
ದೇವನಹಳ್ಳಿ: ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಯಲಿಯೂರಿನಲ್ಲಿರುವ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿರುವ ಕ್ರೀಡಾಂಗಣ ಸಂಪೂರ್ಣ ಮುಳ್ಳು ಗಿಡಗಳು, ಪಾರ್ಥೇನಿಯಂ ಸಸಿಗಳಿಂದ ತುಂಬಿ ಹುಲ್ಲುಗಾವಲಾಗಿ ಬದಲಾಗಿದೆ.
ಇಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಆಟವಾಡಲು ಸ್ಥಳವಿಲ್ಲದಂತಾಗಿದ್ದು, ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಶಾಲಾ ಕ್ರೀಡಾಭಿವೃದ್ಧಿಗಾಗಿ ಸ್ಥಳೀಯ ಆಡಳಿತ ತ್ವರಿತ ಕ್ರಮ ಕೈಗೊಳ್ಳುವಂತೆ ಪೋಷಕರು, ಕ್ರೀಡಾಸಕ್ತರು ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳು ತಾಲ್ಲೂಕಿನಲ್ಲಿ ನಡೆಯುವ ಕ್ರೀಡಾ ಕಾರ್ಯಕ್ರಮಗಳಲ್ಲಿ ‘ವಿಶ್ವ ಮಟ್ಟದ ಟೂರ್ನಿಗಳಲ್ಲಿ ಭಾಗಿಯಾಗಿ ಪ್ರಶಸ್ತಿ ತನ್ನಿ’ ಎಂದು ಮಾರುದ್ದ ಭಾಷಣೆ ಮಾಡುತ್ತಾರೆಯೇ ಹೊರತು ಪಂಚಾಯಿತಿಗೆ ಅರ್ಜಿಗಳನ್ನು ನೀಡಿದರೂ ಕ್ರೀಡಾಂಗಣದಲ್ಲಿರುವ ಗಿಡಗಂಟಿಗಳನ್ನು ತೆರವು ಮಾಡಿಸಲು ಮುಂದಾಗಲ್ಲ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಲಿಯೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಇಲ್ಲಿ ದೊಡ್ಡ ಮೈದಾನವಿದ್ದರೂ ಅದರ ನಿರ್ವಹಣೆ ಮಾತ್ರ ಆಗುತ್ತಿಲ್ಲ. ಇದರಿಂದ ಭವಿಷ್ಯದ ಕ್ರೀಡಾಪಟುಗಳು ವೃತ್ತಿಪರ ಕ್ರೀಡೆಗಳನ್ನು ಅಭ್ಯಾಸ ಮಾಡಲು ತೊಡಕಾಗಿದೆ ಎಂದು ಯಲಿಯೂರು ಗ್ರಾಮದ ಭಾಗ್ಯವಂತ ದೂರಿದ್ದಾರೆ.
ಕ್ರೀಡೆ ಎಂದರೆ ಎಲ್ಲಾ ವಿದ್ಯಾರ್ಥಿಗಳಿಗೆ ಇಷ್ಟ, ದೈಹಿಕ ಕಸರತ್ತು ಮಾಡಿ ದೇಹ ದಂಡಿಸುವುದರೊಂದಿಗೆ ಸ್ನೇಹಿತರು ಎಲ್ಲರೂ ಗುಂಪಾಗಿ ಆಟವಾಡಲು ಮೈದಾನವೇ ಇಲ್ಲದಂತೆ ಆಗಿದೆ. ವಿದ್ಯಾರ್ಥಿಗಳೆಲ್ಲಾ ಸೇರಿ ದೈಹಿಕ ಶಿಕ್ಷಣ ಶಿಕ್ಷಕರು, ಮುಖ್ಯ ಶಿಕ್ಷಕರಿಗೆ ಮನವಿ ಮಾಡಿದ್ದರೂ ಏನು ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಹಾವು, ಚೇಳುಗಳು: ಶಾಲೆಯ ಮೈದಾನ ಹುಲ್ಲುಗಾವಲಾಗಿ ಬದಲಾಗಿರುವ ಕಾರಣ ಇಲ್ಲಿ ವಿಷ ಜಂತುಗಳು ಸೇರಿಕೊಂಡಿವೆ. ಆಗ್ಗಾಗೆ ಶಾಲಾ ಆವರಣದಲ್ಲಿ ಹಾವು, ಚೇಳು ಕಾಣಿಸಿಕೊಳ್ಳುತ್ತವೆ. ಕೊಕ್ಕೊ, ವಾಲಿ ಬಾಲ್ ಆಡಲು ಮೀಸಲಾಗಿರುವ ಮೈದಾನವು ಮುಳ್ಳು ಗಿಡಗಳಿಂದ ತುಂಬಿ ಹೋಗಿದೆ. ಅಭ್ಯಾಸ ಮಾಡಿ ವಿವಿಧ ಕ್ರೀಡೆಯಲ್ಲಿ ಸಾಧನೆ ಮಾಡುವ ಹಂಬಲವಿದ್ದರೂ ಸಕಾರಗೊಳ್ಳುತ್ತಿಲ್ಲ ಎಂದು ಯಲಿಯೂರು ಗ್ರಾಮದ ವಾಲಿಬಾಲ್ ಯುವಕರ ತಂಡದ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಶಾಲೆಯಲ್ಲಿ ಪರೀಕ್ಷೆಯ ಸಮಯದಲ್ಲಿಯೇ ನಾಗರ ಹಾವು ಕಾಣಿಸಿಕೊಂಡಿತ್ತು. ಮೈದಾನದ ತುಂಬ ಹುಲ್ಲು ಬೆಳೆದಿದೆ. ಇದನ್ನು ತೆರವು ಮಾಡಲು ಯಾರು ಮುಂದಾಗುತ್ತಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸುವ ಮುನ್ನ ಭಯವಾಗುತ್ತದೆ. ನಾವು ಬಡವರು ಸರ್ಕಾರಿ ಶಾಲೆಗೆ ಕಳುಹಿಸಬೇಕು ಬೇರೆ ವಿಧಿಯಿಲ್ಲ’ ಎನ್ನುತ್ತಾರೆ ಪೋಷಕ ಮುನಿರಾಜು.
ಶಾಲಾ ಮೈದಾನದ ಅವ್ಯವಸ್ಥೆ ಕುರಿತು ಈಗಾಗಲೇ ಯಲಿಯೂರು ಗ್ರಾ.ಪಂ.ಗೆ ಅರ್ಜಿ ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ–ಶಿಕ್ಷಕರು, ಯಲಿಯೂರು ಫ್ರೌಢ ಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.