ADVERTISEMENT

ಅರ್ಹರಿಗೆ ಪಡಿತರ ಚೀಟಿ ವಿತರಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:17 IST
Last Updated 11 ಡಿಸೆಂಬರ್ 2013, 6:17 IST

ಹುಕ್ಕೇರಿ: ಡಿಸೆಂಬರ್ ತಿಂಗಳು ಮುಗಿ­ಯುತ್ತ ಬಂದರೂ ಪಡಿತರ ಚೀಟಿಗಳನ್ನು ನೀಡಲು ವಿಳಂಬವಾಗುತ್ತಿದೆ.   ಅರ್ಹ­ರಿಗೆ ಪಡಿತರ ಚೀಟಿಗಳನ್ನು ಕೂಡಲೇ  ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.

ಅವರು ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಸಾರ್ವ­ಜನಿಕರ ಅಹವಾಲುಗಳನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿದರು. ಪಟ್ಟಣದ ರಹವಾಸಿ ಸಲೀಂ ಕಳಾವಂತ ಪಡಿತರ ಚೀಟಿಯ ಸಮಸ್ಯೆ ಬಗ್ಗೆ ವಿವರಿಸಿ ಸ್ಥಳೀಯ ಶಾಸಕರ ಆದೇಶ­ದಂತೆ ಬೇಕಾದವರಿಗೆ ಮಾತ್ರ ಅಧಿಕಾರಿ­ಗಳು ಪಡಿತರ ಚೀಟಿ ನೀಡುತ್ತಿದ್ದಾರೆಂದು ಆರೋಪಿಸಿದರು. 

‘ಅಧಿಕಾರಿಗಳು ಹಳ್ಳಿಗಳಲ್ಲಿಏಜೆಂಟರ್‌ ಮೂಲಕ ತಮಗೆ ಬೇಕಾದವರಿಗೆ ಪಡಿತರ ಚೀಟಿಗಳನ್ನು ವಿತರಿಸುತ್ತಿದ್ದು, ಅರ್ಹ ಪಲಾನುಭವಿಗಳಿಗೆ ಪಡಿತರ ಚೀಟಿ ದೊರೆಯುತ್ತಿಲ್ಲ’ ಎಂದು ಸಾರ್ವಜನಿಕರು ಸಚಿವರ ಮುಂದೆ ತಮ್ಮ ಅಳಲು ತೋಡಿಕೊಂಡರು. ‘ಪಡಿತರ ಚೀಟಿಗಾಗಿ 22 ಸಾವಿರ ಹೊಸ ಅರ್ಜಿಗಳು ಬಂದಿವೆ.

ಪಟ್ಟಣ ಪಂಚಾಯಿತಿ,ಪುರಸಭೆ ಮತ್ತು ಗ್ರಾಮ ಪಂಚಾಯಿತಿ ಮೂಲಕ ಸರ್ವೆ ಕಾರ್ಯ ಮಾಡಲಾಗುತ್ತಿದೆ. ಸರ್ವೆ ಕಾರ್ಯ ಮುಗಿದ ನಂತರ ಅರ್ಹ ವ್ಯಕ್ತಿಗಳಿಗೆ ಪಡಿತರ ಚೀಟಿ ವಿತರಿಸಲಾಗು­ವುದು’ ಎಂದು ತಹಶೀಲ್ದಾರ್ ಎಸ್.ಎಸ್.­ಬಳ್ಳಾರಿ ಸಚಿವರಿಗೆ ಮಾಹಿತಿ ನೀಡಿದರು.

ಬರುವ ಬೇಸಿಗೆಯಲ್ಲಿ ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸ್ಥಿತಿಯಿದ್ದು, ತಾಲ್ಲೂಕಿನ ಬಡಕುಂದ್ರಿ ಹೊಳೆಮ್ಮ ದೇವಸ್ಥಾನದ ನದಿಯಲ್ಲಿ ನೀರು ನಿಲ್ಲಿಸಬೇಕೆಂದು ಆ ಭಾಗದ  ರೈತರು ಸಚಿವರಲ್ಲಿ ಮನವಿ ಮಾಡಿಕೊಂಡರು. ಮದಮಕ್ಕನಾಳ ಬೆಣಿವಾಡ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯು  2 ವರ್ಷ­ದಿಂದ ನಡೆಯುತ್ತಿದೆ. ಇದರಿಂದ ಪ್ರಯಾಣಿಕರು ದಿನ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ  ರಸ್ತೆ ಕಾಮಗಾರಿ  ಮುಗಿಸುವಂತೆ ಸೂಚಿಸ­ಬೇಕೆಂದು ಆಗಮಿಸಿದ್ದ ಸಾರ್ವಜನಿಕರು ವಿನಂತಿಸಿದರು.

ವಿವಿಧ ಗ್ರಾಮಗಳಿಗೆ ಸಂಬಂಧಿಸಿದಂತೆ ರಸ, ನೀರಿನ ಮತ್ತು ಚರಂಡಿಗಳ ಸಮಸ್ಯೆ­ಗಳ ಬಗ್ಗೆ ಸಾರ್ವಜನಿಕರು ಸಚಿವರಿಗೆ ಮನವಿ ಅರ್ಪಿಸಿದರು. ತಾ.ಪಂ.ಇಒ ಎ.ಬಿ. ಪಟ್ಟಣಶೆಟ್ಟಿ, ಜಿ.ಪಂ. ಎಇಇ ಎಸ್.ಪಿ. ಪಾಟೀಲ, ಸ.ಕೃ, ನಿರ್ದೆಶಕಿ ಜಯಶ್ರೀ ಹಿರೇಮಠ,  ಎಂಜಿ­ನಿಯರ್ ವಿ.ಎನ್. ಪಾಟೀಲ, ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್. ವಿ. ಮುನ್ಯಾಳ,ಆಹಾರ ನಿರೀಕ್ಷಕ ದಯ­ನ್ನವರ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು.

ಕಾಂಗ್ರೆಸ್ ಘಟಕದ ಅಧ್ಯಕ್ಷ ರವಿ ಕರಾಳೆ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಇಫ್ತಿಕಾರ್‌ ಪೀರಜಾದೆ, ವಕೀಲ  ಎಂ.ಎಂ. ಪಾಟೀಲ, ರವಿ ಜಿಂಡ್ರಾಳೆ, ಹು.ಗ್ರಾ.ವಿ.ಸ.ಸಂಘದ ನಿರ್ದೆಶಕ ರಾಜೇಂದ್ರ ತುಬಚಿ, ಆರ್.ಕೆ. ದೇಸಾಯಿ, ರಾಜು ಹುಂಬರವಾಡಿ, ಚಂದು ಗಂಗನ್ನವರ, ಗಣಿ ಪೀರಜಾದೆ, ಲತೀಫ್‌ ಪೀರಜಾದೆ, ಜಾವೇದ್‌ ಖಾನಜಾದೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT