ADVERTISEMENT

ಅಪೌಷ್ಟಿಕತೆ ನಿವಾರಣೆಗೆ ಪ್ರಾಮುಖ್ಯ ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 9:15 IST
Last Updated 13 ಜುಲೈ 2012, 9:15 IST
ಅಪೌಷ್ಟಿಕತೆ ನಿವಾರಣೆಗೆ ಪ್ರಾಮುಖ್ಯ ನೀಡಲು ಸಲಹೆ
ಅಪೌಷ್ಟಿಕತೆ ನಿವಾರಣೆಗೆ ಪ್ರಾಮುಖ್ಯ ನೀಡಲು ಸಲಹೆ   

ಬೆಳಗಾವಿ: “ಡಿಸೆಂಬರ್ 31ರೊಳಗೆ ಬೆಳಗಾವಿಯನ್ನು `ಅಪೌಷ್ಟಿಕ ಮಕ್ಕಳು ರಹಿತ ನಗರ~ವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅಧಿಕಾರಿ ಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕಾರ್ಯೋನ್ಮುಖರಾಗಬೇಕು” ಎಂದು ಜಿಲ್ಲಾಧಿ ಕಾರಿ ವಿ. ಅನ್ಬುಕುಮಾರ ಸೂಚಿಸಿದರು.

ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಳಗಾವಿ ನಗರದ 6 ವರ್ಷದೊಳಗಿನ ಪೌಷ್ಟಿಕೌಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಮೀಕ್ಷೆ ಕಾರ್ಯಾಗಾರವನ್ನು ಮಗುವೊಂದರ ತೂಕವನ್ನು ಪರೀಕ್ಷಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

“ನಗರದಲ್ಲಿರುವ 6 ವರ್ಷದೊಳಗಿನ ಪ್ರತಿಯೊಂದು ಮಗುವಿನ ಆರೋಗ್ಯ ತಪಾಸಣೆ ನಡೆಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಆರೋಗ್ಯ ಇಲಾಖೆ, ಕಂದಾಯ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕೈಜೋಡಿಸುವ ಮೂಲಕ ಆರು ತಿಂಗಳ ಅವಧಿಯಲ್ಲಿ ಅಪೌಷ್ಟಿಕ ಮಕ್ಕಳನ್ನು ಸಹಜ ಸ್ಥಿತಿಗೆ ತರಬೇಕು” ಎಂದು ಸಲಹೆ ನೀಡಿದರು.

“ನಗರದಲ್ಲಿ 5.4 ಲಕ್ಷ ಜನಸಂಖ್ಯೆ ಇದ್ದು, 6 ವರ್ಷದೊಳಗಿನ 56 ಸಾವಿರ ಮಕ್ಕಳು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 7254 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ನಗರದಲ್ಲಿ 375 ಅಪೌಷ್ಟಿಕ ಮಕ್ಕಳು ಇದ್ದಾರೆ. ಈಗಾಗಲೇ ಇಂಥ ಮಕ್ಕಳಿಗೆ ಮೊಟ್ಟೆ- ಹಾಲು ನೀಡಲಾಗುತ್ತಿದೆ. ಜೊತೆಗೆ ಬಾಲ ಸಂಜೀವಿನಿ ಯೋಜನೆ ಮೂಲಕ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

“ಅಪೌಷ್ಟಿಕತೆ ನಿವಾರಣೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕೊಡುಗೆ ಅಪಾರವಾಗಿದೆ. ಮಕ್ಕಳ ಪಾಲಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಮನೆಯಲ್ಲಿ ನೈರ್ಮಲ್ಯತೆ ಕಾಪಾಡಿಕೊಂಡು, ಮಕ್ಕಳಿಗೆ ಉತ್ತಮ ಆಹಾರ ನೀಡುವಂತೆ ಪಾಲಕರ ಮನವೊಲಿಸಬೇಕು” ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ. ಶಂಕರ, “ಪ್ರತಿಯೊಂದು ಮಗುವಿಗೂ ಪೌಷ್ಟಿಕ ಆಹಾರ ಸಿಗುವಂತೆ ಮಾಡುವುದು ಸರ್ಕಾರದ ಕರ್ತವ್ಯ. ಅಂಗನವಾಡಿಯಿಂದ ಹೊರಗೆ ಇರುವ ಮಕ್ಕಳ ಸಮೀಕ್ಷೆಯನ್ನೂ ನಡೆಸಿ ಅವರಿಗೂ ಪೌಷ್ಟಿಕ ಆಹಾರ ಲಭಿಸುವಂತೆ ಮಾಡಬೇಕು” ಎಂದು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಮಾತನಾಡಿ, “ಯೋಜನೆಯಂತೆ ನಗರದ 6 ವರ್ಷದೊಳಗಿನ ಎಲ್ಲ ಮಕ್ಕಳ ತಪಾಸಣೆ ನಡೆಸಿ ಅಪೌಷ್ಟಿಕ ಮಕ್ಕಳ ಫೋಟೊ ಸಹಿತ ವಿವರಗಳನ್ನು ಸಂಗ್ರಹಿಸಿಡಲಾಗುತ್ತಿದೆ. ಪ್ರತಿ ತಿಂಗಳು ಮಕ್ಕಳ ತೂಕ, ಎತ್ತರ ಹಾಗೂ ಫೋಟೊವನ್ನು ಸಂಗ್ರಹಿಸಲಾಗುತ್ತದೆ.

ಜುಲೈ 13ರಿಂದ ಜು. 19ರವರೆಗೆ ನಗರದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಡಿಸೆಂಬರ್ 31ರೊಳಗೆ ಅಪೌಷ್ಟಿಕ ಮಕ್ಕಳು ರಹಿತ ನಗರವನ್ನಾಗಿ ರೂಪಿಸುವ ಮೂಲಕ ರಾಜ್ಯದಲ್ಲೇ ಬೆಳಗಾವಿ ಯನ್ನು ಮಾದರಿಯನ್ನಾಗಿ ಮಾಡುವ ಗುರಿ ಯನ್ನು ಹೊಂದಿದ್ದೇವೆ” ಎಂದು ತಿಳಿಸಿದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಇಂದಿರಾ ಕಬಾಡೆ ಶ್ಲೈಡ್ ಶೋ ಮೂಲಕ ಸಮೀಕ್ಷೆ ನಡೆಸುವ ಕುರಿತು ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು ಪ್ರಾರ್ಥಿಸಿ ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್. ಓಬಳಪ್ಪ ಸ್ವಾಗತಿಸಿದರು. ಶೈಲಜಾ ತಮ್ಮಣ್ಣವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.