ADVERTISEMENT

ಎಂಟಿಬಿ ರಾಜೀನಾಮೆ ನೀಡಿದ ಮೇಲೆ ಸ್ಪರ್ಧೆ ಏಕೆ

ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಪರ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕ ಬಿ.ಶಿವಣ್ಣ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:40 IST
Last Updated 1 ಡಿಸೆಂಬರ್ 2019, 13:40 IST
ಅನುಗೊಂಡನಹಳ್ಳಿ ಹೋಬಳಿಯ ಭಾಣಾರಹಳ್ಳಿ ಗ್ರಾಮಸ್ಥರು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರಿಗೆ ಹೂ ಮಾಲೆ ಹಾಕಿ ಸ್ವಾಗತಿಸಿದರು
ಅನುಗೊಂಡನಹಳ್ಳಿ ಹೋಬಳಿಯ ಭಾಣಾರಹಳ್ಳಿ ಗ್ರಾಮಸ್ಥರು ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರಿಗೆ ಹೂ ಮಾಲೆ ಹಾಕಿ ಸ್ವಾಗತಿಸಿದರು   

ಸೂಲಿಬೆಲೆ: ‘ಮಹಿಳೆಯರು ಮತದಾನ ಮಾಡುವ ಮೂಲಕ ಜನರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಹೊಸಕೋಟೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಮತದಾರರಲ್ಲಿ ಮನವಿ ಮಾಡಿದರು.

ಅನುಗೊಂಡನಹಳ್ಳಿ ಹೋಬಳಿಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಅವರು ಮಾತನಾಡಿದರು. ‘ಹೆಣ್ಣು ಮಾತ್ರ ಮತ್ತೊಂದು ಹೆಣ್ಣನ್ನು ಅರ್ಥ ಮಾಡಿಕೊಳ್ಳಲು ಸಾದ್ಯ. ನಿಮ್ಮ ಜತೆ ಇರುತ್ತೇನೆ. ನಿಷ್ಠೆಯಿಂದ ನಿಮ್ಮ ಸೇವೆ ಮಾಡುತ್ತೇನೆ’ ಎಂದರು.

ಆನೇಕಲ್ ಶಾಸಕ ಬಿ.ಶಿವಣ್ಣ ಮಾತನಾಡಿ, ‘ಈ ಚುನಾವಣೆ ಯಾರಿಗೂ ಅವಶ್ಯಕತೆ ಇರಲಿಲ್ಲ. ಮತದಾರರು ಐದು ವರ್ಷದ ಅವಧಿಗೆ ಕಾಂಗ್ರೆಸ್ ಪಕ್ಷದಿಂದ ಎಂಟಿಬಿ ನಾಗರಾಜ್ ಅವರನ್ನು ಶಾಸಕರಾಗಿ ಆಯ್ಕೆ ಮಾಡಿ ಕಳುಹಿಸಿದ್ದರು. ಆದರೆ ಕಾರಣವಿಲ್ಲದೆ ಅವರು ರಾಜೀನಾಮೆ ನೀಡಿದ ಕಾರಣ ಚುನಾವಣೆ ಬಂದಿದೆ. ರಾಜೀನಾಮೆ ನೀಡಿದ ಮೇಲೆ ಮತ್ತೆ ಏಕೆ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಮತದಾರರು ಪ್ರಶ್ನಿಸಬೇಕು’ ಎಂದರು.

ADVERTISEMENT

‘ಬಿಜೆಪಿ ಸರ್ಕಾರದಲ್ಲಿ ಬಡವರ ಪರ ಯೋಜನೆಗಳು ಜಾರಿಯಾಗಿಲ್ಲ. ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ಹಾಲಿಗೆ ಪ್ರೋತ್ಸಾಹ ಧನವಾಗಿ ₹ 5, ಅನ್ನಭಾಗ್ಯದಂತಹ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರ ವಿಫಲವಾಗಿದ್ದು ದೇಶ ಆರ್ಥಿಕ ಹಿಂಜರಿತ ಕಂಡಿದೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ದೂರಿದರು.

‘ಮತ ಕೇಳಲು ಬರುತ್ತಿರುವ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರನ್ನು ತಿರಸ್ಕರಿಸಿ, ಬಡವರ ಪರ ಇರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರನ್ನು ಗೆಲ್ಲಿಸುವ ಮೂಲಕ ತಾಲ್ಲೂಕಿನ ಸ್ವಾಭಿಮಾನ ಉಳಿಸಿಕೊಳ್ಳಬೇಕು’ ಎಂದರು.

ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಒಡಕು ಇದೆ ಎಂಬ ಬಿಜೆಪಿ ಪಕ್ಷದವರ ಹೇಳಿಕೆಗೆ ಪ್ರತಿಕ್ರಿಯಿದ ಪ್ರಿಯಾಂಕ್ ಖರ್ಗೆ, ‘ಅವರವರು ಅವರ ಮನೆಯನ್ನು ಮೊದಲು ನೋಡಿಕೊಳ್ಳಲಿ. ಇದೇ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ತನ್ನ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣ ನೋಡದೆ ಬೇರೆಯವರ ತಟ್ಟೆಯಲ್ಲಿರುವ ನೊಣ ಹುಡುಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬ ಮುಖಂಡರಿಗೂ ಒಂದೊಂದು ಜವಾಬ್ದಾರಿ ನೀಡಿದ್ದು ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದರು. ಬಿಬಿಎಂಪಿ ಸದಸ್ಯ ಉದಯ ಕುಮಾರ್, ತಿರುವರಂಗ ನಾರಾಯಣಸ್ವಾಮಿ, ಎಂ.ಎ.ಕೃಷ್ಣರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ವನಜಾ ಪ್ರಭಾಕರ್, ಎಸ್.ನಾರಾಯಣಕೆರೆ ಶ್ರೀರಾಮರೆಡ್ಡಿ ಸೇರಿದಂತೆ ಹಲವು ಗ್ರಾಮಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.