ADVERTISEMENT

1,800 ವಾಹನಗಳಿಗೆ ದಂಡ

ಶೇ 95ರಷ್ಟು ಕಸದ ರಾಶಿ ತೆರವು: ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 20:12 IST
Last Updated 4 ನವೆಂಬರ್ 2018, 20:12 IST
ನಗರದ ಕೆ.ಕಾಮರಾಜ ರಸ್ತೆ ಮತ್ತು ತಿಮ್ಮಯ್ಯ ರಸ್ತೆ ಸೇರುವಲ್ಲಿ ಭಾನುವಾರ ಕಂಡು ಬಂದ ಕಸದ ರಾಶಿ –ಪ್ರಜಾವಾಣಿ ಚಿತ್ರ
ನಗರದ ಕೆ.ಕಾಮರಾಜ ರಸ್ತೆ ಮತ್ತು ತಿಮ್ಮಯ್ಯ ರಸ್ತೆ ಸೇರುವಲ್ಲಿ ಭಾನುವಾರ ಕಂಡು ಬಂದ ಕಸದ ರಾಶಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಾಹನದಲ್ಲಿ ಬಂದು ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವುದರ ಮೇಲೆ ನಿಗಾ ಇಟ್ಟಿದ್ದ ಬಿಬಿಎಂಪಿ ನಾಲ್ಕು ದಿನಗಳಲ್ಲಿ 1800 ವಾಹನಗಳ ಮಾಲೀಕರಿಗೆ ದಂಡ ವಿಧಿಸಿದೆ.

ಕಸದ ಸಮಸ್ಯೆ ಬಗ್ಗೆ ಬಿಬಿಎಂಪಿಯನ್ನು ತರಾಟೆಗೆ ತಗೆದುಕೊಂಡಿದ್ದ ಹೈಕೋರ್ಟ್‌ ಭಾನುವಾರದ ಒಳಗೆ ನಗರದಲ್ಲಿ ಎಲ್ಲೂ ಕಸದ ರಾಶಿ ಇರಬಾರದು ಎಂದು ತಾಕೀತು ಮಾಡಿತ್ತು. ನಗರದಲ್ಲಿ 1600 ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿ ಹಾಕುತ್ತಿದ್ದುದನ್ನು ಬಿಬಿಎಂಪಿ ಪತ್ತೆ ಹಚ್ಚಿತ್ತು. ಇವುಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.

ಸಾರ್ವಜನಿಕ ಪ್ರದೇಶದಲ್ಲಿ ಕಸ ಬಿಸಾಡುವವರ ಮೇಲೆ ನಿಗಾ ಇಡಲು ಮಾರ್ಷಲ್‌ಗಳನ್ನು ನೇಮಿಸಿತ್ತು. ನಿತ್ಯವು ಜನ ಕಸವನ್ನು ರಾಶಿ ಹಾಕುತ್ತಿದ್ದ ಸ್ಥಳಗಳನ್ನು ಸ್ವಚ್ಛಗೊಳಿಸಿ ಅಲ್ಲಿ ರಂಗೋಲಿ ಹಾಕುವ ಅಭಿಯಾನವನ್ನೂ ಪಾಲಿಕೆ ಕೈಗೆತ್ತಿಕೊಂಡಿತ್ತು. ನಾಲ್ಕು ದಿನಗಳು ನಡದ ಈ ಅಭಿಯಾನದಲ್ಲಿ ಅಗ್ಲಿ ಇಂಡಿಯನ್ಸ್‌ ಸಂಸ್ಥೆ ಕೈಜೋಡಿಸಿತ್ತು.

ADVERTISEMENT

‘ನಗರದಲ್ಲಿದ್ದ ಶೇ 95ಕ್ಕೂ ಹೆಚ್ಚು ಕಡೆ ಕಸದ ರಾಶಿಯನ್ನು ತೆರವುಗೊಳಿಸಿದ್ದೇವೆ. ಕೆಲವೆಡೆ ನಮ್ಮ ಸಿಬ್ಬಂದಿ ತೆರವುಗೊಳಿಸಿದ ಬಳಿಕವೂ ಕೆಲವರು ಕಸ ತಂದು ಹಾಕುತ್ತಿದ್ದಾರೆ. ಇಂತಹವರನ್ನು ಗುರುತಿಸಿ ದಂಡ ವಿಧಿಸುತ್ತಿದ್ದೇವೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್‌ ಖಾನ್‌ ತಿಳಿಸಿದರು.

ಬಿಬಿಎಂಪಿಯ ಈ ಪ್ರಯತ್ನದ ಹೊರತಾಗಿಯೂ ನಗರದ ಕೆಲವೆಡೆ ಭಾನುವಾರ ಕಸದ ರಾಶಿ ಹಾಗೆಯೇ ಉಳಿದುಕೊಂಡಿರುವುದು ಕಂಡು ಬಂತು. ‘ರಂಗೋಲಿ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ನಾವು ಕಸದ ರಾಶಿ ತೆರವುಗೊಳಿಸಿ ರಂಗೋಲಿ ಬಿಡಿಸಿದ ಸುಮಾರು 275 ಕಡೆಗಳಲ್ಲಿ ಯಾರೂ ಕಸ ಹಾಕಿಲ್ಲ. ಹಾಗಾಗಿ ಇನ್ನಷ್ಟು ದಿನ ನಾವು ಈ ಪರಿಪಾಠವನ್ನು ಮುಂದುವರಿಸುತ್ತೇವೆ’ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.