ADVERTISEMENT

ಹಣದಿಂದ ಮಣ್ಣಿನ ಫಲವತ್ತತೆ ಹೆಚ್ಚಾಗದು: ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ

ಬಾಶೆಟ್ಟಿಹಳ್ಳಿ ಎಸ್ಸಿಲಾರ್‌ ಕಂಪನಿಯಿಂದ 500 ಸಸಿಗಳ ನೆಡುವಿಕೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 14:05 IST
Last Updated 22 ಡಿಸೆಂಬರ್ 2019, 14:05 IST
ನಾಗರಕೆರೆ ಏರಿ ಮೇಲೆ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸಕ್ಕೆ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಸಸಿನೆಡುವ ಮೂಲಕ ಚಾಲನೆ ನೀಡಿದರು
ನಾಗರಕೆರೆ ಏರಿ ಮೇಲೆ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸಕ್ಕೆ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಸಸಿನೆಡುವ ಮೂಲಕ ಚಾಲನೆ ನೀಡಿದರು   

ದೊಡ್ಡಬಳ್ಳಾಪುರ: ಸಮುದ್ರದ ನೀರು ಹೆಪ್ಪುಗಟ್ಟಿ ಮೋಡಗಳಾಗಿ ಮಳೆ ಸುರಿಸುವ ಪ್ರಕ್ರಿಯೆಯಲ್ಲಿ ಅಡೆತಡೆಯಾಗಿದೆ. ಇದು ಸರಿಯಾಗಬೇಕಾದರೆ ತುರ್ತಾಗಿ ಮರಗಳನ್ನು ಬೆಳೆಸುವ, ಮಳೆನೀರು ಸಂಗ್ರಹ ಮಾಡುವ ಅಗತ್ಯವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್‌.ರವೀಂದ್ರ ಪ್ರತಿಪಾದಿಸಿದರು.

ಅವರು ಶನಿವಾರ ನಗರದ ನಾಗರಕೆರೆ ಏರಿ ಮೇಲೆ ಬಾಶೆಟ್ಟಿಹಳ್ಳಿ ಎಸ್ಸಿಲಾರ್‌ ಕಂಪನಿ ವತಿಯಿಂದ 500ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನದಲ್ಲಿ ಮಳೆ ನೀರು ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿದೆ. ಜಿಲ್ಲೆಯಲ್ಲಿನ ಎಲ್ಲ ವಾಣಿಜ್ಯ ಮಳಿಗೆ ಕಟ್ಟಡ, ಮನೆಗಳಿಗೆ ಮಳೆ ನೀರು ಸಂಗ್ರಹ ಕಡ್ಡಾಯ. ರಾಜಸ್ತಾನದಂತೆಯೇ ಈಗ ಕರ್ನಾಟಕ ಸಹ ಭೀಕರ ಬರಗಾಲಕ್ಕೆ ತುತ್ತಾಗುತ್ತಲೇ ಇದೆ. ಅಂತರ್ಜಲ ತೀವ್ರವಾಗಿ ಕುಸಿಯುತ್ತಲೇ ಇದೆ. ಹೀಗಾಗಿ ಜಿಲ್ಲೆಯಲ್ಲಿನ ನೀಲಗಿರಿ ಮರಗಳ ತೆರವು ಅಭಿಯಾನ ಆರಂಭವಾಗಿದೆ. ಮಳೆನೀರು ಅಂತರ್ಜಲ ಸೇರಲು ಮರಗಳೇ ಮುಖ್ಯ. ಇದನ್ನು ಅರಿಯಬೇಕಾಗಿದೆ ಎಂದರು.

ADVERTISEMENT

ಪ್ರಗತಿಪರ ಚಿಂತಕ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಮಾತನಾಡಿ, ಜಗತ್ತಿನಲ್ಲಿ ಭೂತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಕೂಡ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಇಲ್ಲವಾದರೆ ಮುಂದಿನ ಪೀಳಿಗೆ ಉಳಿವಿಗಿಂತಲೂ ನಮ್ಮ ಉಳಿವಿಗೆ ಕುತ್ತು ಬರಲಿದೆ. ಮಣ್ಣಿನ ಫಲವತ್ತತೆ ಹಣ ನೀಡಿ ಪಡೆಯಲು ಸಾಧ್ಯವಿಲ್ಲ. ಪ್ರಾಮಾಣಿಕ ಕೆಲಸ ಮಾಡಬೇಕಿದೆ. ಚೀನಾದಲ್ಲಿ ಕೈಗಾರಿಕೆಗಳ ಮಾಲೀಕರು ಸ್ಥಳ ಸಿಕ್ಕ ಕಡೆಗಳಲ್ಲಿ ಸಸಿಗಳನ್ನು ಬೆಳೆಸುವ ಮೂಲಕ ಪರಿಸರದ ಉಳಿವಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಆರ್‌.ಮಂಜುನಾಥ್‌, ನಗರಸಭೆ ಪರಿಸರ ಎಂಜಿನಿಯರ್‌ ಈರಣ್ಣ, ಬಾಶೆಟ್ಟಿಹಳ್ಳಿ ಕೈಗಾರಿಕ ಒಕ್ಕೂಟದ ಅಧ್ಯಕ್ಷ ತ್ರಿಲೋಕ ಎಸ್.ಗುಹಟ್ಟಿ, ಮುಖ್ಯ ಕಾರ್ಯನಿರ್ವಾಹಕ ಆಂಜನೇಯಲು, ಎಸ್ಸಿಲಾರ್ ಉತ್ಪಾದನಾ ಘಟಕದ ವ್ಯವಸ್ಥಾಪಕ ನಿರ್ದೇಶಕ ಮನೋಜ್‌ಕುಮಾರ್, ಹಿರಿಯ ನಿರ್ದೇಶಕ ಮಿಲಿಂದ್‌ ಜಾಧವ್, ಕೆ.ವಿ.ಮಹೇಶ್‌, ಕಾರ್ಖಾನೆ ವ್ಯವಸ್ಥಾಪಕ ಹಿರೆನ್‌ಮಲ್ಪೆ, ಅಯೋಜಕರಾದ ಮುರುಳಿಕೃಷ್ಣ, ಪ್ರಮೋದ್‌ಮಲ್ಯ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮಂಜುನಾಥ್, ಎಲ್‌ ಆಡ್‌ ಟಿ ಸಿಎಸ್‌ಆರ್‌ ಮುಖ್ಯಸ್ಥ ಅವಿನಾಶ್‌, ಪರಿಸರ ಸಿರಿ ಕ್ಷೇಮಾಭವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ್‌ರೆಡ್ಡಿ, ಸದಸ್ಯರಾದ ಭಾಸ್ಕರ್, ಜಿ.ರಾಜಶೇಖರ್, ವಾಸು, ವೆಂಕೋಬರಾವ್, ರಾಜು, ರೇಣುಕಾ,ಜಗನ್ನಾಥ್‌, ಮೋದಿ ಬಾಯ್ಸ್ ಅಧ್ಯಕ್ಷ ನರೇಂದ್ರ,ಜಿ.ಯಲ್ಲಪ್ಪ, ಭವಿಷ್ಯ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್, ತಿರುಮಳ ನಸರ್ರಿಯ ಮಾಲೀಕ ಹನುಮಂತರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.