
ದೇವನಹಳ್ಳಿ: ಪಟ್ಟಣದ ಸಂತೆ ಆವರಣ ಸಮೀಪದ ಬಸ್ ನಿಲ್ದಾಣದ ಬಳಿಯ ನಡುರಸ್ತೆಯಲ್ಲೇ ಮೂವರು ಯುವಕರು ಅಸ್ವಸ್ಥಗೊಂಡು ಪ್ರಜ್ಞೆತಪ್ಪಿ ಬಿದ್ದ ಘಟನೆ ಸೋಮವಾರ ನಡೆದಿದೆ. ಕೆಲಕಾಲ ಸಾರ್ವಜನಿಕರಲ್ಲಿ ಆತಂಕ ಉಂಟಾಯಿತು.
ಅಸ್ವಸ್ಥಗೊಂಡ ಯುವಕರು ಜಾರ್ಖಂಡ್ ರಾಜ್ಯದಿಂದ ಕೆಲಸಕ್ಕಾಗಿ ದೇವನಹಳ್ಳಿಗೆ ಬಂದಿದ್ದರು. ಯುವಕರು ರಸ್ತೆಯಲ್ಲೇ ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ದೇವನಹಳ್ಳಿ ಠಾಣಾ ಪೊಲೀಸರು ಯುವಕರಿಗೆ ನೀರು ಹಾಕಿ ಎಬ್ಬಿಸುವ ಪ್ರಯತ್ನ ನಡೆಸಿದರು. ಬಳಿಕ ಆಂಬುಲೆನ್ಸ್ ಮೂಲಕ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಸ್ಥಳದಲ್ಲಿ ಜನತೆ ಮುಗಿಬಿದ್ದ ಪರಿಣಾಮ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಜನರನ್ನು ಚದುರಿಸಿದರು.
ಪ್ರಾಥಮಿಕ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಯುವಕರು ಗಾಂಜಾ ಸೇವಿಸಿರುವ ಲಕ್ಷಣ ಕಂಡುಬಂದಿಲ್ಲ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.