ADVERTISEMENT

ಹೊಸಕೋಟೆ: ಸರ್ವೆಗೆ ಬಂದ ಅಧಿಕಾರಿಗಳ ನೀರಿಳಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 4:43 IST
Last Updated 26 ಡಿಸೆಂಬರ್ 2025, 4:43 IST
   

ನಂದಗುಡಿ(ಹೊಸಕೋಟೆ): ಬೆಚ್ಚರಕ್ ಮದುರೆ ಹಳೆ ಊರು ಗ್ರಾಮದ ಕುಂಟೆ ಸಮೀಕ್ಷೆಗೆ ಬುಧವಾರ ಬಂದಿದ್ದ ಅಧಿಕಾರಿಗಳನ್ನು ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿದರು.

ನಂದಗುಡಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ತೇಜಸ್ ಗೌಡ, ಭೂಮಾಪಕ ಜಾಕಿರ್ ಹುಸೇನ್ ಸರ್ಕಾರಿ ಕುಂಟೆ ಸರ್ವೇಗೆ ಬಂದಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮಸ್ಥರು ಸರ್ವೆ ಕಾರ್ಯ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಸರ್ಕಾರಿ ಜಾಗವನ್ನು ಖಾಸಗಿ ಕಂಪನಿಗೆ ಪರಭಾರೆ ಮಾಡಲು ಸರ್ವೆ ಮಾಡುತ್ತಿದ್ದೀರಾ ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮಸ್ಥರು ಪ್ರತಿರೋಧ ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಧಿಕಾರಿಗಳು ಸ್ಥಳದಿಂದ ತೆರಳಿದರು.

ADVERTISEMENT

ಬೆಚ್ಚರಕ್ ಮಧುರೆ ಹಳೆ ಊರು ಮತ್ತು ನಂದಗುಡಿ ಗ್ರಾಮದ ಮಧ್ಯೆ ಸುಮಾರು ನಾಲ್ಕು ತಿಂಗಳ ಹಿಂದೆಯೇ ಖಾಸಗಿ ಕಂಪನಿಯೊಂದು 43 ಎಕರೆಯಲ್ಲಿ ಉಗ್ರಾಣ ನಿರ್ಮಿಸುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ  ಕುಂಟೆ ಜಾಗವನ್ನು ಕಂಪನಿಗೆ ಮಾರಾಟ ಮಾಡಲಾಗಿದೆ.  ಪುರಾತನ ಬಾವಿ ಮತ್ತು ಮುನೇಶ್ವರ ದೇವಾಲಯದ ಸುತ್ತ ಜಾಗ ಒತ್ತುವರಿ ಮಾಡಿಕೊಂಡು ತಂತಿ ಬೇಲಿ ಅಳವಡಿಸಿ, ತಡೆಗೋಡೆ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ತಂತಿ ಬೆಲಿ ಹಾಕಿ ದೇವಾಲಯಕ್ಕೆ ತೆರಳಲು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ಇಲ್ಲದೆ ವೇರ್‌ಹೌಸ್ ಮಾಲೀಕರು ಅಕ್ರಮವಾಗಿ ತಡೆಗೋಡೆ ನಿರ್ಮಾಣಕ್ಕೆ 20 ಅಡಿ ಆಳದ ಕಂದಕ ಅಗೆಯಲು ಸಿಡಿಮದ್ದು ಬಳಸಿದ್ದಾರೆ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾಮಗಾರಿ ಸ್ಥಗಿತಗೊಳಿಸುವಂತೆ ನಾಲ್ಕು ತಿಂಗಳ ಹಿಂದೆಯೇ ನೋಟಿಸ್‌ ನೀಡಿದೆ. ಸೂಕ್ತ ದಾಖಲೆ ಸಲ್ಲಿಸುವಂತೆ ವೇರ್ ಹೌಸ್ ಮಾಲೀಕರಿಗೆ ನೋಟಿಸ್‌ ನೀಡಿದೆ. ಇಷ್ಟಾದರೂ ಬುಧವಾರ ಕುಂಟೆ ಜಾಗ ಸರ್ವೆ ಮಾಡಲು ಅಧಿಕಾರಿಗಳು ಬಂದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒತ್ತುವರಿಯಲ್ಲಿ ಅಧಿಕಾರಿಗಳ ಶಾಮೀಲು ಆಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ತಾತ, ಮುತ್ತಾತನ ಕಾಲದಿಂದಲೂ ಪ್ರತಿ ಯುಗಾದಿಯಂದು ಗ್ರಾಮಸ್ಥರು ಕುಂಟೆಯ ಬಳಿಯ ಮುನೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಬಾವಿ ಬಳಿ ಪಚ್ಚೆ ಇಡುತ್ತೇವೆ. ಇಂತಹ ಪುರಾತನ ಸ್ಥಳವನ್ನೇ ಇಂದು ಹಣದ ಆಸೆಗೆ ಅಧಿಕಾರಿಗಳು ಮಾರಾಟ ಮಾಡಿದ್ದಾರೆ. 
ಎಚ್‌.ಎಲ್‌. ಸುಬ್ರಮಣಿ, ಗ್ರಾಮಸ್ಥ
ಪರಂಪರೆ ಕುರುವು ಆದ ಕುಂಟೆಯ ಬಳಿಯ ಪುರಾತನ ಮುನೇಶ್ವರ ದೇವಾಲಯ ಮತ್ತು ಬಾವಿ ಸುತ್ತ ಗ್ರಾಮಸ್ಥರೆಲ್ಲರೂ ಸೇರಿ ಕಾಂಪೌಂಡ್ ಗೋಡೆ ಕಟ್ಟಿ ಇದು ಸರ್ಕಾರಿ ಜಾಗ ಎಂದು ಫಲಕ ಅಳವಡಿಸಿದ್ದೇವೆ. ಆದರೂ ಅಧಿಕಾರಿಗಳ ಕುಮ್ಮಕ್ಕಿನಿಂದ ವೇರ್ ಹೌಸ್ ಮಾಲೀಕರು ಅತಿಕ್ರಮಣ ಮಾಡಿ ಕಾಂಪೌಂಡ್ ನಿರ್ಮಿಸುತ್ತಿದ್ದಾರೆ
ಎಚ್‌.ಆರ್‌. ವೆಂಕಟೇಶ್, ಗ್ರಾಮಸ್ಥ
ವೇರ್ ಹೌಸ್ ಕಂಪನಿ 43 ಎಕರೆಯಲ್ಲಿ 20 ಅಡಿ ಎತ್ತರದ ಕಾಂಪೌಂಡ್ ಗೋಡೆ ನಿರ್ಮಿಸುತ್ತಿದೆ. ಇದರಿಂದ ನಮ್ಮೂರಲ್ಲಿ ರೈತ ತಮ್ಮ ಹೊಲಗಳಿಗೆ ಹೋಗಬೇಕೆಂದರೆ 2 ರಿಂದ 3 ಕಿ ಮೀ ಸುತ್ತಿ ಬಳಸಿ ಹೋಗುವ ಪರಿಸ್ಥಿತಿ ಬಂದಿದೆ 
ಚಂದ್ರಪ್ಪ, ಗ್ರಾಮಸ್ಥ
ನಂದಗುಡಿಯ ಸರ್ವೇ ನಂ.159 ಈ ಹಿಂದೆ ಎರಡು ಹಂತದಲ್ಲಿ ಸರ್ವೇ ಆಗಿದೆ. 1925ರಲ್ಲಿ ಅದು ಕುಂಟೆ ಎಂದು ಸರ್ವೆ ಆಗಿತ್ತು. ನಂತರದಲ್ಲಿ ಸರ್ವೆ ಆಗಿದ್ದರಲ್ಲಿ ಉದ್ದಂಡಚಾರಿ ಎಂದು ತೋರಿಸುತ್ತಿದೆ. ಈಗ ಅಂಕಿತ ಮತ್ತು ಗಿರೀಶ್ ಎನ್ನುವ ಹೆಸರಿನಲ್ಲಿ ಪಹಣಿ ಇದೆ. ಸಂಬಂದಪಟ್ಟವರಿಗೆ ಒಂದು ವಾರದೊಳಗೆ ದಾಖಲೆ ಸಲ್ಲಿಸುವಂತೆ ತಿಳಿಸಿದ್ದೇವೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತವೆ.
ತೇಜಸ್ ಗೌಡ, ಕಾರ್ಯದರ್ಶಿ, ನಂದಗುಡಿ ಗ್ರಾಮ ಪಂಚಾಯತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.