ಹೊಸಕೋಟೆ: ಸ್ವಾರ್ಥ, ಸ್ವಹಿತಾಸಕ್ತಿಗಾಗಿ ಸಂಘಟನೆ ಕಟ್ಟಿಕೊಂಡು ಹೋರಾಟ ಮಾಡುವುದು ಯಾವುದೇ ಸಮುದಾಯ ಹಾಗೂ ಸಮಾಜಕ್ಕೆ ಒಳ್ಳೆಯದಲ್ಲ. ನಮ್ಮ ಹೋರಾಟದ ಸ್ವರೂಪವನ್ನು ಸಾರ್ವತ್ರಿಕ ಲಾಭದ ದೃಷ್ಟಿಕೋನಕ್ಕೆ ಬದಲಾಯಿಸಬೇಕಿದೆ ಎಂದು ಹೈದಾರ್‌ಬಾದ್‌ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ವಿಕಾಸ್ ಪೋರಿಕಾ ಹೇಳಿದರು.
ನಗರದ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
‘ಇಂದಿಗೂ ನಮ್ಮ ಸಮುದಾಯದಲ್ಲಿ ಇಂದಿಗೂ ಒಪ್ಪೊತ್ತಿನ ಊಟಕ್ಕಾಗಿಯೇ ಪರದಾಡುವ ಪರಿಸ್ಥಿತಿ ಇದೆ. ಆದ್ದರಿಂದ ನಮ್ಮೆಲ್ಲಾ ಸಮಸ್ಯೆಗಳಿಂದ ಮುಕ್ತಿ ಕೊಡುವ ಏಕೈಕ ಅಸ್ತ್ರವೆಂದರೆ ಅದು ಶಿಕ್ಷಣ ಮಾತ್ರ’ ಎಂದರು.
ಅದೆಷ್ಟೋ ನಾಯಕರ ಸ್ವಾರ್ಥ ರಹಿತ ಹೋರಾಟ ಮತ್ತು ತ್ಯಾಗದಿಂದ ಸವಲತ್ತು ಪಡೆಯುತ್ತಿದ್ದೇವೆ. ಆದರೆ, ಈ ಸವಲತ್ತು ಪಡೆದು ಮುನ್ನೆಲೆಗೆ ಬರಬೇಕೆಂಬ ಹಿರಿಯರ ಆಶಯ ಈಡೇರಿಸಲು ವಿಫಲರಾಗಿದ್ದೇವೆ. ತುಳಿತಕ್ಕೆ ಒಳಪಟ್ಟವರ ಪರವಾಗಿರುವ ಸಂವಿಧಾನ ಸದುಪಯೋಗ ಪಡಿಸಿಕೊಳ್ಳುವಲ್ಲಿ ಎಡವಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
‘ಡಾ.ಅಂಬೇಡ್ಕರ್ ಅವರ ಸಂವಿಧಾನ ನಮ್ಮನ್ನು ರಕ್ಷಣೆ ಮಾಡುತ್ತಿರುವ ಕಾರಣ ನಾವು ಇಂದು ಇಷ್ಟರ ಮಟ್ಟಿಗೆ ಇದ್ದೇವೆ. ಇಲ್ಲದಿದ್ದರೆ ನಮ್ಮ ಸ್ಥಿತಿ ಊಹಿಸಿಕೊಳ್ಳಲು ಸಹ ಅಸಾಧ್ಯ’ ಎಂದರು.
ಲೇಖಕ, ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿದರು. ಹಾಸ್ಟೆಲ್ ವಾರ್ಡನ್ ಪುಟ್ಟಸ್ವಾಮಿ, ರವೀಂದ್ರ, ರವಿ ಭುವನಹಳ್ಳಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.