಡಿಸೆಂಬರ್ 2025, 2:18 IST
ದೇವನಹಳ್ಳಿ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಸ್ಥಳಕ್ಕೆ ಆಗಮಿಸಿದ್ದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದರು
ದೇವನಹಳ್ಳಿ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ ಸ್ಥಳಕ್ಕೆ ಆಗಮಿಸಿದ್ದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ವಾಗ್ವಾದ ನಡೆಸಿದರು   

ಕುಂದಾಣ (ದೇವನಹಳ್ಳಿ): ತಾಲ್ಲೂಕಿನ ಸುಣ್ಣಘಟ್ಟ ಗ್ರಾಮಕ್ಕೆ ಹೊಂದಿಕೊಂಡ ಕೆಐಎಡಿಬಿ ಭೂಮಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸುವ ಪ್ರಯತ್ನಕ್ಕೆ ಸೋಮವಾರ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಜನವಸತಿ ಪ್ರದೇಶದ ಅಂಚಿನಲ್ಲಿ ಘಟಕ ನಿರ್ಮಾಣವಾದರೆ ಆರೋಗ್ಯ, ಪರಿಸರ ಮತ್ತು ಮಕ್ಕಳ ಭವಿಷ್ಯಕ್ಕೆ ಗಂಭೀರ ಅಪಾಯ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು, ಯಾವುದೇ ಕಾರಣಕ್ಕೂ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದರು.

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ತ್ಯಾಜ್ಯ ವಿಲೇವಾರಿ ಘಟಕವನ್ನು ಸುಣ್ಣಘಟ್ಟ ಗ್ರಾಮದ ಸರ್ವೆ ನಂ. 49/2ರ ಕೆಐಎಡಿಬಿ ಪ್ರದೇಶದಲ್ಲಿ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದ ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಯಾವುದೇ ಮುನ್ಸೂಚನೆ ನೀಡದೆ ಕಾಮಗಾರಿ ಆರಂಭಿಸಲು ಯತ್ನಿಸಿರುವುದು ಅಕ್ರಮ ಹಾಗೂ ಜನವಿರೋಧಿ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯೆ ಮೀನಾಕ್ಷಿ ಕೃಷ್ಣಮೂರ್ತಿ ಮಾತನಾಡಿ, ‘ಕಸ ವಿಲೇವಾರಿ ಘಟಕ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದೆ. ಅದನ್ನು ದೇವನಹಳ್ಳಿ ಕ್ಷೇತ್ರದ ಗ್ರಾಮಕ್ಕೆ ತಂದು ಜನರ ಆರೋಗ್ಯದ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಶಾಸಕರು ತಮ್ಮ ಕ್ಷೇತ್ರದಲ್ಲೇ ಘಟಕ ನಿರ್ಮಿಸಬೇಕು’ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಧೀರಜ್ ಮುನಿರಾಜು ವಿರುದ್ಧವೂ ಆಕ್ಷೇಪ ವ್ಯಕ್ತವಾಯಿತು.

ಘಟಕಕ್ಕೆ ಗುರುತಿಸಿರುವ ಸ್ಥಳದ ಸಮೀಪದಲ್ಲೇ ಮನೆ, ಕೃಷಿಭೂಮಿ ಹಾಗೂ ಮಕ್ಕಳ ಸಂಚಾರವಿದೆ. ಇಲ್ಲಿ ಘಟಕ ಸ್ಥಾಪನೆಯಾದರೆ ದುರ್ವಾಸನೆ, ನೆಲದ ನೀರು ಮತ್ತು ವಾಯುಮಾಲಿನ್ಯ ಉಂಟಾಗಿ ಗ್ರಾಮ ಸಂಪೂರ್ಣವಾಗಿ ಅನಾರೋಗ್ಯಕ್ಕೆ ತಳ್ಳಲ್ಪಡುವ ಭೀತಿ ಇದೆ. ಕೈಗಾರಿಕಾ ಅಭಿವೃದ್ಧಿಗೆ ಜಾಗ ನೀಡಿದ್ದೇವೆ. ಕಸ ಸುರಿಯಲು ಅಲ್ಲ ಎಂದು ರೈತ ನಂಜುಂಡಮೂರ್ತಿ ಹೇಳಿದರು.

ಈ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಸಾರ್ವಜನಿಕ ಸಮಾಲೋಚನೆ ಹಾಗೂ ಪರಿಸರ ಪರಿಣಾಮಗಳ ಸಮಗ್ರ ಮೌಲ್ಯಮಾಪನ ಪೂರ್ಣಗೊಳ್ಳುವವರೆಗೆ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಯೋಜನೆಯನ್ನು ಹಿಂಪಡೆಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.