ADVERTISEMENT

ಆರ್‌ಟಿಐ ಕಾಯ್ದೆಅಭ್ಯಾಸಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2013, 8:44 IST
Last Updated 23 ಫೆಬ್ರುವರಿ 2013, 8:44 IST
ಬೆಳಗಾವಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಅಧಿನಿಯಮದ ಕುರಿತು ಅಧಿಕಾರಿಗಳ ಕಾರ್ಯಾಗಾರವನ್ನು ಮಾಹಿತಿ ಆಯುಕ್ತ ಡಾ. ಶೇಖರ ಸಜ್ಜನರ ಉದ್ಘಾಟಿಸಿದರು. ಎಸ್.ಎಸ್. ಹಿರೇಮಠ, ಜಿಲ್ಲಾಧಿಕಾರಿ ಎನ್. ಜಯರಾಮ್ ಮತ್ತಿತರರು ಚಿತ್ರದಲ್ಲಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಹಿತಿ ಹಕ್ಕು ಅಧಿನಿಯಮದ ಕುರಿತು ಅಧಿಕಾರಿಗಳ ಕಾರ್ಯಾಗಾರವನ್ನು ಮಾಹಿತಿ ಆಯುಕ್ತ ಡಾ. ಶೇಖರ ಸಜ್ಜನರ ಉದ್ಘಾಟಿಸಿದರು. ಎಸ್.ಎಸ್. ಹಿರೇಮಠ, ಜಿಲ್ಲಾಧಿಕಾರಿ ಎನ್. ಜಯರಾಮ್ ಮತ್ತಿತರರು ಚಿತ್ರದಲ್ಲಿದ್ದಾರೆ.   

ಬೆಳಗಾವಿ: `ಮಾಹಿತಿ ಹಕ್ಕು ಕಾಯ್ದೆಯನ್ನು ಗಂಭೀರವಾಗಿ ಅಭ್ಯಾಸ ಮಾಡಿ ಯಾವ ಮಾಹಿತಿ ನೀಡಬೇಕು ಹಾಗೂ ಯಾವುದನ್ನು ನೀಡಬಾರದು ಎಂಬ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಬೇಕು' ಎಂದು ರಾಜ್ಯ ಮಾಹಿತಿ ಆಯುಕ್ತ ಡಾ. ಶೇಖರ ಸಜ್ಜನರ ಅಧಿಕಾರಿಗಳಿಗೆ ಸೂಚಿಸಿದರು.

ಮಾಹಿತಿ ಹಕ್ಕು ಅಧಿನಿಯಮ ಕುರಿತು ಅಧಿಕಾರಿಗಳಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು, ಮಾಹಿತಿ ಕೋರಿ ಬರುವ ಅರ್ಜಿದಾರರಿಗೆ ಅರ್ಜಿ ತುಂಬಲು ಸಹಾಯ ಮಾಡಬೇಕು.  ಇದರಿಂದ ಮಾಹಿತಿ ನೀಡಲು ಅನುಕೂಲ ಹಾಗೂ ಸುಲಭವಾಗುತ್ತದೆ. ಸೂಕ್ತ ಸಮಯದಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡಿ ಕಾಯ್ದೆಯ ಉದ್ದೇಶವನ್ನು ಸಾಕಾರಗೊಳಿಸಬೇಕು ಎಂದು ಹೇಳಿದರು.

ಅರ್ಜಿಯನ್ನು ಸ್ವೀಕರಿಸಿದ ಮೇಲೆ ಉದಾಸೀನ ಮಾಡಬಾರದು. ಅರ್ಜಿ ಸ್ವೀಕರಿಸಿದ ಕೂಡಲೇ ಅದನ್ನು ಗಂಭೀರವಾಗಿ ಪರಾಮರ್ಶಿಸಿ ಪ್ರತಿಯೊಂದು ಅರ್ಜಿಯ ವಿಲೇವಾರಿಗೆ ಕ್ರಮಕೈಗೊಳ್ಳಬೇಕು.

ಮಾಹಿತಿ ಮತ್ತೊಬ್ಬ ಅಧಿಕಾರಿ ಬಳಿ ಇದ್ದರೆ ಅರ್ಜಿ ವಿಷಯ ಅವರಿಗೆ ತಿಳಿಸಿ, ಅರ್ಜಿದಾರರಿಗೆ ಪ್ರತಿ ನೀಡಬೇಕು ಎಂದು ತಿಳಿಸಿದರು. ಸಾರ್ವಜನಿಕ ಮಾಹಿತಿ ಅಧಿಕಾರಿ ಮೇಲ್ಮನವಿ ಅಧಿಕಾರಿಗಳ ಡೈರಕ್ಟರಿಯನ್ನು ಇಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.

ಸಾರ್ವಜನಿಕ ಮಾಹಿತಿ ಅಧಿಕಾರಿ  ಅಧಿನಿಯಮದ ಆದೇಶ, ಸುತ್ತೋಲೆಯ ಇತ್ಯಾದಿ ಪ್ರತಿಗಳನ್ನು ಪ್ರತಿಯೊಬ್ಬರೂ ಇಟ್ಟುಕೊಳ್ಳಬೇಕು. ಮಾಹಿತಿ ನೀಡಲು ಪಡೆಯಬೇಕಾದ ಶುಲ್ಕದ ವಿವರ, ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಪಟ್ಟಂತೆ ಅಗತ್ಯವಾದ ನಮೂನೆಗಳನ್ನು ತಯಾರಿಸಿ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಎನ್. ಜಯರಾಮ್ ಅತಿಥಿಗಳನ್ನು ಸ್ವಾಗತಿಸಿದರು. ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT