ADVERTISEMENT

ಉದ್ಯೋಗಕ್ಕೆ ಬಂದವರಿಗೆ ಕಿರುಕುಳ ನೀಡಬೇಡಿ: ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 2:25 IST
Last Updated 4 ನವೆಂಬರ್ 2025, 2:25 IST
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಶಾಸಕ ಧೀರಜ್‌ ಮುನಿರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡಪರ ಹೋರಾಟಗಾರ ಟಿ.ಎನ್‌.ಪ್ರಭುದೇವ್‌ ಮಾತನಾಡಿದರು  
ದೊಡ್ಡಬಳ್ಳಾಪುರದಲ್ಲಿ ಸೋಮವಾರ ಶಾಸಕ ಧೀರಜ್‌ ಮುನಿರಾಜ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡಪರ ಹೋರಾಟಗಾರ ಟಿ.ಎನ್‌.ಪ್ರಭುದೇವ್‌ ಮಾತನಾಡಿದರು     

ಪ್ರಜಾವಾಣಿ ವಾರ್ತೆ

ದೊಡ್ಡಬಳ್ಳಾಪುರ: ನೇಕಾರಿಕೆ ಸೇರಿದಂತೆ ಕೈಗಾರಿಕೆಗಳಿಗೆ ಉದ್ಯೋಗಕ್ಕಾಗಿ ಹೊರ ರಾಜ್ಯದವರು ಬಂದಾಗ ಮಾಲೀಕರು ಸ್ಥಳೀಯ ಪೊಲೀಸರಿಗೆ ಅಗತ್ಯ ದಾಖಲೆ, ಮಾಹಿತಿ ನೀಡಿದ ನಂತರವೇ ಉದ್ಯೋಗಕ್ಕೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಡಿವೈಎಸ್‌ಪಿ ರವಿ ಹೇಳಿದರು.

ನಗರದ ಡಾ.ಬಾಬು ಜಗಜೀವನ್‌ ರಾಂ ಭವನದಲ್ಲಿ ಸೋಮವಾರ ನಡೆದ ಹೊರ ರಾಜ್ಯಗಳ ವಲಸೆ ಕಾರ್ಮಿಕರ ಹಾವಳಿ ತಪ್ಪಿಸಲು ಸ್ಥಳೀಯರ ಬದುಕನ್ನು ರಕ್ಷಿಸಲು ನೊಂದ ಕೂಲಿ ನೇಕಾರ ಕಾರ್ಮಿಕರ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದರು.

ADVERTISEMENT

ಮಾಹಿತಿ ನೀಡದೇ ಇದ್ದರೆ ಯಾವುದೇ ತೊಂದರೆ ಉಂಟಾದಲ್ಲಿ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಹೊರ ದೇಶದವರು ಇಲ್ಲಿ ಬಂದು ಅಕ್ರಮವಾಗಿ ನೆಲೆಸಿದ್ದರೆ ಕ್ರಮ ಕೈಗೊಳ್ಳಲು ಕಾನೂನು ಇದೆ. ಆದರೆ ದೇಶದ ಯಾವುದೇ ರಾಜ್ಯದ ಪ್ರಜೆ ಯಾವ ರಾಜ್ಯದಲ್ಲಿ ಬೇಕಾದರು ನೆಲೆಸಿ ಉದ್ಯೋಗ ಕಂಡುಕೊಳ್ಳಲು ಸಂವಿಧಾನ ಅವಕಾಶ ನೀಡಿದೆ ಎಂದರು.

ಉತ್ತರ ಭಾರತದ ರಾಜ್ಯಗಳಲ್ಲಿ ಉದ್ಯೋಗದ ಕೊರತೆ, ಬಡತನ ಇರುವ ಕಾರಣಕ್ಕೆ ಇಲ್ಲಿಗೆ ಉದ್ಯೋಗ ಹುಡುಕುತ್ತ ಬರುತ್ತಿದ್ದಾರೆ. ಅಗತ್ಯ ದಾಖಲೆ, ಮಾಹಿತಿ ನೀಡಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ, ಅಶಾಂತಿಗೆ ಕಾರಣವಾಗದೆ ಉದ್ಯೋಗ ಮಾಡಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯ ಇಲ್ಲ. ಹೊರ ರಾಜ್ಯದವರು ಎನ್ನುವ ಕಾರಣಕ್ಕೆ ಅವರ ವಿರುದ್ಧ ದೌರ್ಜನ್ಯ ನಡೆಸಿದರೆ ಕಾನೂನು ಕ್ರಮ ಅನಿವಾರ್ಯ ಎಂದರು.

ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ ಎನ್ನುವ ಸಮಸ್ಯೆಯನ್ನು ಮುಖಂಡರು ಕುಳಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ನೇಕಾರ ಮುಖಂಡರ ಸಭೆ ನಡೆಸಿ ಹೊರ ರಾಜ್ಯಗಳಿಂದ ಬಂದಿರುವರರ ಬಗ್ಗೆ ಸೂಕ್ತ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಜವಳಿ ಇಲಾಖೆ ಉಪನಿರ್ದೇಶಕಿ ಸೌಮ್ಯ ಮಾತನಾಡಿ, ನೇಕಾರ ಸಮ್ಮಾನ್‌ ಯೋಜನೆಯಲ್ಲಿ ಹೊರ ರಾಜ್ಯದವರು ನೋಂದಣಿ ಮಾಡಿಕೊಳ್ಳಲು ಅವಕಾಶ ಇಲ್ಲ. ಯಾವುದೇ ಕಂಪನಿ ಅಥವಾ ಕೈಗಾರಿಕೆಯಲ್ಲಿ ಶೇ 85ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡಬೇಕು. ಇಲ್ಲವಾದರೆ ಸರ್ಕಾರದ ಆರ್ಥಿಕ ಸಹಾಯ ದೊರೆಯುದಿಲ್ಲ. ಸ್ಥಳೀಯರ ಶಾಸಕರ ಅಧ್ಯಕ್ಷತೆಯಲ್ಲಿ ನೇಕಾರ ಮುಖಂಡರು ಸಭೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಶಾಸಕ ಧೀರಜ್‌ ಮುನಿರಾಜ್‌ ಮಾತನಾಡಿ, ಯಾವುದೇ ನೇಕಾರ ಕೂಲಿ ಕಾರ್ಮಿಕರಿಗೆ ಉದ್ಯೋಗದ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜವಳಿ ಇಲಾಖೆ ಮೇಲಿದೆ. ನೇಕಾರರು ಆತಂಕಕ್ಕೆ ಒಳಗಾಗದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಇದು ಸೂಕ್ಷ್ಮ ವಿಚಾರವಾಗಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸಭೆ ನಡೆಸಲಾಗುವುದು ಎಂದರು.

ನಗರಸಭೆ ಸದಸ್ಯ ಟಿ.ಎನ್‌.ಪ್ರಭುದೇವ್‌, ಬಂತಿವೆಂಕಟೇಶ್‌, ಮಾಜಿ ಸದಸ್ಯೆ ಎನ್‌.ಕೆ.ರಮೇಶ್‌, ಪ್ರಮೀಳ ಮಹಾದೇವ್‌, ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಅಮರೇಶ್‌ಗೌಡ, ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಇದ್ದರು.

ದೊಡ್ಡಬಳ್ಳಾಪುರದ ಡಾ.ಬಾಬುಜಗಜೀವನ್‌ ರಾಂ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನೂರಾರು ನೇಕಾರ ಕೂಲಿ ಕಾರ್ಮಿಕರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.