ADVERTISEMENT

ಅಧಿಕಾರ ಸಿಕ್ಕ 24 ಗಂಟೆಗಳಲ್ಲಿ ಸಾಲ ಮನ್ನಾ

ತೇರ ಬಜಾರದಲ್ಲಿ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 5 ಮೇ 2018, 9:21 IST
Last Updated 5 ಮೇ 2018, 9:21 IST

ರಾಮದುರ್ಗ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ₹ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದರು.

ಪಟ್ಟಣದ ತೇರ ಬಜಾರದಲ್ಲಿ ಶುಕ್ರವಾರ ಸಂಜೆ ರಾಮದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹಾದೇವಪ್ಪ ಯಾದವಾಡ ಪರ ಮತಯಾಚನೆ ಮಾಡಿದ ಅವರು, ‘ರೈತರ ಸಾಲಮನ್ನಾ ಅಷ್ಟೇ ಅಲ್ಲ, ನೇಕಾರ ಸಾಲವನ್ನೂ ಮನ್ನಾ ಮಾಡುತ್ತೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಮಹಿಳಾ ಸಹಕಾರಿ ಸಂಘ ಆರಂಭಿಸಿ ಮಹಿಳೆಯರನ್ನು ಆರ್ಥಿಕವಾಗಿ ಸದೃಡವಾಗಿಸಲು ಬಿಜೆಪಿ ಶ್ರಮಿಸುತ್ತಿದೆ. ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್ ನೀಡುತ್ತೇವೆ, ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ₹1 ಲಕ್ಷದವರೆಗೆ ಸಾಲ ನೀಡಲಾಗುವುದು. ಭಾಗ್ಯಲಕ್ಷ್ಮೀ ಯೋಜನೆಯ ಮೊತ್ತವನ್ನು ದುಪ್ಪಟ್ಟುಗೊಳಿಸಲಾಗುವುದು’ ಎಂದರು.

ADVERTISEMENT

‘ಬಡ ಹೆಣ್ಣು ಮಕ್ಕಳ ಮದುವೆಗೆ ನಾಲ್ಕು ಗ್ರಾಂ ಬಂಗಾರದ ಮಂಗಲಸೂತ್ರ ಮತ್ತು ₹ 25 ಸಾವಿರ ಸಹಾಯಧನ, ಕಾಲೇಜುಗಳಲ್ಲಿ ಅಧ್ಯಯನ ಮಾಡುವ ಎಲ್ಲ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ವಿಶೇಷ ಯೋಜನೆಯಡಿ ಉಚಿತ ಲ್ಯಾಪ್‌ಟಾಪ್ ವಿತರಿಸುವುದು ಸೇರಿದಂತೆ ಬಡ ಜನರ ಅಭಿವೃದ್ಧಿಗಾಗಿ ಬಿಜೆಪಿಯ ಅಭ್ಯರ್ಥಿ ಮಹಾದೇವಪ್ಪ ಯಾದವಾಡರಿಗೆ ಮತ ನೀಡಿ ಆಯ್ಕೆ ಮಾಡಲು ಪಣ ತೊಡಬೇಕು’ ಎಂದು ಹೇಳಿದರು.

20 ಸಾವಿರ ಅಂತರದಿಂದ ಗೆಲ್ಲಿಸಿ: ‘ಪ್ರಾಮಾಣಿಕವಾಗಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುವ, ಸರಳ ಜೀವಿ ಮಾಜಿ ಶಾಸಕರಾದ ಬಿಜೆಪಿ ಅಭ್ಯರ್ಥಿ ಮಹಾದೇವಪ್ಪ ಯಾದವಾಡರನ್ನು 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಮತದಾರರಲ್ಲಿ ಮನವಿ ಮಾಡಿದರು.

ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಮಹಾದೇವಪ್ಪ ಯಾದವಾಡ ಮಾತನಾಡಿ, ‘ಈ ಬಾರಿ ತಾಲ್ಲೂಕಿನ ಮತ
ದಾರರು ಆಶೀರ್ವಾದ ಮಾಡಿ ಸೇವೆ ಮಾಡಲು ಅವಕಾಶ ನೀಡಬೇಕು’ ಎಂದು ವಿನಂತಿಸಿಕೊಂಡರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಸಂಜು ಶೆಟ್ಟಿಸದಾವರ್ತಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಜೆ.ಎನ್. ಹಕಾಟಿ, ವೆಂಕಣ್ಣ ಮಳಲಿ, ಮಲಕಾಜಿ ಕೊಪ್ಪದ, ಬಿ.ಆರ್‌. ದೊಡಮನಿ, ಸುರೇಶ ಡುಳ್ಳೊಳ್ಳಿ ಸೇರಿದಂತೆ ಹಲವಾರು ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕಾ ಪಂಚಾಯ್ತಿ ಸದಸ್ಯರು ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.