ADVERTISEMENT

ಯೋಗ ವಿಶ್ವಕ್ಕೆ ಬಹುದೊಡ್ಡ ಕೊಡುಗೆ: ದಿವ್ಯ ಜ್ಞಾನಾನಂದ ಸ್ವಾಮೀಜಿ

ರಾಜ್ಯ ಮಟ್ಟದ ಅಂತರ ಶಾಲಾ ಕಾಲೇಜು, ಮುಕ್ತ ಯೋಗಾಸನ ಸ್ಪರ್ಧೆಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 12:51 IST
Last Updated 7 ಡಿಸೆಂಬರ್ 2019, 12:51 IST
ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳನ್ನು ಪುಷ್ಪಾಂಡಜ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ ಉದ್ಘಾಟಿಸಿದರು
ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗಳನ್ನು ಪುಷ್ಪಾಂಡಜ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ಇಡೀ ಜಗತ್ತು ಭಾರತ ನೀಡಿರುವ ಅಮೂಲ್ಯ ಕೊಡುಗೆ ಯೋಗವನ್ನು ಸಮ್ಮತಿಸಿ ವಿಶ್ವ ಯೋಗ ದಿನಾಚರಣೆ ಆಚರಿಸುತ್ತಿದೆ. ನಮ್ಮ ಸಂಸ್ಕೃತಿ,ಪರಂಪರೆಯ ಸಂಕೇತವಾಗಿರುವ ಯೋಗಾಭ್ಯಾಸ ಇಂದು ವಿದೇಶಗಳಲ್ಲಿಯೂ ಮನ್ನಣೆ ಗಳಿಸುತ್ತಿದೆ ಎಂದು ಪುಷ್ಪಾಂಡಜ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ ಹೇಳಿದರು.

ನಗರದ ರಾಘವೇಂದ್ರ ಸಾಂಸ್ಕೃತಿಕ ಯೋಗ ಕೇಂದ್ರ, ಅಮರನಾಥ್ ಯೋಗ ಕೇಂದ್ರ, ಸಂಜೀವಿನಿ ಯೋಗ ಕೇಂದ್ರದ ವತಿಯಿಂದ ಯೋಗಾಚಾರ್ಯ ಡಾ.ಬಿ.ಜಿ.ರಾಧಾಕೃಷ್ಣ ಸ್ಮರಣಾರ್ಥ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಅಂತರ ಶಾಲಾ ಕಾಲೇಜು ಹಾಗೂ ಮುಕ್ತ ಯೋಗಾಸನ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

"ಯೋಗವು ಶಿಕ್ಷಕರಿಗೆ ಉದ್ಯೋಗಗಳನ್ನು ಕಲ್ಪಸಿಕೊಟ್ಟು ವೃತ್ತಿಯಾಗಿಯೂ ಹಲವಾರು ಜನರ ಬದುಕಿಗೆ ಆಧಾರವಾಗಿದೆ. ಬದುಕಿನ ವಿಧಾನವನ್ನು ಯೋಗ ಕಲಿಸುತ್ತದೆ. ಆದರೆ ನಾವು ಮಕ್ಕಳ ದೇಹಕ್ಕೆ ಮಾತ್ರ ಶಿಕ್ಷೆ ನೀಡುತ್ತಿದ್ದು, ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಯೋಗ, ಧ್ಯಾನ ಮೊದಲಾದ ಕ್ರಮಗಳಿಗೆ ಇಚ್ಛಾಶಕ್ತಿಯ ಅಗತ್ಯವಿದ್ದು, ನಿರಂತರ ಯೋಗಾಭ್ಯಾಸವನ್ನು ತಪ್ಪದೇ ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು' ಎಂದರು.

ADVERTISEMENT

ಬದುಕಿನಲ್ಲಿ ಶಿಸ್ತುಬದ್ದವಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಯೋಗ ಕಲಿಸುತ್ತದೆ. ಯೋಗವೆಂದರೆ ಬರೀ ಆಸನಗಳಷ್ಟೇ ಅಲ್ಲದೇ ಜೀವನ ಕ್ರಮವಾಗಿದೆ.ಯೋಗದ ಮಹತ್ವನ್ನು ಎಲ್ಲರೂ ಅರಿಯಬೇಕಿದೆ ಎಂದರು.

ಎಂ.ಎಸ್.ವಿ ಹಾಗೂ ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಸುಬ್ರಹ್ಮಣಿ ಮಾತನಾಡಿ, ಚೀನಾ ದೇಶದಲ್ಲಿಯೂ ಯೋಗಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದು, ಅಲ್ಲಿ ಯೋಗ ಕಲಿಸುವವರಲ್ಲಿ ಬಹಳಷ್ಟು ಜನ ಭಾರತೀಯರೇ ಆಗಿದ್ದಾರೆ. ಯೋಗಕ್ಕೆ ಅಂತರ ರಾಷ್ಟ್ರೀಯ ಮನ್ನಣೆಯಿದ್ದು, ನಮ್ಮ ದೈಹಿಕ ಹಾಗೂ ಮಾನಸಿಕ ಸದೃಢತೆಯೊಂದಿಗೆ ಯೋಗವನ್ನು ಹಲವಾರು ಆಯಾಮಗಳಲ್ಲಿ ಸ್ವೀಕರಿಸಬಹುದಾಗಿದೆ ಎಂದರು.

ಹಿರಿಯ ಕನ್ನಡಪರ ಹೋರಾಟಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಯೋಗ ಪಟುಗಳು ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದು ಹೆಮ್ಮೆಯ ಸಂಗತಿ. ಯೋಗ ತರಬೇತಿ ನೀಡುವ ಯೋಗ ಕೇಂದ್ರಗಳ ಪಾತ್ರ ಅಭಿನಂದನೀಯ ಎಂದರು.

ಅಮರನಾಥ್ ಯೋಗ ಕೇಂದ್ರದ ಅಧ್ಯಕ್ಷ ಎಂ.ಟಿ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಸಾಧಕರಿಗೆ ಗೌರವ: ಸಮಾರಂಭದಲ್ಲಿ ಜ್ಯೋತಿಷ ಪ್ರವೀಣ ಡಾ.ಜಿ.ಎ.ಶ್ರೀನಾಥ್, ಯೋಗ ಸಾಧಕರಾದ ವೆಂಕಟೇಶಯ್ಯ, ಭಾಸ್ಕರ್, ರಾಘವೇಂದ್ರ, ಬ್ರಹ್ಮಚರ್ಯ ಅವರನ್ನು ಸನ್ಮಾನಿಸಲಾಯಿತು.

ರಾಜ್ಯದ ಹೆಸರಾಂತ ಯೋಗಟುಗಳಿಂದ ಯೋಗ ಪ್ರದರ್ಶನ ಹಾಗೂ ಯೋಗ ದೀಪಿಕ ಯೋಗ ಕೇಂದ್ರದಿಂದ ಕೂರ್ಮಾಸನದಲ್ಲಿ ಭಾರ ಹೊರುವ ಪ್ರದರ್ಶನ ನಡೆಯಿತು.

ಕರ್ನಾಟಕ ಯೋಗ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಜಿ.ಅಮರನಾಥ್, ಕರ್ನಾಟಕ ಯೋಗ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಡಾ.ಡಿ.ಪುಟ್ಟೇಗೌಡ, ಯೋಗಾಚಾರ್ಯ ಮಂಜಪ್ಪ, ಅಂತರ ರಾಷ್ಟ್ರೀಯ ಯೋಗ ತೀರ್ಪುಗಾರರಾದ ಸಿ.ಎಸ್.ಗೀತಾ, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ ನಾಯಕ್, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎಂ.ಎಸ್.ಗುಣಶೀಲನ್, ಬ್ರಹ್ಮ ಕುಮಾರಿ ಶೋಭಾ, ವಿಶ್ವ ಯೋಗ ದಿನಾಚರಣ ಸಮಿತಿ ಕಾರ್ಯದರ್ಶಿ ವಿ.ಲೋಕೇಶ್‌ಮೂರ್ತಿ, ರಂಗ ಕಲಾವಿದ ವೆಂಕಟೇಶಮೂರ್ತಿ, ರಂಗ ಕಲಾವಿದ ಕೆ.ಪಿ.ಪ್ರಕಾಶ್, ಯೋಗ ಶಿಕ್ಷಕರಾದ ಪದ್ಮ, ಅಮರ ನಾಥ್ ಯೋಗ ಕೇಂದ್ರದ ಕಾರ್ಯದರ್ಶಿ ಬಿ.ಜಿ.ಲಕ್ಷ್ಮೀ ಅಮರನಾಥ್, ಸಂಜೀವಿನಿ ಯೋಗ ಕೇಂದ್ರದ ಅಧ್ಯಕ್ಷ ಪಿ.ಶ್ರೀಕಾಂತ, ಯೋಗ ದೀಪಿಕ ಯೋಗ ಕೇಂದ್ರದ ಎಚ್.ಎಸ್.ರಾಮಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.