ADVERTISEMENT

ಈದ್‌: ಒಕ್ಕೂಟಕ್ಕೂ ಸಂಭ್ರಮ!

ಶೀರ್‌ ಕುರ್ಮಾ ತಯಾರಿಕೆ: ಜಿಲ್ಲೆಯಾದ್ಯಂತ ಹಾಲಿಗೆ ಹೆಚ್ಚಿದ ಬೇಡಿಕೆ

ಎಂ.ಮಹೇಶ
Published 15 ಜೂನ್ 2018, 10:15 IST
Last Updated 15 ಜೂನ್ 2018, 10:15 IST

ಬೆಳಗಾವಿ: ಮುಸ್ಲಿಮರು ಆಚರಿಸುವ ‘ಈದ್‌–ಉಲ್‌–ಫಿತ್ರ್‌’ ಸಂಭ್ರಮಕ್ಕಾಗಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ ಎರಡೂವರೆ ಲಕ್ಷ ಲೀಟರ್‌ಗೂ ಹೆಚ್ಚಿನ ಪ್ರಮಾಣದ ಹಾಲಿನ ಬೇಡಿಕೆ ಬಂದಿದೆ.

ಹಬ್ಬದ ಅಂಗವಾಗಿ ಮುಸ್ಲಿಂ ಕುಟುಂಬದವರು ‘ಶೀರ್‌ ಕುರ್ಮಾ’ (ಶಾವಿಗೆ ಪಾಯಸ) ವಿಶೇಷ ಖಾದ್ಯ ತಯಾರಿಸುತ್ತಾರೆ. ಇದಕ್ಕಾಗಿ ಲೀಟರ್‌ಗಟ್ಟಲೆ ಹಾಲು ಖರೀದಿಸುತ್ತಾರೆ. ಧಾರ್ಮಿಕ ಮುಖಂಡರಿಂದ ಹಬ್ಬ ಆಚರಣೆ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುತ್ತಿದ್ದಂತೆಯೇ ಕನಿಷ್ಠ ಐದು ಲೀಟರ್‌ ಹಾಲು ಖರೀದಿಗೆ ಮುಂದಾಗುತ್ತಾರೆ. ಇದರಿಂದಾಗಿ ಸೃಷ್ಟಿಯಾಗಲಿರುವ ಬೇಡಿಕೆಗೆ ಸ್ಪಂದಿಸುವುದಕ್ಕಾಗಿ ಹಾಗೂ ಈ ಮೂಲಕ ತಮ್ಮ ವ್ಯವಹಾರ ವೃದ್ಧಿಗಾಗಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದೊಂದಿಗೆ, ಕೆಲವು ಖಾಸಗಿ ಕಂಪನಿಯವರು, ಡೇರಿಯವರು ಸಿದ್ಧತೆ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಒಕ್ಕೂಟ ಮಾತ್ರವಲ್ಲದೇ, ಖಾಸಗಿ ಕಂಪನಿಗಳು ಕ್ರಿಯಾಶೀಲವಾಗಿವೆ. ವಿವಿಧ ಬ್ರಾಂಡ್‌ನಲ್ಲಿ ಹಾಲು ಮಾರುತ್ತಿವೆ. ಇವುಗಳು ಕೂಡ ಬೇಡಿಕೆಗೆ ತಕ್ಕಂತೆ ಹಾಲು ಪೂರೈಸುವುದಕ್ಕಾಗಿ ಸಜ್ಜಾಗಿವೆ. ಇಲ್ಲಿಂದ ನೆರೆಯ ಗೋವಾ ರಾಜ್ಯಕ್ಕೂ ಹಾಲನ್ನು ರವಾನಿಸಲಾಗುತ್ತದೆ. ಅಲ್ಲಿಂದಲೂ ಹೆಚ್ಚಿನ ಬೇಡಿಕೆ ಬಂದಿರುವುದರಿಂದ ಸಂಗ್ರಹಕ್ಕೆ ಆದ್ಯತೆ ನೀಡಿವೆ.

ADVERTISEMENT

ಪೂರ್ವ ಸಿದ್ಧತೆ: ‘ಒಕ್ಕೂಟದ ವ್ಯಾಪ್ತಿಯಲ್ಲಿ ನಿತ್ಯ 2 ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆಯಾಗುತ್ತಿದೆ. ಈದ್‌ ಉಲ್‌ ಫಿತ್ರ್‌ ಅಂಗವಾಗಿ ಜಿಲ್ಲೆ ಹಾಗೂ ಗೋವಾದಿಂದ 1.50 ಲಕ್ಷ ಲೀಟರ್‌ನಷ್ಟು ಬೇಡಿಕೆ ಬರಬಹುದೆಂಬ ನಿರೀಕ್ಷೆ ಇದೆ. ಹೋದ ವರ್ಷವೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗುರುವಾರ 1 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಿದ್ದೇವೆ. ಚಂದ್ರ ದರ್ಶನವಾಗಿ ಶುಕ್ರವಾರ ಹಬ್ಬ ಆಚರಿಸಿದರೆ ಪೂರೈಸುತ್ತವೆ. ಇಲ್ಲವೇ ಮಾರಾಟವಾಗದೆ ಉಳಿದುದನ್ನು ಪುಡಿ ಮಾಡಲು ಬಳಸುತ್ತೇವೆ. ಶನಿವಾರ ಹಬ್ಬ ಆಚರಣೆಯಾದರೆ ಆಗಿನ ಬೇಡಿಕೆಗೆ ತಕ್ಕಂತೆ ‘ನಂದಿನಿ’ ಹಾಲು ಒದಗಿಸುವುದಕ್ಕೂ ಸಿದ್ಧವಾಗಿದ್ದೇವೆ’ ಎಂದು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕ ಸೋಮಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಹಕರಿಗೆ ಅವಶ್ಯವಿರುವ ಹಾಲನ್ನು ಪೂರೈಸಲು ‘ನಂದಿನಿ’ ಏಜೆಂಟರು, ಪಾರ್ಲರ್‌ಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜೊತೆಗೆ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗಿದೆ. ಅಜಾದ್‌ ನಗರ, ಖಂಜರ್ ಗಲ್ಲಿ, ವೀರಭದ್ರ ನಗರ, ಅಶೋಕ ನಗರ, ಕ್ಯಾಂಪ್ ಪ್ರದೇಶ, ಸುಭಾಷ ನಗರ, ನಾಥಪೈ ವೃತ್ತ, ಖಾಸಬಾಗ್‌, ಸಮಾದೇವಿ ಗಲ್ಲಿ, ಟಿಳಕವಾಡಿ 2ನೇ ರೇಲ್ವೆ ಗೇಟ್ ಹೆಚ್ಚುವರಿ ಕೌಂಟರ್‌ಗಳು ಕಾರ್ಯನಿರ್ವಹಿಸಲಿವೆ ಎಂದು ಒಕ್ಕೂಟ ತಿಳಿಸಿದೆ.

‘ಈ ಹಬ್ಬದಲ್ಲಿ ಸಮಾಜದ ಬಹುತೇಕ ಕುಟುಂಬಗಳಲ್ಲಿ ಸಾಮಾನ್ಯವಾಗಿ ಶಾವಿಗೆ ಪಾಯಸವನ್ನೇ (ಶೀರ್‌ ಕುರ್ಮಾ) ಸಿದ್ಧಪಡಿಸುತ್ತಾರೆ. ಬಂಧುಗಳು, ಸ್ನೇಹಿತರಿಗೂ ಈ ಸಿಹಿಯನ್ನು ಹಂಚಿ ಹಬ್ಬದ ಸಂಭ್ರಮ ಹಂಚಿಕೊಳ್ಳುತ್ತಾರೆ. ಇದಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಬೇಕಾಗುತ್ತದೆ. ಮೂರ್ಲಾನ್ಕು ಮಂದಿ ಇರುವ ಕುಟುಂಬದವರು ಕನಿಷ್ಠವೆಂದರೂ ಐದು ಲೀಟರ್‌ ಹಾಲು ಖರೀದಿಸುತ್ತಾರೆ. ಹಬ್ಬದ ಮುನ್ನಾ ದಿನವೇ ಶೇಖರಿಸಿಟ್ಟುಕೊಳ್ಳುತ್ತಾರೆ. ಇದರಿಂದಾಗಿ ಹಾಲಿಗೆ ಬಹಳ ಮಹತ್ವ ಹಾಗೂ ಬೇಡಿಕೆ ಕಂಡುಬರುತ್ತದೆ’ ಎಂದು ಶಾಹುನಗರ ನಿವಾಸಿ ಮೆಹಬೂಬ್‌ ಮಕಂದರ್‌ ಪ್ರತಿಕ್ರಿಯಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.