ದೊಡ್ಡಬಳ್ಳಾಪುರ: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 75ನೇ ಜನ್ಮ ದಿನಾಚರಣೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಗುರುವಾರ ಆಚರಿಸಲಾಯಿತು.
ನಗರದ ಸಿದ್ಧಲಿಂಗಯ್ಯ ವೃತ್ತದ ಬೆಸ್ಕಾಂನ ಕಚೇರಿ ಮುಂದೆ ಇರುವ ವಿಷ್ಣುವರ್ಧನ್ ಪುತ್ಥಳಿಗೆ ತಾಲ್ಲೂಕು ಡಾ.ವಿಷ್ಣು ಸೇನಾ ಸಮಿತಿ ಹಾಗೂ ಡಾ.ವಿಷ್ಣುವರ್ಧನ್ ಅಭಿಮಾನಿಗಳು ಮಾಲಾರ್ಪಣೆ ಮಾಡಿ, ಕೇಕ್ ಕತ್ತರಿಸಿ ಸಿಹಿ ವಿತರಿಸಿದರು. ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಶಾಲಾ ಶಿಕ್ಷಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳ ವಿತರಣೆ, ಉಚಿತ ನೇತ್ರ ತಪಾಸಣೆ ಶಿಬಿರ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಶ್ರೀರಾಮ ಮೆಲೋಡಿಸ್ ತಂಡದಿಂದ ಡಾ.ವಿಷ್ಣುವರ್ಧನ್ ಚಿತ್ರ ಗೀತೆಗಳ ವಾದ್ಯಗೋಷ್ಠಿ ಸಹ ನಡೆಯಿತು.
ವೇದಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ನಗರಸಭೆ ಸದಸ್ಯ ಟಿ.ಎನ್.ಪ್ರಭುದೇವ್, ಸಾಹಸಸಿಂಹ ಡಾ.ವಿಷ್ಣುವರ್ದನ್ ಅವರು ಚಿತ್ರರಂಗಕ್ಕೆ ನೀಡಿರುವ ಸೇವೆ ಅನುಪಮ. ಆದರೆ ಅವರಿಗೆ ಒಂದು ಸ್ಮಾರಕ ರೂಪುಗೊಳ್ಳದಿರುವುದು ದುರದೃಷ್ಟಕರ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿದ್ದು ಖಂಡನೀಯ. ಸರ್ಕಾರ ಸ್ಮಾರಕ ನಿರ್ಮಾಣಕ್ಕೆ ಮೀನಮೇಷ ಎಣಿಸುವುದನ್ನು ಬಿಟ್ಟು, ಸ್ಮಾರಕವನ್ನು ಉಳಿಸುವಲ್ಲಿ ಕ್ರಮ ವಹಿಸಬೇಕು ಎಂದರು.
ಡಾ.ವಿಷ್ಣುವರ್ಧನ್ ಸೇನಾ ಸಮಿತಿ ತಾಲ್ಲೂಕು ಅಧ್ಯಕ್ಷ ಗಂಗರಾಜ, ಕಾರ್ಯದರ್ಶಿ ಶಿವಕುಮಾರ್, ಸಂಚಾಲಕ ರಾಮಾಂಜಿನಪ್ಪ ಅವರು ವಿಷ್ಣುವರ್ಧನ್ ಅವರ ಕಲಾ ಸೇವೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಡಾ.ವಿಷ್ಣು ಸೇನಾ ಸಮಿತಿಯ ಕುಮಾರಬಂಗಾರಿ, ರವಿಕುಮಾರ್, ವಾರೇಶ್, ಮುನಿರಾಜು, ನಾರಾಯಣಪ್ಪ,ವಿಶ್ವನಾಥ್ ಇದ್ದರು.
ತಾಲ್ಲೂಕಿನ ತೂಬಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಭಿಮಾನಿ ಹಾಗೂ ಮುಖ್ಯಶಿಕ್ಷಕ ವಸಂತಗೌಡ, ರಾಜ್ಯ ಸರ್ಕಾರ ಕರ್ನಾಟಕ ರತ್ನ ನೀಡಿ ವಿಷ್ಣುವರ್ಧನ್ ಅವರ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಕಲಾವಿದರಿಗೆ ಸಾವಿಲ್ಲ, ಅವರು ಸದಾ ತಮ್ಮ ಕಲೆಯ ಮೂಲಕ ಜನಮಾನಸದಲ್ಲಿ ಜೀವಂತವಾಗಿರುತ್ತಾರೆ ಎಂದರು.
ಕೆಪಿಸಿಸಿ ಸದಸ್ಯ ಮುನಿರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಆನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟೇಶ್, ಯುವ ಮುಖಂಡ ಮಧು, ಅಭಿಮಾನಿ ಕೃಷ್ಣಪ್ಪ, ಆನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.