ADVERTISEMENT

ದೊಡ್ಡಬಳ್ಳಾಪುರ | 'ದುಡಿಯುವ ಮಹಿಳೆಯರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ'

ಮಹಿಳೆಯರ ಜಿಲ್ಲಾ ಸಮಾವೇಶ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 2:09 IST
Last Updated 13 ಸೆಪ್ಟೆಂಬರ್ 2025, 2:09 IST
ದೊಡ್ಡಬಳ್ಳಾಪುರದಲ್ಲಿ ಸಿಐಟಿಯು ವತಿಯಿಂದ ನಡೆದ  ದುಡಿಯುವ ಮಹಿಳೆಯರ ಜಿಲ್ಲಾ ಸಮಾವೇಶದಲ್ಲಿ ರಾಜ್ಯ ಸಮಿತಿ ಅಧ್ಯಕ್ಷೆ ವರಲಕ್ಷ್ಮಿ ಸೇರಿದಂತೆ ಮುಖಂಡರು ಭಾಗವಹಿಸಿದ್ದರು
ದೊಡ್ಡಬಳ್ಳಾಪುರದಲ್ಲಿ ಸಿಐಟಿಯು ವತಿಯಿಂದ ನಡೆದ  ದುಡಿಯುವ ಮಹಿಳೆಯರ ಜಿಲ್ಲಾ ಸಮಾವೇಶದಲ್ಲಿ ರಾಜ್ಯ ಸಮಿತಿ ಅಧ್ಯಕ್ಷೆ ವರಲಕ್ಷ್ಮಿ ಸೇರಿದಂತೆ ಮುಖಂಡರು ಭಾಗವಹಿಸಿದ್ದರು   

ದೊಡ್ಡಬಳ್ಳಾಪುರ:  ಉದ್ಯೋಗದ ಸ್ಥಳಗಳಲ್ಲಿ ಮಹಿಳೆಯರಿಗೆ ಕಡ್ಡಾಯ ಶೌಚಾಲಯ, ತಿಂಗಳಿಗೆ ಒಂದು ದಿನ ಮುಟ್ಟಿನ ರಜೆ, ಲೈಂಗಿಕ ದೌರ್ಜನ್ಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮಾಲೀಕರು ಕ್ರಮ ವಹಿಸಬೇಕು ಹಾಗೂ ಪುರುಷರು, ಮಹಿಳೆಯರಿಗೆ ಸರಿಸಮಾನ ವೇತನ ನೀಡಿ, ದುಡಿಯುವ ಮಹಿಳೆಯರಿಗೆ ಅಗತ್ಯ ಸೌಲಭ್ಯ ನೀಡಬೇಕಿದೆ ಎಂದು ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ವರಲಕ್ಷ್ಮಿ ಹೇಳಿದರು.

ನಗರದ ಕನ್ನಡ ಜಾಗೃತ ಭವನದಲ್ಲಿ ಎಸ್‌ಐಟಿಯು ವತಿಯಿಂದ ನಡೆದ ದುಡಿಯುವ ಮಹಿಳೆಯರ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.

1961 ಹೆರಿಗೆ ಭತ್ಯೆ ಕಾಯ್ದೆ ಪ್ರಕಾರ ಆರು ತಿಂಗಳ ಹರಿಗೆ ಭತ್ಯೆ ಜಾರಿ ಮಾಡಬೇಕು. ಮಾತೃತ್ವ ರಜೆ ಮಹಿಳೆಯರ ಸಾಂವಿಧಾನಿಕ ಹಕ್ಕು. 3ನೇ ಮಗು ಹುಟ್ಟಿದಾಗಲೂ ಹೆರಿಗೆ ರಜೆ ನೀಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಆದರೂ ಸಹ ರಾಜ್ಯದಲ್ಲಿ 3ನೇ ಮಗುವಿಗೆ ಅಸಂಘಟಿತ ಕ್ಷೇತ್ರದ ಮಹಿಳೆಯರಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ಹೆರಿಗೆ ಭತ್ಯೆ ಕೊಡುತ್ತಿಲ್ಲ. 50 ಜನ ಮಹಿಳೆಯರು ದುಡಿಯುವ ಕಡೆ ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಕಾರ್ಖಾನೆ ಕಾಯ್ದೆ ಹೇಳಿದರೂ ಹಲವಾರು ಉದ್ಯಮಗಳಲ್ಲಿ ಜಾರಿ ಮಾಡುತ್ತಿಲ್ಲ ಎಂದರು.

ADVERTISEMENT

ಅಸಂಘಟಿತ ಕ್ಷೇತ್ರದ ಕಟ್ಟಡ ನಿರ್ಮಾಣದಲ್ಲಿ 84 ಲಕ್ಷ ಜನರು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂಣಿಯಾಗಿದ್ದಾರೆ. ಆದರೆ ಇದರಲ್ಲಿ ಮಹಿಳಾ ಕಾರ್ಮಿಕರು ಎಷ್ಟು ಎನ್ನುವುದನ್ನು ತಿಳಿಸಿಲ್ಲ. ಈ ಕ್ಷೇತ್ರದಲ್ಲಿ ಮೇಸ್ತ್ರಿಗಳಾಗಿ ಮತ್ತು ಸಹಾಯಕರಾಗಿ ಮಹಿಳೆಯರು ಹೆಚ್ಚು ಇದ್ದಾರೆ. ಇವರಿಗೆ ದೇಹದಲ್ಲಿ ಶಕ್ತಿಯಿದ್ದರೆ ಮಾತ್ರ ದುಡಿಮೆ. ಹಾಗಾಗಿ ಕಲ್ಯಾಣ ಮಂಡಳಿಯ ಸವಲತ್ತುಗಳನ್ನು ಪಡೆಯಲು ತಾಂತ್ರಿಕ ಅಡಚಣೆಗಳು ಹೆಚ್ಚಾಗಿ ಅದರ ಉಪಯೋಗವು ಮಹಿಳೆಯರಿಗೆ ದೊರಕದಂತಾಗಿದೆ. ಈ ಸೌಕರ್ಯ ನೀಡಲು ಅಗತ್ಯ ಕ್ರಮ ವಹಿಸಬೇಕು ಎಂದರು.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಕೆಲಸವನ್ನು ಹೊರಗುತ್ತಿಗೆಯಲ್ಲಿ ದುಡಿಸುತ್ತಿದ್ದಾರೆ. ವಿದ್ಯಾವಂತ ಯುವತಿಯರು ಯಾವುದೇ ಕೆಲಸದ ಭದ್ರತೆ, ರಜೆ, ಹೆರಿಗೆ ಭತ್ಯೆ, ಅತ್ಯಂತ ಕಡಿಮೆ ವೇತನಗಳಲ್ಲಿ ದುಡಿಯುತ್ತಿದ್ದಾರೆ. ಅಧಿಕಾರಿಗಳ ಮುಲಾಜಿನಲ್ಲಿ ತಮ್ಮ ಸ್ವಾಭಿಮಾನವನ್ನು ಪಣಕ್ಕಿಟ್ಟು 10 ರಿಂದ 12 ಗಂಟೆ ಕೆಲಸ ಮಾಡುವ ಪರಿಸ್ಥಿತಿ ಇದೆ. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಸಿಐಟಿಯು ಹೋರಾಟ ಮಾಡುತ್ತಿದೆ ಎಂದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಎ ವೆಂಕಟೇಶ್‌, ಮಹಿಳೆಯುರು ಇಲ್ಲದೆ ದುಡಿಮೆಯೇ ಇಲ್ಲ. ಶಿಕ್ಷಣ,ಆರೋಗ್ಯ, ಆಹಾರ ಮುಂತಾದ ಕ್ಷೇತ್ರಗಳಲ್ಲಿ ಮಹಿಳೆಯರ ದುಡಿಮೆ ಪರಿಗಣಿಸದಿರುವುದು ಶೋಚನೀಯ ಸಂಗತಿಯಾಗಿದೆ. ಈ ದಿಸೆಯಲ್ಲಿ ಶ್ರಮಿಕ ಮಹಿಳಾ ಶಕ್ತಿ ಒಂದುಗೂಡಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಬೇಕಿದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ನರಸಿಂಹಮೂರ್ತಿ, ನಳಿನಾಕ್ಷಿ, ಸಂಚಾಲಕಿ ಮಂಗಳಾಕುಮಾರಿ, ಕಾರ್ಯದರ್ಶಿ ಕಲಾವತಿ, ಸುಮಾ, ಪ್ರಭಾಬೆಳವಂಗಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.