ADVERTISEMENT

ಆನೇಕಲ್: ಬೇಸಿಗೆ ಬವಣೆ ನೀಗಿಸಿದ ಕಾಡಿನ ಕೆರೆಗಳು

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪಾರಂಪರಿಕ ಜೈವಿಕ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2024, 2:37 IST
Last Updated 18 ಮಾರ್ಚ್ 2024, 2:37 IST
ಬನ್ನೇರುಘಟ್ಟ ಜೈವಿಕ ಉದ್ಯಾನ ವ್ಯಾಪ್ತಿಯಲ್ಲಿನ ಕೆರೆಯಲ್ಲಿ ನೀರು ತುಂಬಿರುವ ನೋಟ
ಬನ್ನೇರುಘಟ್ಟ ಜೈವಿಕ ಉದ್ಯಾನ ವ್ಯಾಪ್ತಿಯಲ್ಲಿನ ಕೆರೆಯಲ್ಲಿ ನೀರು ತುಂಬಿರುವ ನೋಟ   

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವು ನೀರಿನ ಭವಣೆಯನ್ನು ನಿವಾರಿಸಿಕೊಳ್ಳಲು ಪಾರಂಪರಿಕ ಜೈವಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಬೇಸಿಗೆ ಬಿರು ಬಿಸಿಲಿನಿಂದಾಗಿ ಎಲ್ಲೆಡೆ ಕೆರೆಗಳು ಬತ್ತಿ ಹೋಗಿದ್ದರೂ ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿನ ಕೆರೆಗಳಲ್ಲಿ ನೀರಿದೆ. ಹಾಗಾಗಿ ಇಲ್ಲಿನ ಪ್ರಾಣಿ ಪಕ್ಷಿಗಳು ನೀರಿನ ಸಮಸ್ಯೆ ನೀಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನ ಸುಮಾರು 731 ಹೆಕ್ಟೇರ್‌ ಪ್ರದೇಶ ಹೊಂದಿದೆ. ಇಲ್ಲಿ ಸಸ್ಯಹಾರಿ ಪ್ರಾಣಿಗಳ ಸಫಾರಿ, ಹುಲಿ-ಸಿಂಹ ಸಫಾರಿ, ಮೃಗಾಲಯ, ಕರಡಿ ಸಫಾರಿ ಸೇರಿದಂತೆ ವಿವಿಧ ಸಫಾರಿ ಮತ್ತು ಮೃಗಾಲಯದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಪ್ರಾಣಿಗಳಿವೆ.

ಪರಸ್ಪರ ನೀರು ಎರಚಿಕೊಂಡು ಬಿಸಿಲಿನ ಬೇಗೆಯನ್ನು ತಣಿಸಿಕೊಳ್ಳುತ್ತಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದ ಆನೆಗಳು

ಸಸ್ಯಹಾರಿ ಸಫಾರಿಯಲ್ಲಿಯೇ ಎರಡು ಸಾವಿರಕ್ಕೂ ಹೆಚ್ಚು ಪ್ರಾಣಿಗಳಿವೆ. ಈ ಎಲ್ಲಾ ಪ್ರಾಣಿಗಳಿಗೂ ನೀರು ಒದಗಿಸುವುದು ಹರಸಾಹಸವಾಗಿದೆ. ಆದರೆ ಜೈವಿಕ ಉದ್ಯಾನದಲ್ಲಿರುವ ಹಲವು ಕೆರೆಗಳು ಈ ಪ್ರಾಣಿಗಳಿಗೆ ನೀರಿನ ಆಸರೆಯಾಗಿವೆ.

ADVERTISEMENT

ಸಸ್ಯಹಾರಿ ಪ್ರಾಣಿ ಸಫಾರಿಯಲ್ಲಿ ಸಿಗಡಿಕುಂಟೆ ಕೆರೆ, ಚನ್ನಮ್ಮನಕೆರೆ, ದೀಪಕನ ಕೆರೆ, ಗೌಡನ ಕೆರೆಗಳಿದ್ದು, ಈ ಕೆರೆಗಳಲ್ಲಿ ಸಾಕಷ್ಟು ನೀರಿದ್ದು ಏಪ್ರಿಲ್‌ ಮೇ ತಿಂಗಳಿಗೆ ಯಾವುದೇ ತೊಂದರೆಯಿಲ್ಲ. ನೀರಿನ ಸಮಸ್ಯೆ ಬರದಂತೆ ನಿರ್ವಹಣೆ ಮಾಡಬಹುದು ಎಂಬುದು ಉದ್ಯಾನದ ಅಧಿಕಾರಿಗಳ ಅಭಿಪ್ರಾಯ.

ಸಿಗೇಕಟ್ಟೆಯಲ್ಲಿ ಆನೆಗಳಿಗೆ ಜಲಮಜ್ಜನದ ನೋಟ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಾವಲು ಕೆರೆ, ಸೀಗೇಕಟ್ಟೆ ಕೆರೆ, ಗದ್ದೆಹಳ್ಳನ ಕೆರೆ, ಪುಟ್ಟನ ಕುಂಟೆ, ಮೋಟಣ್ಣನ ಕೆರೆ ಇವುಗಳ ಜೊತೆಗೆ ಎರಡು ಕಿರು ಅಣೆಕಟ್ಟುಗಳಿವೆ. ಇವುಗಳು ಜೈವಿಕ ಉದ್ಯಾನದ ಪ್ರಾಣಿಗಳಿಗೆ ನೀರಿನ ಮೂಲಗಳಾಗಿವೆ.

ಇತ್ತೀಚಿಗೆ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಎರಡು ಕೊಳವೆ ಬಾವಿಗಳನ್ನು ಬೊಮ್ಮಸಂದ್ರದ ಗೌರಮ್ಮ ತಿಮ್ಮಾರೆಡ್ಡಿ ಪ್ರತಿಷ್ಠಾನದಿಂದ ಕೊರೆಯಿಸಲಾಗಿದ್ದು ಉತ್ತಮ ನೀರು ದೊರೆತಿದೆ. ನೀರಿನ ಪೂರೈಕೆಗೆ ವಿದ್ಯುತ್‌ ಸಮಸ್ಯೆಯಾಗದಂತೆ ಸಂಪೂರ್ಣ ಸೋಲಾರ್‌ ವಿದ್ಯುತ್ ವ್ಯವಸ್ಥೆಯನ್ನು ಫೌಂಡೇಷನ್‌ ಮಾಡಿದೆ. ಈ ಕೊಳವೆ ಬಾವಿಗಳಲ್ಲಿಯೂ ಉತ್ತಮ ನೀರಿದ್ದು ಉದ್ಯಾನದ ಟ್ಯಾಂಕರ್‌ಗಳ ಮೂಲಕ ಅವಶ್ಯಕವಿರುವೆಡೆಗೆ ಸರಬರಾಜು ಮಾಡಲಾಗುತ್ತದೆ.

 ಬನ್ನೇರುಘಟ್ಟ ಜೈವಿಕ ಉದ್ಯಾನದ ಕೆರೆಗೆ ವಲಸೆ ಬಂದಿರುವ ಬಣ್ಣದ ಕೊಕ್ಕರೆಯು ಆಹಾರದ ಬೇಟೆಯಲ್ಲಿ ತೊಡಗಿರುವುದು

ಬೇಸಿಗೆಯ ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಆನೆಗಳು ನೀರಿನಲ್ಲಿಯೇ ಹೆಚ್ಚು ಸಮಯ ಕಳೆಯಲು ಇಷ್ಟ ಪಡುತ್ತಿವೆ. ಕೆರೆಯಲ್ಲಿ ಆನೆಗಳು ಪರಸ್ಪರ ನೀರಾಟವಾಡುತ್ತ ತಂಪನ್ನು ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬನ್ನೇರುಘಟ್ಟ ಉದ್ಯಾನದ ಜೊತೆಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿನ ದೊಡ್ಡಣ್ಣನ ಕೆರೆಯಲ್ಲಿ ನೀರು ಉತ್ತಮವಾಗಿದ್ದು ರಾಷ್ಟ್ರೀಯ ಉದ್ಯಾನದ ಕಾಡು ಪ್ರಾಣಿಗಳಿಗೆ ಪ್ರಮುಖ ಜಲ ಮೂಲವಾಗಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಬೊಮ್ಮಸಂದ್ರ ಗೌರಮ್ಮ ತಿಮ್ಮಾರೆಡ್ಡಿ ಪ್ರತಿಷ್ಠಾನದ ವತಿಯಿಂದ ಕೊಳವೆ ಬಾವಿ ಮತ್ತು ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಮಾಡಿರುವುದು

ಆನೆ, ಚಿರತೆ, ಕಾಡೆಮ್ಮೆ, ಕಡವೆಗಳು ಕೆರೆಯನ್ನು ಅವಲಂಬಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹಲವಾರು ಕೆರೆಗಳಿದ್ದು ಈ ಪೈಕಿ 50ಕ್ಕೂ ಹೆಚ್ಚು ಕೆರೆಗಳಲ್ಲಿ ಉತ್ತಮ ನೀರಿದೆ ಎಂದು ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನ ವ್ಯಾಪ್ತಿಯಲ್ಲಿನ ಕೆರೆಯಲ್ಲಿ ನೀರು ತುಂಬಿರುವ ನೋಟ

ಬಿಸಿಲಿನ ಬೇಗೆಗೆ ಉದ್ಯಾನದಲ್ಲಿನ ಒಂದೆರೆಡು ಕೆರೆಗಳನ್ನು ಹೊರತುಪಡಿಸಿ ಒಂಭತ್ತು ಕೆರೆಗಳಲ್ಲಿ ಉತ್ತಮ ನೀರಿರುವುದು ಪ್ರಾಣಿಗಳಿಗೆ ವರದಾನವಾಗಿದೆ.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.