ADVERTISEMENT

‘ಶೂನ್ಯ ಮಲೇರಿಯಾ ನನ್ನಿಂದ ಆರಂಭ’

2025ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವನ್ನಾಗಿಸುವುದು ಸರ್ಕಾರದ ಗುರಿ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 13:17 IST
Last Updated 28 ಏಪ್ರಿಲ್ 2019, 13:17 IST
ವಿಶ್ವ ಮಲೇರಿಯಾ ದಿನಾಚರಣೆಯಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು
ವಿಶ್ವ ಮಲೇರಿಯಾ ದಿನಾಚರಣೆಯಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು   

ದೇವನಹಳ್ಳಿ: ‘ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮಲೇರಿಯಾ ಮುಕ್ತವನ್ನಾಗಿಸಲು ಸಮುದಾಯದ ಸಹಕಾರ ಅತಿ ಮುಖ್ಯ’ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಡಾ.ಯೋಗೀಶ್ ಗೌಡ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ನಡೆದ ವಿಶ್ವ ಮಲೇರಿಯಾ ದಿನಾಚರಣೆ ಮತ್ತು ಮಲೇರಿಯಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

2025ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವನ್ನಾಗಿಸುವುದು ಸರ್ಕಾರದ ಗುರಿ. ಸಾಮಾಜಿಕ ಸ್ವಾಸ್ಥ್ಯಕ್ಕೆ ಮಲೇರಿಯಾ ಕಂಟಕ ಇದ್ದಂತೆ. ಮಲೇರಿಯಾ ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಹರಡುತ್ತದೆ. 2018ನೇ ಸಾಲಿನಲ್ಲಿ ಎರಡು ಮಲೇರಿಯಾ ಪ್ರಕರಣ ಪತ್ತೆ ಹಚ್ಚಲಾಗಿತ್ತು. ಡೆಂಗಿ 3, ಚಿಕುನ್ ಗುನ್ಯಾದ 8 ಪ್ರಕರಣ ದಾಖಲಾಗಿತ್ತು. 2019ನೇ ಸಾಲಿನಲ್ಲಿ ಮಲೇರಿಯಾದ ಒಂದು ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ಮಟ್ಟದಲ್ಲಿ ಆರೋಗ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಆರೋಗ್ಯ ಸಹಾಯಕರು ನಿರಂತರವಾಗಿ ಭೇಟಿ ನೀಡಿ ಸಮೀಕ್ಷೆ ನಡೆಸಿ ಪ್ರತಿ ತಿಂಗಳು ಸರ್ಕಾರಿ ಆಸ್ಪತ್ರೆಯಲ್ಲಿ ಶೇ 15ರಷ್ಟು ಹೊಸ ರೋಗಿಗಳ ರಕ್ತವನ್ನು ಪರೀಕ್ಷೆಗೆ ಒಳಪಡಿಸಲು ನೀಡಬೇಕು ಎಂದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಧರ್ಮೆಂದ್ರ ಮಾತನಾಡಿ ಈ ವರ್ಷ ‘ಶೂನ್ಯ ಮಲೇರಿಯಾ ನನ್ನಿಂದ ಆರಂಭ’ ಎಂಬ ವಾರ್ಷಿಕ ಘೊಷವಾಕ್ಯದಡಿ ಜಾಗೃತಿ ಆಭಿಯಾನ ನಡೆಸಲಾಗುತ್ತಿದೆ. ಪರಿಸರದಲ್ಲಿ ಮತ್ತು ಮನೆಯ ಸುತ್ತಮುತ್ತ ಘನತ್ಯಾಜ್ಯದಲ್ಲಿ ಸೊಳ್ಳೆ ಉತ್ಪಾದನೆಯಾಗಿ ರೋಗ ಹರಡುತ್ತದೆ. ಚಳಿ, ಜ್ವರ, ನಡುಕ, ತಲೆನೋವು ರೋಗದ ಲಕ್ಷಣ ಎಂದು ತಿಳಿಸಿದರು.

ಜ್ವರ ಬಂದ ತಕ್ಷಣ ರಕ್ತ ಪರೀಕ್ಷೆ ಕಡ್ಡಾಯವಾಗಿ ಮಾಡಿಸುವಂತೆ ರೋಗಿಗಳಿಗೆ ಮನವರಿಕೆ ಮಾಡಬೇಕು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆಪರದೆ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸುವುದು, ಕಿಟಕಿಗಳಿಗೆ ಮೆಶ್ ಅಳವಡಿಸುವುದು ಮತ್ತು ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವುದರಿಂದ ಈ ರೋಗ ತಡೆಗಟ್ಟಬಹುದು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ ಎಂದರು.

ಕುಟುಂಬ ಕಲ್ಯಾಣ ಇಲಾಖೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶ್ರೀನಿವಾಸ್, ಆರ್.ಸಿ.ಎಚ್ ಘಟಕದ ಅಧಿಕಾರಿ ಡಾ.ಮಹೇಶ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶಕೀಲಾ, ನಾಲ್ಕು ತಾಲ್ಲೂಕುಗಳ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.