ADVERTISEMENT

ಆಟೊರಿಕ್ಷಾ ಸಂಚಾರ ಪುನರಾರಂಭ

ಕನಿಷ್ಠ ದರ ರೂ 25ಕ್ಕೆ ಏರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 8:39 IST
Last Updated 4 ಆಗಸ್ಟ್ 2013, 8:39 IST

ಬೆಳಗಾವಿ: ಮೀಟರ್ ಬಳಕೆ ಕಡ್ಡಾಯಗೊಳಿಸುವ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಮುಷ್ಕರ ನಡೆಸುತ್ತಿದ್ದ ಆಟೊರಿಕ್ಷಾ ಚಾಲಕರ ಸಂಘವು ಭಾನುವಾರದಿಂದ ಪುನಃ ಸೇವೆ ಆರಂಭಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆಯ ಕೆಲ ಆಟೊಗಳು ಸಂಚರಿಸಿದವು

ನಗರ ವ್ಯಾಪ್ತಿಯಲ್ಲಿ ಆಗಸ್ಟ್ 1ರಿಂದಲೇ ಮೀಟರ್ ಬಳಕೆ ಕಡ್ಡಾಯಗೊಳಿಸಿ ರಸ್ತೆ ಸಾರಿಗೆ ಪ್ರಾಧಿಕಾರವು (ಆರ್‌ಟಿಎ) ಹೊರಡಿಸಿದ್ದ ಆದೇಶವನ್ನು ಖಂಡಿಸಿ ಗುರುವಾರದಿಂದ ಮುಷ್ಕರ ಆರಂಭಿಸಿದ್ದ ಆಟೊ ಚಾಲಕರು ಶನಿವಾರವೂ ತಮ್ಮ ಆಟೊರಿಕ್ಷಾಗಳನ್ನು ರಸ್ತೆಗೆ ಇಳಿಸದೇ ಪ್ರತಿಭಟಿಸಿದರು. ಆಟೊ ಮುಷ್ಕರದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಶನಿವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು.

ಮುಷ್ಕರ ನಿರತ ಆಟೊ ಚಾಲಕರು ಶನಿವಾರ ಬೆಳಿಗ್ಗೆ ಚನ್ನಮ್ಮ ವೃತ್ತದ ಬಳಿಕ ಸೇರಿ ಸಭೆ ನಡೆಸಿದರು. ಮುಷ್ಕರದ ಸಾಧಕ- ಬಾಧಕಗಳ ಕುರಿತು ಪರಸ್ಪರ ಚರ್ಚಿಸಿದರು.

ಬಳಿಕ ಮಧ್ಯಾಹ್ನದ ಮೇಲೆ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರನ್ನು ಭೇಟಿ ಮಾಡಿದ ಆಟೊ ಚಾಲಕರ ಸಂಘದ ಮುಖಂಡರು, ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದರು.

ಸುಮಾರು 3000 ಆಟೊರಿಕ್ಷಾಗಳ ಮೀಟರ್ ಸುಸ್ಥಿತಿಯಲ್ಲಿದೆ. ಉಳಿದ 2000ಕ್ಕೂ ಹೆಚ್ಚಿನ ಆಟೊಗಳ ಮೀಟರ್ ದುರಸ್ತಿಯಾಗುವುದಿದೆ. ಹೀಗಾಗಿ ಮೀಟರ್ ಬಳಕೆ ಕಡ್ಡಾಯಗೊಳಿಸುವ ಅವಧಿಯನ್ನು ವಿಸ್ತರಿಸಬೇಕು. ಸಂಚಾರಿ ಪೊಲೀಸರು ತಪಾಸಣೆ ಹೆಸರಿನಲ್ಲಿ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಇದನ್ನು ನಿವಾರಿಸಬೇಕು' ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, `ಸದ್ಯ ಮೀಟರ್ ಸುಸ್ಥಿತಿಯಲ್ಲಿರುವ 3000 ಆಟೊರಿಕ್ಷಾಗಳನ್ನು ಈಗಿನಿಂದಲೇ ಓಡಿಸಲು ಆರಂಭಿಸಿ. ಬಾಕಿ ಆಟೊಗಳ ಮೀಟರ್‌ಗಳನ್ನು ದುರಸ್ಥಿಗಾಗಿ ತಂತ್ರಜ್ಞರಿಗೆ ನೀಡಿ, ರಸೀದಿಯನ್ನು ಪಡೆದುಕೊಳ್ಳಿ. ಯಾರ ಬಳಿ ರಸೀದಿ ಇರುತ್ತದೆಯೋ ಅಂಥವರಿಗೆ ಕೆಲವು ಸಮಯದವರೆಗೆ ದಂಡ ವಿಧಿಸದಂತೆ ಸೂಚಿಸಲಾಗುವುದು' ಎಂದು ಭರವಸೆ ನೀಡಿದರು.

`ಸದ್ಯ ನಿಗದಿಗೊಳಿಸಿರುವ ಮೊದಲ 2 ಕಿ.ಮೀ.ಗೆ ಕನಿಷ್ಠ 20 ರೂಪಾಯಿ ಹಾಗೂ ನಂತರದ ಪ್ರತಿ ಕಿ.ಮೀ.ಗೆ 10 ರೂಪಾಯಿಯಲ್ಲಿ ಆಟೊ ಓಡಿಸಿದರೆ ನಮಗೆ ಹಾನಿಯಾಗುತ್ತದೆ. ಹೀಗಾಗಿ ಕನಿಷ್ಠ ದರವನ್ನು ರೂ 25 ಹಾಗೂ ನಂತರದ ಪ್ರತಿ ಕಿ.ಮೀ.ಗೆ 15 ರೂಪಾಯಿ ನಿಗದಿಗೊಳಿಸಬೇಕು' ಎಂದು ಆಟೊ ಚಾಲಕರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

`ರಸ್ತೆ ಸಾರಿಗೆ ಪ್ರಾಧಿಕಾರದ ಹಿಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಂತೆ ಕನಿಷ್ಠ ರೂ 20ರ ದರದಲ್ಲಿ ಮೊದಲು ಆಟೊ ಓಡಿಸಿ. ಈ ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಮೊದಲು ಅನುಷ್ಠಾನಗೊಳಿಸಿ. ಆಗ ಜನರ ವಿಶ್ವಾಸವನ್ನೂ ನೀವು ಗಳಿಸಿಕೊಳ್ಳಲು ಸಾಧ್ಯ. ನಿಮ್ಮ ಎಲ್ಲ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು ಮುಂದಿನ ಆರ್‌ಟಿಎ ಸಭೆಗೆ ತೆಗೆದುಕೊಂಡು ಬನ್ನಿ. ಅಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳೋಣ' ಎಂದು ಜಯರಾಮ್ ಭರವಸೆ ನೀಡಿದರು.

`ಬೆಂಗಳೂರು, ಮುಂಬೈಗೆ ಸಂಚರಿಸುವ ಐಶಾರಾಮಿ ಬಸ್‌ಗಳು ನಗರದ ವಿವಿಧ ಬಡಾವಣೆಗೆ ತೆರಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು ಹಾಗೂ ಇಳಿಸುವುದನ್ನು ಮಾಡುತ್ತಿರುವುದರಿಂದ ಆಟೊದವರಿಗೆ ಬಾಡಿಗೆ ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ಖಾಸಗಿ ಬಸ್‌ಗಳ ಪಾಯಿಂಟ್ ಕಡಿಮೆ ಮಾಡಬೇಕು' ಎಂದು ಆಟೊ ಚಾಲಕರ ಸಂಘದವರು ಒತ್ತಾಯಿಸಿದರು.

`ಖಾಸಗಿ ಬಸ್‌ಗಳ ಪಿಕಪ್ ಪಾಯಿಂಟ್ ಕಡಿಮೆ ಮಾಡುವ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ಕಾನೂನು ಬಾಹಿರವಾಗಿ ನಗರದಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿರುವ ಖಾಸಗಿ ವಾಹನಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾಧಿಕಾರಿಗಳು ಆಶ್ವಾಸನೆ ನೀಡಿದರು.

`ಆಟೊ ಚಾಲಕರ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗುತ್ತಿದೆ. ಭಾನುವಾರದಿಂದ ನಗರದಲ್ಲಿ ಆಟೊ ಸಂಚಾರ ಯಥಾಸ್ಥಿತಿಯಲ್ಲಿ ನಡೆಯಲಿದೆ' ಎಂದು ಆಟೊ ಚಾಲಕರ ಸಂಘದ ಬಸವರಾಜ ಅವರೊಳ್ಳಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.