ADVERTISEMENT

‘ಕುದುರೆ ಓಡಿಸಲು ಬಾರದವರು’

ಸಚಿವ ಎಂ.ಟಿ.ಬಿ ನಾಗರಾಜ್ ವಿರುದ್ಧ ರಮೇಶ್ ಕುಮಾರ್ ಪರೋಕ್ಷ ಟೀಕೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 1:40 IST
Last Updated 19 ಜನವರಿ 2021, 1:40 IST
ಹೊಸಕೋಟೆಯ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ನಡೆದ ಗ್ರಾಮ ಪಂಚಾಯತಿ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಕಾಂಗ್ರೆಸ್ ನಿಂದ ಗೆದಿದ್ದ ಸದಸ್ಯರಿಗೆ ಸನ್ಮಾನಿಸಲಾಯಿತ
ಹೊಸಕೋಟೆಯ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ನಡೆದ ಗ್ರಾಮ ಪಂಚಾಯತಿ ಸದಸ್ಯರ ಅಭಿನಂದನಾ ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಕಾಂಗ್ರೆಸ್ ನಿಂದ ಗೆದಿದ್ದ ಸದಸ್ಯರಿಗೆ ಸನ್ಮಾನಿಸಲಾಯಿತ   

ಹೊಸಕೋಟೆ: ಕುದುರೆ ಓಡಿಸಲು ಬಾರದವರು ಕೇವಲ ಹಣವಿರುವ ಕಾರಣಕ್ಕೆ ಕುದುರೆ ಕೊಂಡರೆ ಅದು ವ್ಯರ್ಥ ಎಂದು ವಿಧಾನಸಭೆ ಮಾಜಿ ಸಭಾಪತಿ ರಮೇಶ್ ಕುಮಾರ್ ಸಚಿವ ಎಂ.ಟಿ.ಬಿ ನಾಗರಾಜ್ ವಿರುದ್ಧ ಪರೋಕ್ಷವಾಗಿ ಟೀಕಿಸಿದರು.

ನಗರದ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಮತ್ತು ಕಾಂಗ್ರೆಸ್ ಬೆಂಬಲಿಗರಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.

ಶರತ್ ಬಚ್ಚೇಗೌಡ ಅವರಿಗೆ ಉತ್ತಮ ಭವಿಷ್ಯವಿದ್ದು ಅದಕ್ಕಾಗಿ ಅವರು ಉತ್ತಮ ನಿರ್ಧಾರ ತೆಗದುಕೊಂಡಿದ್ದಾರೆ. ಜನರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅವರ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಅವರ ನಿರ್ಧಾರ ಬೆಂಬಲಿಸಿದ್ದಾರೆ ಎಂದು ಹೇಳಿದರು.

ADVERTISEMENT

ಕಳೆದ 60 ವರ್ಷದಿಂದ ತಾಲ್ಲೂಕಿನಲ್ಲಿ ಕಾಂಗ್ರೆಸ್ ವಿರೋಧಿಸುತ್ತಿದ್ದ ಬಚ್ಚೇಗೌಡರ ಕುಟುಂಬ ಈಗ ಜತೆಗೆ ಬಂದಿರುವುದು ನಿಜವಾದ ಐತಿಹಾಸಿಕ ಎಂದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶರತ್ ಬಚ್ಚೇಗೌಡರಿಗೆ ಉತ್ತಮ ಸ್ಥಾನಮಾನ ಲಭಿಸಲಿದೆ ಎಂದರು.

ಶರತ್ ಬಚ್ಚೇಗೌಡರು ಈಗಾಗಲೇ ಮಾನಸಿಕವಾಗಿ, ದೈಹಿಕವಾಗಿ ಕಾಂಗ್ರೆಸ್ ಸೇರಿದ್ದಾರೆ. ಇನ್ನು ಕೇವಲ ಔಪಚಾರಿಕವಾಗಿ ಸೇರುವುದೊಂದೇ ಬಾಕಿ. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಜತೆ ಬಹಿರಂಗ ಸಭೆಯಲ್ಲಿ ಪಕ್ಷ ಸೇರಲಿದ್ದಾರೆ ಎಂದರು.

ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗಳ ಅಧಿಕಾರ ಮೊಟಕುಗೊಳಿಸಿದೆ. ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮೊಟಕುಗೊಳಿಸಿ ಗ್ರಾಮ ಪಂಚಾಯತಿಗೆ ಮೋಸ ಮಾಡಿದೆ ಎಂದರು.

ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಲೋಕಸಭಾ ಚುನಾವಣೆ ಗೆಲ್ಲುವುದು ಬಾರಿ ಸುಲಭ. ಆದರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುವುದು ನಿಜಕ್ಕೂ ದೊಡ್ಡ ಸವಾಲಿನ ವಿಷಯ ಎಂದರು

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಾಲ್ಲೂಕಿನಲ್ಲಿ ನಡೆದ 26 ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 23 ಪಂಚಾಯತಿಗಳಲ್ಲಿ ಸ್ವಾಭಿಮಾನಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ನಿಜಕ್ಕೂ ಐತಿಹಾಸಿಕ ಎಂದರು.

ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ರಾಜ್ಯದಲ್ಲಿಯೂ ಪ್ರತಿಭಟನೆ ನಡೆಸಲಾಗುತ್ತವುದು ಎಂದರು.

ಶಿವಾಜಿನಗರ ಶಾಸಕ ರಿಜ್ವಾನ್, ವಿಧಾನ ಪರಿಷತ್ ಸದಸ್ಯ ಎಸ್, ರವಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುನಿಶಾಮಣ್ಣ, ಜಿಲ್ಲಾ ಪಂಚಾಯತಿ ಆದ್ಯಕ್ಷ ಪ್ರಸಾದ್, ಜಿಲ್ಲಾ ಪಂಚಾಯತಿ ಸದಸ್ಯ ವೈ.ಎಸ್.ಎಂ. ಮಂಜುನಾಥ್, ಮುಖಂಡರಾದ ಸಿ.ಬೈರೇಗೌಡ, ಕೋಡಿಹಳ್ಳಿ ಸೊಣ್ಣಪ್ಪ, ಸಿ.ಮುನಿಯಪ್ಪ ಹಾಗೂ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.