ADVERTISEMENT

ಕಾಡಂಚಿನ ಮಹಿಳೆಯರಿಗೆ ಐಸಿರಿ ತಂದ ಸಿರಿಧಾನ್ಯ: ತಿಂಗಳಿಗೆ ₹1.25 ಲಕ್ಷ ಸಂಪಾದನೆ

ಆನೇಕಲ್ ಶಿವಣ್ಣ
Published 16 ಡಿಸೆಂಬರ್ 2024, 5:40 IST
Last Updated 16 ಡಿಸೆಂಬರ್ 2024, 5:40 IST
ಆನೇಕಲ್ ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ಕರಿಯಪ್ಪನದೊಡ್ಡಿ ಮತ್ತು ಉಜ್ಜಿನಪ್ಪನದೊಡ್ಡಿ ಮಯೂರಿ ವನಶ್ರೀ ಶಕ್ತಿ ಒಕ್ಕೂಟದ ಮಹಿಳೆಯರು
ಆನೇಕಲ್ ತಾಲ್ಲೂಕಿನ ಕಾಡಂಚಿನ ಗ್ರಾಮಗಳಾದ ಕರಿಯಪ್ಪನದೊಡ್ಡಿ ಮತ್ತು ಉಜ್ಜಿನಪ್ಪನದೊಡ್ಡಿ ಮಯೂರಿ ವನಶ್ರೀ ಶಕ್ತಿ ಒಕ್ಕೂಟದ ಮಹಿಳೆಯರು   

ಆನೇಕಲ್: ಕಾಡಾನೆ ಹಾವಳಿ ಮತ್ತು ಸಾರಿಗೆ ಸಂಪರ್ಕ ಕೊರತೆ ನಡುವೆಯೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಗಳಾದ ಕರಿಯಪ್ಪನದೊಡ್ಡಿ ಮತ್ತು ಉಜ್ಜಿನಪ್ಪನದೊಡ್ಡಿಯ 28 ಮಹಿಳೆಯರು ‘ಮಯೂರಿ ವನಶ್ರೀ ಸ್ತ್ರೀಶಕ್ತಿ ಒಕ್ಕೂಟ’ ಕಟ್ಟಿಕೊಂಡು ಸಿರಿಧಾನ್ಯ ಆಹಾರ ಪದಾರ್ಥ ತಯಾರಿಕೆಯಿಂದ ಜೀವನ ರೂಪಿಸಿಕೊಂಡಿದ್ದಾರೆ.

‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ಸಾಲ ಸೌಲಭ್ಯ ಪಡೆದು ಕಿರು ಉದ್ಯಮ ಆರಂಭಿಸಿರುವ ಮಹಿಳೆಯರ ತಂಡ ಎರಡು ಉದ್ಯಮದಿಂದ ತಿಂಗಳಿಗೆ ₹2ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಖರ್ಚು ಕಳೆದು ತಿಂಗಳಿಗೆ ₹1.25 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು, ಒಂದು ಎಕರೆ ಪ್ರದೇಶ ಭೋಗ್ಯಕ್ಕೆ ಪಡೆದು ಕೃಷಿ ಮಾಡುತ್ತಿದ್ದಾರೆ.

ADVERTISEMENT

ಬಾದಾಮಿ ಬಿಸ್ಕತ್‌, ರಾಗಿ ಬಿಸ್ಕತ್‌, ರಾಗಿ ಚಾಕೋಲೇಟ್‌, ಜೋಳದ ಬಿಸ್ಕತ್‌, ಕಡಲೆಬೀಜ ಲಡ್ಡು, ಅಂಟಿನ ಉಂಡೆ, ಸಾಮೆ ಲಾಡು, ರಾಗಿ ಮುರುಕು, ರಾಗಿ ಲಾಡು, ರಾಗಿ ಪಕೋಡ, ಸಾಂಬರ್‌ ಪುಡಿ, ಅಗಸೆ ಬೀಜದ ಚಟ್ನಿ, ರಸಂ ಪುಡಿ ತಯಾರಿಸುತ್ತಾರೆ. ಇವೆಲ್ಲ ಸಾವಯವ ಮತ್ತು ಸಿರಿಧಾನ್ಯ ಆಹಾರ ಪದಾರ್ಥಗಳು. 

ಇವುಗಳಿಗೆ ಬಫಲೋ ಬ್ಯಾಕ್‌ ಕನ್ಸೂಮರ್ಸ್‌ ಫೆಡೇರಷನ್‌ ಎಂಬ ಸರ್ಕಾರೇತರ ಸಂಸ್ಥೆ ಮಾರುಕಟ್ಟೆ ಒದಗಿಸಿದೆ. ಜತೆಗೆ ‘16 ದೊಡ್ಡಿ ಟ್ರಸ್ಟ್‌’ ಸಂಘದ ಉದ್ಯಮಕ್ಕೆ ಬೆಂಬಲವಾಗಿ ನಿಂತಿದೆ.

ಸಮುದಾಯ ಆಧಾರಿತ ಕೃಷಿ: 2024ರ ಮೇ ತಿಂಗಳಿನಿಂದ ‘ಕೈತೋಟ’ ಯೋಜನೆಯಡಿ ಗಿಡಮೂಲಿಕೆ ಮತ್ತು ಸೊಪ್ಪು, ತರಕಾರಿ ಬೆಳೆಯುತ್ತಿದ್ದಾರೆ. ಇದನ್ನು ಬೆಂಗಳೂರಿನ 30 ಕುಟುಂಬಗಳಿಗೆ ಪೂರೈಸುತ್ತಿದ್ದಾರೆ.

ಪೌಷ್ಟಿಕಾಂಶಯುಕ್ತ ತಾಜಾ ತರಕಾರಿ, ಸೊಪ್ಪು, ಹಣ್ಣು ಪೂರೈಕೆ ಸಂಘದ ಗುರಿಯಾಗಿದೆ. ಇದರಿಂದ ಗ್ರಾಹಕರ ಆರೋಗ್ಯ ಸುಧಾರಿಸಲಿದೆ. ಜತೆಗೆ ಒಕ್ಕೂಟ ಮಹಿಳೆಯರ ಆರ್ಥಿಕ ಆರೋಗ್ಯವೂ ಸುಧಾರಿಸಲಿದೆ ಎನ್ನುತ್ತಾರೆ ಒಕ್ಕೂಟದ ಅಧ್ಯಕ್ಷೆ ನೇತ್ರಾ.

 ಮಹಿಳೆಯರು ರಾಗಿ ಬಿಸ್ಕಟ್ ತಯಾರಿಸುವಲ್ಲಿ ನಿರತರಾಗಿರುವುದು
ಸಿರಿಧಾನ್ಯದ ತಿಂಡಿಗಳು
ರಾಗಿ ಜೋಳದ ಬಿಸ್ಕತ್‌ ಮತ್ತು ರಾಗಿ ಸಿಹಿ ಉಂಡೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ದೊರೆಯುತ್ತಿದೆ. ಬೆಂಗಳೂರಿನ ವ್ಯಾಪ್ತಿಯನ್ನು ವಿಸ್ತರಿಸಲು ಒಕ್ಕೂಟ ಪ್ರಯತ್ನ ಪಡುತ್ತಿದೆ. ಇದಕ್ಕೆ ಸರ್ಕಾರ ಬೆಂಬಲ ನೀಡಬೇಕು
ನೇತ್ರಾಅಧ್ಯಕ್ಷೆ ಮಯೂರಿ ವನಶ್ರೀ ಸ್ತ್ರೀಶಕ್ತಿ ಒಕ್ಕೂಟ
ಉದ್ಯೋಗ ಹುಡಕಬಾರದು ಸೃಷ್ಟಿಸಬೇಕು...
ಮಹಿಳೆಯರು ಉದ್ಯೋಗ ಹುಡುಕದೇ ಉದ್ಯೋಗ ಸೃಷ್ಟಿಸಬೇಕು ಹಾಗೂ ಆರ್ಥಿಕವಾಗಿ ಸಬಲರಾಗಬೇಕೆಂದು ಎರಡು ಉದ್ಯಮ ಆರಂಭಿಸಿದ್ದೇವೆ ಎಂದು ಮಯೂರಿ ವನಶ್ರೀ ಸ್ತ್ರೀಶಕ್ತಿ ಒಕ್ಕೂಟ ಖಜಾಂಚಿ ಗೀತಾ ತಿಳಿಸಿದರು. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ಹಲವು ಸವಾಲುಗಳ ನಡುವೆಯೂ ಕಾಡಂಚಿನ ಗ್ರಾಮದ ಮಹಿಳಾ ಸ್ವಸಹಾಯ ಒಕ್ಕೂಟ ಕ್ರಿಯಾಶೀಲ ಕಿರು ಉದ್ಯಮದ ಮೂಲಕ ಆರ್ಥಿಕವಾಗಿ ಸದೃಢವಾಗುತ್ತಿದೆ ಎಂದರು.
ಸರ್ಕಾರಿ ಕಾರ್ಯಕ್ರಮಗಳಿಗೆ ಒಕ್ಕೂಟದ ತಿಂಡಿ ತಿನಿಸು
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಇಲಾಖೆ ಕಾರ್ಯಕ್ರಮ ಮತ್ತು ಸಭೆಗಳಲ್ಲಿ ಮಯೂರಿ ವನಶ್ರೀ ಸ್ತ್ರೀಶಕ್ತಿ ಒಕ್ಕೂಟದ ಸಾವಯವ ಬಿಸ್ಕತ್‌ ರಾಗಿ ಉಂಡೆ ಸೇರಿದಂತೆ ವಿವಿಧ ತಿಂಡಿ ತಿನಿಸು ಬಳಸುವಂತೆ ಸೂಚನೆ ನೀಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್‌.ಲತಾ ಕುಮಾರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.