ADVERTISEMENT

‘ಗಣಿಗಾರಿಕೆಗೆ ನಿಲ್ಲಿಸಿದರೆ ಮತ’

ಕಾರಹಳ್ಳಿ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳಿಗೆ ಗಣಿ ದೂಳು ಸಮಸ್ಯೆಯೇ ಸವಾಲು

ವಡ್ಡನಹಳ್ಳಿ ಬೊಜ್ಯನಾಯ್ಕ
Published 22 ಡಿಸೆಂಬರ್ 2020, 4:40 IST
Last Updated 22 ಡಿಸೆಂಬರ್ 2020, 4:40 IST
ಕಾರಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಕಚೇರಿ
ಕಾರಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಕಚೇರಿ   

ದೇವನಹಳ್ಳಿ: ತಾಲ್ಲೂಕಿನ ಕಾರಹಳ್ಳಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಗಣಿದೂಳು ಹರಡುತ್ತಿರುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಾದ ತೈಲಗೆರೆ, ಮೀಸಗಾನಹಳ್ಳಿ ಮತ್ತು ಮುದ್ದನಾಯಕನಹಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪರವಾನಗಿ ಪಡೆದ ಮತ್ತು ಅಕ್ರಮ ಕಲ್ಲುಗಣಿಗಾರಿಕೆ ಸುತ್ತಮುತ್ತಲಿನ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಅಪೋಶನ ಮಾಡುತ್ತಿದೆ.

ಇಲಾಖೆ ಹಲವು ಬಾರಿ ಅಕ್ರಮ ಗಣಿಗಾರಿಕೆ ಮೇಲೆ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಎಂ ಸ್ಯಾಂಡ್, ವಿವಿಧ ತೂಕದ ಜಲ್ಲಿ, ಕಲ್ಲು ದಿಮ್ಮಿ ವಶಪಡಿಕೊಂಡು ದಂಡ ವಸೂಲಿ ಮಾಡಿದೆ. ಗಣಿ ಇಲಾಖೆ, ಜಿಲ್ಲಾಧಿಕಾರಿ, ಪರಿಸರ ಮಾಲಿನ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ವಿರೋಧದ ನಡುವೆಯೂ ಪ್ರಭಾವಿಗಳ ಮರ್ಜಿಗೆ ಮಣಿದು ಪರವಾನಗಿ ನವೀಕರಣ ಮಾಡುತ್ತಲೇ ಇದೆ ಎಂಬುದು ಸ್ಥಳೀಯರ ಆರೋಪ.

ADVERTISEMENT

ಕಳೆದ ಒಂದು ದಶಕದಿಂದ ಗ್ರಾಮ ಪಂಚಾಯಿತಿ ಸರ್ವಸದಸ್ಯರ ಸಭೆಯಲ್ಲಿ ಆರು ಬಾರಿ ಗಣಿಗಾರಿಕೆ ನಿಲ್ಲಿಸುವಂತೆ ಠರಾವು ಮಂಡಿಸಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗೆ ಕಡತ ಕಳುಹಿಸಿದ್ದರೂ ಕಡತಗಳು ದೂಳು ತಿನ್ನುತ್ತಿದ್ದು ಗಣಿದೂಳಿನ ಆರ್ಭಟ ಹೆಚ್ಚುತ್ತಲೇ ಇದೆ. ಗಣಿಯಲ್ಲಿ ಹಗಲು ರಾತ್ರಿ ಕೆಲಸ ಮಾತ್ರ ನಿಂತಿಲ್ಲ ಎಂಬುದು ರೈತರ ಆಕ್ರೋಶ.

’ತೈಲಗೆರೆ 2, ಮಿಸಗಾನಹಳ್ಳಿ 2, ಮುದ್ದನಾಯಕನಹಳ್ಳಿ 2, ಸೊಣ್ಣೇನಹಳ್ಳಿ 1 ಒಟ್ಟು 7 ಸದಸ್ಯರು ಗಣಿಗಾರಿಕೆ ವ್ಯಾಪ್ತಿಯ ಗ್ರಾಮಗಳಿಂದ ಅಭ್ಯರ್ಥಿಗಳು ಆಯ್ಕೆಗೊಳ್ಳಬೇಕು. ಗಣಿಗಾರಿಕೆ ಸ್ಥಗಿತಗೊಳಿಸುವ ಭರವಸೆ ನೀಡುವ ಅಭ್ಯರ್ಥಿಗಳನ್ನು ಪಕ್ಷಾತೀತವಾಗಿ ಗೆಲ್ಲಿಸುತ್ತೇವೆ. ನಮಗೆ ಪಕ್ಷ ಮುಖ್ಯವಲ್ಲ. ಆರೋಗ್ಯ ಮತ್ತ ಕೃಷಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಗಣಿದೂಳು ನಿಲ್ಲಬೇಕು. ಕಾಟಾಚಾರಕ್ಕೆ ಗಣಿಗಾರಿಕೆ ರದ್ದುಗೊಳಿಸುವಂತೆ ಠರಾವು ಮಂಡಿಸಿದರೆ ಸಾಲದು. ಅಗತ್ಯ ಬಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಸದಸ್ಯರು ಧರಣಿ ನಡೆಸಬೇಕು ಅಂತಹ ಅಭ್ಯರ್ಥಿಗಳು ನಮ್ಮ ಬೆಂಬಲ ಎನ್ನುತ್ತಾರೆ ತೈಲಗೆರೆ ಗ್ರಾಮಸ್ಥರು.

ಪಂಚಾಯತ್ ವ್ಯವಸ್ಥೆಯಡಿ ಇರುವ ಗ್ರಾಮ ಪಂಚಾಯಿತಿ ಕಾನೂನುಗಳಿಗೆ ಸುಪ್ರೀಂಕೋರ್ಟ್ ಮನ್ನಣೆ ನೀಡುತ್ತದೆ. ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಯಲ್ಲಿ ಮಂಡಿಸುವ ಠರಾವಿಗೆ ಸಂಬಂಧಿಸಿದ ಇಲಾಖೆ ಮನ್ನಣೆ ನೀಡದಿದ್ದರೆ ಪಂಚಾಯತ್ ರಾಜ್ ಕಾನೂನುಗಳಿಗೆ ಬೆಲೆ ಎಲ್ಲಿದೆ. ಕಾನೂನು ಪುಸ್ತಕದಲ್ಲಿ ಇದೆ. ಆದರೆ, ಕಾರ್ಯಗತವಾಗುತ್ತಿಲ್ಲ ಎಂಬುದಾಗಿ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಬೇಸರದಿಂದ ಹೇಳಿದರು.

ಕಾರಹಳ್ಳಿ ಅನತಿ ದೂರದಲ್ಲಿ ₹30 ಲಕ್ಷ ವೆಚ್ಚದ ಅನುದಾನದಲ್ಲಿ ಹೈಟೆಕ್ ಮಾದರಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಇದನ್ನು ಗ್ರಾಮದಲ್ಲೇ ಮಾಡಬಹುದಿತ್ತು ಎನ್ನುತ್ತಾರೆ ಗ್ರಾಮಸ್ಥರು.

ಒಟ್ಟು 18 ಸದಸ್ಯರ ಬಲದ ಪಂಚಾಯಿತಿ ವ್ಯಾಪ್ತಿ ಚುನಾವಣಾ ಪ್ರಚಾರದ ಕಾವು ರಾತ್ರಿ ಹಗಲು ಏರುತ್ತಲೇ ಇದೆ. ಎರಡು ಬಾರಿ ಬಯಲು ಬಹಿರ್ದಸೆ ಮುಕ್ತ, ಎರಡು ಬಾರಿ ಗಾಂಧಿ ಪುರಸ್ಕಾರ, ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 41 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.