ADVERTISEMENT

ಬಂಜೆತನಕ್ಕೆ ಮಹಿಳೆಯಷ್ಟೇ ಕಾರಣ ಅಲ್ಲ: ಡಾ.ಶಶಿಕಲಾ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 12:33 IST
Last Updated 21 ಡಿಸೆಂಬರ್ 2018, 12:33 IST
ಕಾರ್ಯಾಗಾರದಲ್ಲಿ ಭಾಗವಹಿಸಿದ ಅಶಾಕಾರ್ಯಕರ್ತೆಯರು
ಕಾರ್ಯಾಗಾರದಲ್ಲಿ ಭಾಗವಹಿಸಿದ ಅಶಾಕಾರ್ಯಕರ್ತೆಯರು   

ದೇವನಹಳ್ಳಿ: ‘ಬಂಜೆತನಕ್ಕೆ ಮೂಲ ಕಾರಣಗಳನ್ನು ಹುಡುಕುವ ಕೆಲಸ ಅಶಾ ಕಾರ್ಯಕರ್ತರು ಮಾಡಬೇಕಾಗಿದೆ’ ಎಂದು ಮಿಲನ ರಾಮಯ್ಯ ಆಸ್ಪತ್ರೆ ಬಂಜೆತನ ತಜ್ಞೆ ಡಾ.ಶಶಿಕಲಾ ಸಲಹೆ ನೀಡಿದರು.

ಇಲ್ಲಿನ ತಾಲ್ಲೂಕು ಆರೋಗ್ಯ ಆಡಳಿತಾಧಿಕಾರಿ ಕಚೇರಿಯಲ್ಲಿ ಅಶಾ ಕಾರ್ಯಕರ್ತೆಯರಿಗಾಗಿ ನಡೆದ ಬಂಜೆತನ ಅರಿವು ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಮದುವೆ ನಂತರ ದಂಪತಿಗೆ ಮಗು ಬೇಕು ಎನ್ನುವ ನಿರೀಕ್ಷೆ ಸಹಜ. ಮಹಿಳೆ ಮತ್ತು ಪುರುಷರಲ್ಲಿರುವ ಆನೇಕ ಸಮಸ್ಯೆಗಳು ಬಂಜೆತನಕ್ಕೆ ಕಾರಣವಾಗಿದೆ. ಮಕ್ಕಳಾಗದಿದ್ದರೆ ಮೊದಲು ಮಹಿಳೆಯರನ್ನು ಬೊಟ್ಟು ಮಾಡಲಾಗುತ್ತದೆ. ಬಂಜೆತನದಿಂದ ಆನೇಕ ಸಂಸಾರಗಳಲ್ಲಿ ಬಿರುಕು ಉಂಟಾಗಿ ವಿಚ್ಛೇದನಕ್ಕೆ ಕಾರಣವಾಗುತ್ತಿದೆ. ಬಂಜೆತನಕ್ಕೆ ಕೇವಲ ಮಹಿಳೆ ಕಾರಣರಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಮದುವೆಯಾಗಿ ಒಂದು ವರ್ಷದವರೆಗೆ ಮಕ್ಕಾಳಾಗುವ ಲಕ್ಷಣ ಕಂಡು ಬಾರದಿದ್ದರೆ ತಜ್ಞ ವೈದ್ಯರ ಸಲಹೆ ಪಡೆಯುವಂತೆ ಅಶಾ ಕಾರ್ಯಕರ್ತೆಯರು ಸೂಚಿಸಬೇಕು. ಮಕ್ಕಳು ಪಡೆಯಬೇಕೆಂಬ ಆಸೆ ನಗರ ಪ್ರದೇಶದ ಕುಟುಂಬಗಳಗಿಂತ ಗ್ರಾಮೀಣ ಪ್ರದೇಶದಲ್ಲಿನವರಿಗೆ ‌ಆಸಕ್ತಿ ಹೆಚ್ಚು ಇರುತ್ತದೆ. ಒತ್ತಡದ ಕೆಲಸ, ಮೀರಿದ ವಯಸ್ಸು, ದಢೂತಿ ದೇಹ, ಗರ್ಭಕೋಶದಲ್ಲಿನ ಅಂಡಾಶಯದ ಬೆಳವಣಿಗೆ ಕುಂಠಿತ, ಪುರುಷರಲ್ಲಿ ವಿರ್ಯಾಣುಗಳ ಕೊರತೆ, ಲೈಂಗಿಕ ಕ್ರಿಯೆಗೆ ನಿರಾಸಕ್ತಿ, ಮಾಸಿಕ ಋತುಚಕ್ರದಲ್ಲಿ ಏರುಪೇರು ಆನೇಕ ಕಾರಣಗಳಿಂದ ಬಂಜೆತನ ಬರಲಿದ್ದು ಸೂಕ್ತ ಸಲಹೆ, ಮಾರ್ಗದರ್ಶನ, ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಮಕ್ಕಳು ಪಡೆಯಲು ಅವಕಾಶವಿರುತ್ತದೆ’ ಎಂದರು.

20 ವರ್ಷದಿಂದ 30 ವರ್ಷದವರೆಗೆ ಮಕ್ಕಳು ಪಡೆಯಲು ಸಕಾಲ. ವಿದೇಶದಲ್ಲಿ ಸಿಗುವ ಚಿಕಿತ್ಸೆಗಿಂತ ರಾಜ್ಯದಲ್ಲಿ ಉತ್ತಮ ಚಿಕಿತ್ಸೆ ಸಿಗಲಿದೆ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ರೇವಣ್ಣ, ಹಿರಿಯ ಆರೋಗ್ಯ ಸಹಾಯಕ ಎಸ್.ಸುರೇಂದ್ರ, ಅಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ ಭವ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.